
Capacity-Building Meeting: Expedite the Registration and Safety Inspection of Residential Schools, Colleges, and Hostels – Deputy Commissioner Dr. Suresh Itnal

ಸಾಮರ್ಥ್ಯಾಭಿವೃದ್ಧಿ ಸಭೆ:

ವಸತಿ ಸಹಿತ ಶಾಲಾ, ಕಾಲೇಜು, ವಸತಿ ನಿಲಯಗಳ ನೋಂದಣಿ ಮತ್ತು ಸುರಕ್ಷತಾ ಪರಿಶೀಲನೆ ಚುರುಕುಗೊಳಿಸಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ
ಕೊಪ್ಪಳ, ನ. 12 : ಜಿಲ್ಲೆಯ ವಸತಿ ಸಹಿತ ಶಾಲಾ, ಕಾಲೇಜು ಹಾಗೂ ವಸತಿ ನಿಲಯಗಳ ನೋಂದಣಿ ಮತ್ತು ಸುರಕ್ಷತಾ ಪರಿಶೀಲನೆ ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಸರ್ಕಾರೇತರ, ಅನುದಾನಿತ, ಅನುದಾನರಹಿತ ವಸತಿ ಸಹಿತ ಶಾಲಾ, ಕಾಲೇಜು ಹಾಗೂ ವಸತಿ ನಿಲಯಗಳ ನೋಂದಣಿ ಮತ್ತು ಮಕ್ಕಳ ಸುರಕ್ಷತೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ (ನ. 12ರಂದು) ಹಮ್ಮಿಕೊಂಡಿದ್ದ ಸಾಮರ್ಥ್ಯಾಭಿವೃದ್ಧಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರವು ಮಕ್ಕಳ ರಕ್ಷಣಾ ನೀತಿ-2016ರ ಅನುಷ್ಠಾನವನ್ನು ಕ್ರಮಬದ್ಧಗೊಳಿಸುವ ನಿಟ್ಟಿನಲ್ಲಿ 6ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ವಿವಿಧ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳು, ವಸತಿ ಶಾಲೆ-ಕಾಲೇಜುಗಳು, ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಹಾಗೂ ಇತರೆ ವಸತಿ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಅವರಿಗೆ ಕಲ್ಪಿಸಿರುವ ಸೌಲಭ್ಯಗಳ ಮೇಲ್ವಿಚಾರಣೆಗಾಗಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಅದರನ್ವಯ ಸಂಸ್ಥೆಗಳ ನೋಂದಣಿ ಕಡ್ಡಾಯವಾಗಿದೆ ಎಂದರು.
ಮಕ್ಕಳ ಸುರಕ್ಷತೆ ಹಾಗೂ ಅವರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಮೇಲ್ವಿಚಾರಣೆಯ ಉದ್ದೇಶದಿಂದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ವಸತಿ ಸಹಿತ ಶಾಲಾ-ಕಾಲೇಜುಗಳು, ವಸತಿ ನಿಲಯಗಳು, ತರಬೇತಿ ಕೇಂದ್ರಗಳು ಮತ್ತು ವಸತಿಯುತ ಧಾರ್ಮಿಕ ಶೈಕ್ಷಣಿಕ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಿದ ಸಂಸ್ಥೆಗಳನ್ನು 15 ದಿನಗಳ ಒಳಗಾಗಿ ಕೂಲಂಕಷವಾಗಿ ಪರಿಶೀಲಿಸಿ, ನೋಂದಣಿಗೆ ಅರ್ಹರಿರುವ ಸಂಸ್ಥೆಗಳ ನೋಂದಣಿಗೆ ಪ್ರಸ್ತಾವನೆ ಸಲ್ಲಿಸಬೇಕು. ಒಂದು ವೇಳೆ ಅನರ್ಹವಿದ್ದಲ್ಲಿ ಸುಧಾರಣೆಗೆ ಕಾಲಾವಕಾಶ ನೀಡಿ, ನೋಂದಣಿಗೆ ಮರು ಪ್ರಸ್ತಾವನೆ ಸಲ್ಲಿಸಲು ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ತಾಲೂಕು ಮಟ್ಟದಲ್ಲಿ ರಚನೆಯಾಗಿರುವ ಮೇಲ್ವಿಚಾರಣಾ ಮತ್ತು ಸಮನ್ವಯ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳಾದ ತಹಶೀಲ್ದಾರರು, ತಾ.ಪಂ. ಇಒ, ಬಿಇಒ, ಸಿಡಿಪಿಒ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು, ಡಿಡಿಪಿಯು ನಾಮನಿರ್ದೇಶಿತ ಪ್ರಾಂಶುಪಾಲರು, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ (ಟಿಎಚ್ಒ) ಹಾಗೂ ಅರ್ಜಿದಾರರಲ್ಲದ ಸ್ವಯಂಸೇವಾ ಸಂಸ್ಥೆಗಳ (ಎನ್ಜಿಒ) ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿಯು ಪರಿಶೀಲನೆ ನಡೆಸಬೇಕು. ಸಮಿತಿಯ ಮುಖ್ಯಸ್ಥರಾದ ತಹಶೀಲ್ದಾರರು, ಸಿಡಿಪಿಒ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಇದಕ್ಕಾಗಿ ಕೆಳಹಂತದ ಸಿಬ್ಬಂದಿಯನ್ನು ನಿಯೋಜಿಸುವಂತಿಲ್ಲ ಎಂದು ಡಿಸಿ ಎಚ್ಚರಿಸಿದರು.
ಕಟ್ಟಡದ ಸುರಕ್ಷತೆ, ವಿದ್ಯುತ್ ಮತ್ತು ಅಗ್ನಿಶಾಮಕ ಸುರಕ್ಷತೆ, ಸಾರಿಗೆ ವ್ಯವಸ್ಥೆ, ವಿಶೇಷ ಚೇತನ ಮಕ್ಕಳಿಗೆ ಇರುವ ಸೌಲಭ್ಯಗಳು, ದೌರ್ಜನ್ಯ ತಡೆ (ಸಲಹಾ ಪೆಟ್ಟಿಗೆ) ಹಾಗೂ ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಸುರಕ್ಷತಾ ಕ್ರಮಗಳನ್ನು (ಅನೆಕ್ಸರ್-1 ಮತ್ತು 3ರ ಅನ್ವಯ) ಕಡ್ಡಾಯವಾಗಿ ಪರಿಶೀಲಿಸಬೇಕು. ಸಂಸ್ಥೆಯ ಪರಿಶೀಲನೆ ವೇಳೆ ಜಿಯೋ-ಟ್ಯಾಗ್ ಫೋಟೋಗಳು ಹಾಗೂ ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿ ದಾಖಲಿಸಿಕೊಳ್ಳಬೇಕು. ಸುರಕ್ಷತಾ ನಿಯಮಗಳು ಸರ್ಕಾರಿ ಮತ್ತು ಖಾಸಗಿ ಎರಡೂ ಸಂಸ್ಥೆಗಳಿಗೆ ಸಮಾನವಾಗಿ ಅನ್ವಯವಾಗುತ್ತವೆ. ಇನ್ನೂ ಅರ್ಜಿ ಸಲ್ಲಿಸದಿರುವ ಸರ್ಕಾರಿ ವಸತಿ ನಿಲಯಗಳು ತಕ್ಷಣವೇ ಅರ್ಜಿ ಸಲ್ಲಿಸಬೇಕು; ಒಂದು ವೇಳೆ ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿದರು.
ಕೋಚಿಂಗ್ ಸೆಂಟರ್ಗಳಿಗೂ ವಸತಿ ನಿಲಯಗಳಿಗೂ ವ್ಯತ್ಯಾಸವಿದ್ದು, ಈ ಸಮಿತಿಯು ಕೇವಲ ವಸತಿ ನಿಲಯಗಳ ನೋಂದಣಿ ಮತ್ತು ಮಕ್ಕಳ ಸುರಕ್ಷತೆಗೆ ಮಾತ್ರ ಸೀಮಿತವಾಗಿರುತ್ತದೆ. ಕೋಚಿಂಗ್ ಸೆಂಟರ್ಗಳಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದ ಅನುಮತಿ ಕಡ್ಡಾಯವೆಂಬ ಷರತ್ತನ್ನು ನಮೂದಿಸಬೇಕು. ಮುಂದಿನ 10 ದಿನಗಳಲ್ಲಿ ಪರಿಶೀಲನಾ ಪ್ರಗತಿಯ ವರದಿಯನ್ನು ನೀಡಬೇಕು ಹಾಗೂ 15 ದಿನಗಳ ನಂತರ ಮತ್ತೆ ಸಭೆ ನಡೆಸಿ ಅರ್ಜಿಗಳ ವಿಲೇವಾರಿ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಮಾಜಿ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಅಜ್ಜಪ್ಪ ಸೊಗಲದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಅಮರೇಶ ಹಾವಿನ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಜಶೇಖರ ಪಾಟೀಲ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಸೇರಿದಂತೆ ತಹಶೀಲ್ದಾರರು, ಸಿಡಿಪಿಒಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



