
Allegation of insulting Basava: 'Vishwavani' columnist Ravi Hanj taken into custody at Kochi airport

ಬಸವ ನಿಂದನೆ ಆರೋಪ: ವಿಶ್ವವಾಣಿ ಅಂಕಣಕಾರ ರವಿ ಹಂಜ್ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ
ಲುಕ್ಔಟ್ ನೋಟಿಸ್ ಜಾರಿ ಹಿನ್ನೆಲೆ; ಬೆಳಗಾವಿ ಪೊಲೀಸರಿಂದ ಮುಂದಿನ ಕಾನೂನು ಪ್ರಕ್ರಿಯೆ
ಗಂಗಾವತಿ: ಬಸವಣ್ಣನವರು ಹಾಗೂ ಬಸವ ತತ್ವಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ವಿಶ್ವವಾಣಿ ಅಂಕಣಕಾರ ರವಿ ಹಂಜ್ ಅವರನ್ನು ಶನಿವಾರ ಬೆಳಗ್ಗೆ ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಸವಣ್ಣನವರ ಕುರಿತು ನಿಂದನಾತ್ಮಕ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ರವಿ ಹಂಜ್ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಾರ್ಕೆಟ್ ಠಾಣೆಯ ಪೊಲೀಸರು ಹಂಜ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರವಿ ಹಂಜ್ ಅವರನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ತಡೆದು ವಶಕ್ಕೆ ಪಡೆದು, ಈ ಕುರಿತು ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ ಎಂದು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಸವ ಮೀಡಿಯಾಗೆ ತಿಳಿಸಿದ್ದಾರೆ.
ಸದ್ಯ ಬೆಳಗಾವಿ ಪೊಲೀಸರು ರವಿ ಹಂಜ್ ಅವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ಚಿಕಾಗೋಗೆ ತೆರಳಿರುವುದಾಗಿ ಫೇಸ್ಬುಕ್ನಲ್ಲಿ ಹೇಳಿಕೆ!
ರವಿ ಹಂಜ್ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಸವ ಅನುಯಾಯಿಗಳು ಪೊಲೀಸ್ ದೂರು ದಾಖಲಿಸಿ ಪ್ರತಿಭಟನೆಗೆ ಮುಂದಾದ ಬೆನ್ನಲ್ಲೇ, ತಾವು ಅಮೆರಿಕದ ಚಿಕಾಗೋ ನಗರಕ್ಕೆ ಮರಳಿರುವುದಾಗಿ ಮಂಗಳವಾರ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಆದರೆ ಇದೀಗ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಅವರು ಪೊಲೀಸರ ವಶಕ್ಕೆ ಸಿಕ್ಕಿರುವುದು ಈ ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ.
ಬಸವ ಅನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿರುವ ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ಹಂತದಲ್ಲಿ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.


