
Mega Free Health Check-up Camp in Vaddarahatti
Health check-ups for 253 people; free medicines distributed

ರವಿ ಹಂಜ, ವಿಶ್ವೇಶ್ವರ ಭಟ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
ಪಾಸ್ಪೋರ್ಟ್ ಜಪ್ತಿ, ಪ್ರಕರಣದ ಸಮಗ್ರ ತನಿಖೆಗೆ ಬಸವಪರ ಸಂಘಟನೆಗಳ ಮನವಿ
ಬೆಳಗಾವಿ: ಬಸವ ಮಂಟಪ ಕೃತಿಯ ವಿವಾದಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜ ಹಾಗೂ ವಿಶ್ವವಾಣಿ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ ಹಾಗೂ ಲಿಂಗಾಯತ ಸಂಘಟನೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಬಸವಪರ ಸಂಘಟನೆಗಳ ಮುಖಂಡರು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಬಸವಣ್ಣನವರು ಹಾಗೂ ಬಸವ ತತ್ವಗಳ ಕುರಿತು ಆಕ್ಷೇಪಾರ್ಹ ಬರಹ ಮತ್ತು ವಿಚಾರಗಳನ್ನು ಪ್ರಕಟಿಸುವ ಮೂಲಕ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ಆರೋಪಿಸಿದ ಮುಖಂಡರು, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಲೇಖಕ ರವಿ ಹಂಜ ಅವರ ಪಾಸ್ಪೋರ್ಟ್ ಜಪ್ತಿ ಮಾಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ವಿದೇಶಾಂಗ ಇಲಾಖೆಯ ಅಧಿಕಾರಿಗಳ ಗಮನಕ್ಕೂ ವಿಷಯವನ್ನು ತರಬೇಕು. ಕಾನೂನುಬದ್ಧವಾಗಿ ಸಾಧ್ಯವಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂಬಂಧ ಎರಡೂ ಸಂಘಟನೆಗಳ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಪ್ರತ್ಯೇಕ ಮನವಿ ಸಲ್ಲಿಸಿ, ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು. ಬಸವಪರ ಸಂಘಟನೆಗಳ ಆಕ್ರೋಶ ಹಾಗೂ ಸಮಾಜದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಡಾ. ಶಶಿಕಾಂತ ಪಟ್ಟಣ, ಈರಣ್ಣ ದಯಣ್ಣವರ, ನ್ಯಾಯವಾದಿ ಸುನಿಲ್ ಸಾಣಿಕೊಪ್ಪ, ಶಶಿಭೂಷಣ ಪಾಟೀಲ, ಸುಧಾ ಪಾಟೀಲ, ಆಶಾಲತಾ ಸೊಗಲದ, ರತ್ನಕ್ಕ ಸಾಣಿಕೊಪ್ಪ, ಸಂಗಮೇಶ ಅರಳಿ, ಸುರೇಶ ನರಗುಂದ, ರಮೇಶ ಕಳಸನ್ನವರ, ಸದಾಶಿವ ದೇವರಮನಿ, ಶಂಕರ ಗುಡಸ, ನಾಗನಗೌಡರು, ಶ್ರೀರಂಗ ಜೋಶಿ ಸೇರಿದಂತೆ ಹಲವು ಬಸವಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.


