
Mega Free Health Check-up Camp in Vaddarahatti
Health check-ups for 253 people; free medicine distributed

ವಡ್ಡರಹಟ್ಟಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
253 ಜನರಿಗೆ ಆರೋಗ್ಯ ತಪಾಸಣೆ; ಉಚಿತ ಔಷಧ ವಿತರಣೆ
ಗಂಗಾವತಿ, ನ.21: ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ತಾಲೂಕಿನ ಮಹಾತ್ಮ ಗಾಂಧಿ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಸ್ಫೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಡಾ. ಎಸ್.ವಿ. ಸವಡಿ ಆಯುರ್ವೇದಿಕ್ ಆಸ್ಪತ್ರೆ ಹಾಗೂ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಒಟ್ಟು 253 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಅಗತ್ಯ ಚಿಕಿತ್ಸೆ ಪಡೆದರು.
ಶಿಬಿರದಲ್ಲಿ 60 ಮಹಿಳೆಯರು, ಕಿವಿ, ಮೂಗು ಮತ್ತು ಗಂಟಲು

(ಇಎನ್ಟಿ) ಸಮಸ್ಯೆ ಹೊಂದಿದ್ದ 135 ಜನರು ಹಾಗೂ ಎಲುಬು ಮತ್ತು ಕೀಲು ನೋವಿನ ಸಮಸ್ಯೆ ಹೊಂದಿದ್ದ 58 ಜನರು ತಪಾಸಣೆ ಹಾಗೂ ಚಿಕಿತ್ಸೆ ಪಡೆದರು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ ಚಲುವಾದಿ ತಿಳಿಸಿದರು.
ರಕ್ತದೊತ್ತಡ, ಮಧುಮೇಹ, ದಮ್ಮು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯರು ತಪಾಸಣೆ ನಡೆಸಿ, ರೋಗಿಗಳಿಗೆ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ನೀಡಿದರು. ಅಲ್ಲದೆ, ಅಗತ್ಯ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.
ವಡ್ಡರಹಟ್ಟಿ, ವಡ್ಡರಹಟ್ಟಿ ಕ್ಯಾಂಪ್, ಗದ್ವಾಲ್ ಕ್ಯಾಂಪ್, ರುದ್ರೇಶ್ವರ ನಗರ, ಆರಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು. ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ಗೋವಿಂದ ಸಿಂಗ್ ಜಿ, ಡಾ. ಸಂದೀಪ್ ಎಂ., ಡಾ. ಮೈತ್ರಿವ ಎಂ., ಡಾ. ಎಂ.ಡಿ. ಮುಸ್ತಕ, ಡಾ. ಕೆ. ವರ್ಷಿತ, ಡಾ. ಚಂದ್ರಕಾಂತ, ಸಿಸ್ಟರ್ ಅನ್ನಪೂರ್ಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ ಚಲುವಾದಿ, ಬಿಲ್ ಕಲೆಕ್ಟರ್ ಆಂಜನೇಯ ಹಾಗೂ ವಿಆರ್ಡಬ್ಲ್ಯೂ ಶೈಲಶ್ರೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


