
Legal adoption is the right way to have children: Justice Mahantesh Daragad


ಕಾನೂನುಬದ್ಧ ದತ್ತು ಸ್ವೀಕಾರವೇ ಮಕ್ಕಳನ್ನು ಪಡೆಯಲು ಸರಿಯಾದ ಮಾರ್ಗ: ನ್ಯಾ. ಮಹಾಂತೇಶ ದರಗದ

ದತ್ತು ಸ್ವೀಕಾರದ ಕಾನೂನು ಪ್ರಕ್ರಿಯೆ ಕುರಿತು ಜಾಗೃತಿ – ಪ್ರತಿಜ್ಞಾ ವಿಧಿ ಬೋಧನೆ
ಕೊಪ್ಪಳ: ಪೋಷಕರಾಗಲು ಅಡ್ಡದಾರಿಗಳಿಲ್ಲ. ಮಕ್ಕಳನ್ನು ದತ್ತು ಪಡೆಯಲು ಕಾನೂನುಬದ್ಧ ದತ್ತು ಸ್ವೀಕಾರವೇ ಏಕೈಕ ಸರಿಯಾದ ಮಾರ್ಗವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಮಹಾಂತೇಶ ಎಸ್. ದರಗದ ಹೇಳಿದರು.
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ನವೆಂಬರ್ 11ರಂದು ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರವು ನವೆಂಬರ್ ತಿಂಗಳನ್ನು ರಾಷ್ಟ್ರೀಯ ದತ್ತು ಮಾಸಾಚರಣೆಯನ್ನಾಗಿ ಘೋಷಿಸಿದ್ದು, 2026ನೇ ಸಾಲಿನಲ್ಲಿ “ಪೋಷಕರಾಗಲು ಅಡ್ಡದಾರಿಗಳಿಲ್ಲ – ಕಾನೂನುಬದ್ಧ ದತ್ತು ಸ್ವೀಕಾರ ಒಂದೇ ಸರಿಯಾದ ಮಾರ್ಗ” ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದತ್ತು ಸ್ವೀಕಾರದ ಕಾನೂನು ಪ್ರಕ್ರಿಯೆ, ನಿಯಮಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಪ್ರತಿಜ್ಞಾ ವಿಧಿ ಬೋಧನೆ:
ಕಾನೂನುಬದ್ಧ ದತ್ತು ಸ್ವೀಕಾರದ ಮಹತ್ವವನ್ನು ಜನರಿಗೆ ತಿಳಿಸುವ ಹಾಗೂ ಅಕ್ರಮ ದತ್ತು ಪ್ರಕ್ರಿಯೆಗಳನ್ನು ತಡೆಯುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಕಾನೂನುಬದ್ಧ ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ, ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿರೇಶ್ ಕುಮಾರ್, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.
ಕಲ್ಯಾಣಸಿರಿ ವೆಬ್ ನ್ಯೂಸ್ | ಗಂಗಾವತಿ



