ಪರಿಸರಸ್ನೇಹಿ, ಸುರಕ್ಷಿತ ದೀಪಾವಳಿ ಆಚರಣೆಗೆ ಕೊಪ್ಪಳ ಜಿಲ್ಲಾಡಳಿತದ ಮಾರ್ಗಸೂಚಿ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

Koppal District Administration Guideline for Eco-Friendly, Safe Diwali Celebrations

ಪರಿಸರಸ್ನೇಹಿ, ಸುರಕ್ಷಿತ ದೀಪಾವಳಿ ಆಚರಣೆಗೆ ಕೊಪ್ಪಳ ಜಿಲ್ಲಾಡಳಿತದ ಮಾರ್ಗಸೂಚಿ

ಜಾಹೀರಾತು
ಜಾಹೀರಾತು



ಕೊಪ್ಪಳ, ನ. 09 : ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಬೆಳಕಿನ ಹಬ್ಬ ದೀಪಾವಳಿಯನ್ನು ಯಾವುದೇ ಅನಾಹುತಗಳಾಗದಂತೆ ಅತ್ಯಂತ ಸುರಕ್ಷಿತವಾಗಿ, ಜಾಗರೂಕತೆಯಿಂದ ಮತ್ತು ಪರಿಸರಸ್ನೇಹಿಯಾಗಿ ಆಚರಿಸಲು ಕೊಪ್ಪಳ ಜಿಲ್ಲಾಡಳಿತವು ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್.ಜಿ.ಟಿ) ಹಾಗೂ ರಾಜ್ಯ ಸರ್ಕಾರದ ಸುತ್ತೋಲೆಯ ಆದೇಶಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಪಟಾಕಿ ಸಿಡಿಸುವ ಸಮಯದಲ್ಲಿ ಸಂಭವಿಸುವ ದುರಂತಗಳಿಂದ ಹಬ್ಬದ ಸಡಗರಕ್ಕೆ ಭಂಗ ಬರದಂತೆ ತಡೆಯಲು ಜಿಲ್ಲಾಡಳಿತ ರೂಪಿಸಿರುವ ಪ್ರಮುಖ ನಿಯಮಗಳು ಮತ್ತು ಮುಂಜಾಗ್ರತಾ ಕ್ರಮಗಳ ವಿವರಗಳು ಇಂತಿವೆ.
*ಹಸಿರು ಪಟಾಕಿಗಳ ಬಳಕೆ ಕಡ್ಡಾಯ:* ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ ಸಿ.ಎಸ್.ಐ.ಆರ್ – ಎನ್.ಇ.ಇ‌ಆರ್.ಐ ಸಂಸ್ಥೆಯು ಶಿಫಾರಸು ಮಾಡಿರುವ ಪರಿಸರಸ್ನೇಹಿ ಹಸಿರು ಪಟಾಕಿಗಳನ್ನು (ಗ್ರೀನ್ ಕ್ರಾಕರ್ಸ್) ಮಾತ್ರ ಸಾರ್ವಜನಿಕರು ಬಳಸಬೇಕು. ಸಾರ್ವಜನಿಕರು ಖರೀದಿಸುವ ಪ್ರತಿಯೊಂದು ಹಸಿರು ಪಟಾಕಿಯ ಪ್ಯಾಕೆಟ್ ಮೇಲೆಯೂ ಅಧಿಕೃತ ಲಾಂಛನ ಹಾಗೂ ಕ್ಯೂ.ಆರ್. ಕೋಡ್ ಇರುವುದು ಕಡ್ಡಾಯವಾಗಿದೆ. ಈ ಅಧಿಕೃತ ಗುರುತುಗಳಿಲ್ಲದ ಯಾವುದೇ ಪಟಾಕಿಯನ್ನು ಹಸಿರು ಪಟಾಕಿ ಎಂದು ಪರಿಗಣಿಸದೆ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
*ಪಟಾಕಿ ಸಿಡಿಸಲು ಸಮಯದ ಮಿತಿ:* ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ರಾತ್ರಿ 08:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದೆ. ಈ ನಿಗದಿತ ಅವಧಿಯನ್ನು ಹೊರತುಪಡಿಸಿ ಇತರೆ ಯಾವುದೇ ಸಮಯದಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
*ಅಕ್ರಮ ದಾಸ್ತಾನು ಮತ್ತು ಮಾರಾಟದ ವಿರುದ್ಧ ಕ್ರಿಮಿನಲ್ ಕ್ರಮ:* ಹಸಿರು ಪಟಾಕಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಬಗೆಯ ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗೋದಾಮುಗಳಲ್ಲಿ ನಿಷೇಧಿತ ಪಟಾಕಿಗಳನ್ನು ಸಂಗ್ರಹಿಸಿಡುವುದು ಕಂಡುಬಂದರೆ ಅಂತಹ ಗೋದಾಮನ್ನು ತಕ್ಷಣವೇ ಸೀಜ್ ಮಾಡಿ, ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ.
*ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ:* ಹೊರರಾಜ್ಯಗಳಿಂದ ರಾಜ್ಯದೊಳಗೆ ಅನಧಿಕೃತವಾಗಿ ನಿಷೇಧಿತ ಪಟಾಕಿಗಳನ್ನು ಸಾಗಾಟ ಮಾಡುವುದನ್ನು ತಡೆಯಲು ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಸಾರಿಗೆ ಇಲಾಖೆಯ ವತಿಯಿಂದ ಗಡಿ ತನಿಖಾ ಠಾಣೆಗಳಲ್ಲಿ ಹದ್ದಿನ ಕಣ್ಣಿಡಲಾಗಿದ್ದು, ಅಕ್ರಮ ಪಟಾಕಿಗಳು ಮತ್ತು ಅವುಗಳನ್ನು ಸಾಗಿಸುವ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತದೆ.
*ನಿಶ್ಯಬ್ದ ವಲಯಗಳಲ್ಲಿ ಸಂಪೂರ್ಣ ನಿರ್ಬಂಧ:* ಸ್ಥಳೀಯ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ನಿಶ್ಯಬ್ದ ವಲಯ (Silence Zone) ವ್ಯಾಪ್ತಿಯಲ್ಲಿ ಹಾಗೂ ಸರ್ಕಾರ ಘೋಷಿಸಿರುವ ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ.
*ಸಾರ್ವಜನಿಕ ರಸ್ತೆಗಳಲ್ಲಿ ನಿಷೇಧ:*ಸಾರ್ವಜನಿಕರು ಹಾಗೂ ವಾಹನಗಳು ಓಡಾಡುವ ರಸ್ತೆಗಳ ಮೇಲೆ ಅಥವಾ ರಸ್ತೆ ಮಧ್ಯದಲ್ಲಿ ಪಟಾಕಿ ಸಿಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರಸ್ತೆ ಬಳಕೆದಾರರಿಗೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು.
*ಮಕ್ಕಳು, ವೃದ್ಧರು ಹಾಗೂ ಮೂಕ ಪ್ರಾಣಿಗಳ ರಕ್ಷಣೆ:* ಪಟಾಕಿ ಸಿಡಿಸುವಾಗ ಹಿರಿಯ ನಾಗರಿಕರು, ರೋಗಿಗಳು, ಮಕ್ಕಳು ಹಾಗೂ ಪ್ರಾಣಿ-ಪಕ್ಷಿಗಳಿಗೆ ಯಾವುದೇ ರೀತಿಯ ಹಿಂಸೆ ಅಥವಾ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
*ಮಕ್ಕಳ ಸುರಕ್ಷತೆ ಮತ್ತು ಜಾಗರೂಕತೆ:* ಪಟಾಕಿಗಳು ವ್ಯತಿರಿಕ್ತ ಪ್ರತಿಕ್ರಿಯೆಗಳಿಂದ ತಕ್ಷಣವೇ ಸಿಡಿದು ಗಾಯಗಳಾಗುವ ಅಪಾಯವಿರುತ್ತದೆ. ಆದ್ದರಿಂದ ಚಿಕ್ಕ ಮಕ್ಕಳಿಗೆ ಪಟಾಕಿಗಳನ್ನು ಒಂಟಿಯಾಗಿ ಬಳಸಲು ನೀಡಬಾರದು; ಬದಲಿಗೆ ಹಿರಿಯರ ನೇರ ಮೇಲ್ವಿಚಾರಣೆಯಲ್ಲಿಯೇ ಸೂಕ್ತ ರಕ್ಷಣಾ ಕ್ರಮಗಳೊಂದಿಗೆ ಪಟಾಕಿಗಳನ್ನು ಸಿಡಿಸಬೇಕು.
*ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ:* ಹಬ್ಬದ ಸಂದರ್ಭದಲ್ಲಿ ಸಂಗ್ರಹವಾಗುವ ಪಟಾಕಿಯ ಕಾಗದದ ಅವಶೇಷಗಳು ಮತ್ತು ಇತರ ಘನತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ, ಸ್ಥಳೀಯ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳು ವೈಜ್ಞಾನಿಕವಾಗಿ ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು.
*ಸ್ಥಳೀಯ ಮಣ್ಣಿನ ಹಣತೆಗಳಿಗೆ ಪ್ರೋತ್ಸಾಹ:* ನಮ್ಮ ಪೂರ್ವಿಕರ ಪರಂಪರೆಯಂತೆ ಮಣ್ಣಿನ ಹಣತೆಗಳಲ್ಲಿ ದೀಪಗಳನ್ನು ಬೆಳಗಿಸಿ ಹಬ್ಬವನ್ನು ಆಚರಿಸಬೇಕು. ಇದರಿಂದ ಸ್ಥಳೀಯ ಕುಂಬಾರರು ಮತ್ತು ಹಣತೆ ತಯಾರಕರಿಗೆ ಆರ್ಥಿಕ ಉತ್ತೇಜನ ಹಾಗೂ ಉದ್ಯೋಗಾವಕಾಶ ದೊರೆತಂತಾಗುತ್ತದೆ ಮತ್ತು ಪರಿಸರ ಸಂರಕ್ಷಣೆಗೂ ನೆರವಾಗುತ್ತದೆ.
*ತುರ್ತು ಸಂದರ್ಭಗಳಿಗಾಗಿ ಉಚಿತ ಸಹಾಯವಾಣಿ ಸಂಖ್ಯೆಗಳು:* ದೀಪಾವಳಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಗ್ನಿ ಅವಘಡ, ಸುಟ್ಟ ಗಾಯಗಳು ಅಥವಾ ಇತರ ತುರ್ತು ಪರಿಸ್ಥಿತಿಗಳು ಎದುರಾದಲ್ಲಿ ಸಾರ್ವಜನಿಕರು ತಕ್ಷಣವೇ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದ್ದು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ 101, ಆರೋಗ್ಯ ತುರ್ತು ಸೇವೆ (ಆಂಬ್ಯುಲೆನ್ಸ್)ಗೆ 108 ಹಾಗೂ ಪೊಲೀಸ್ ತುರ್ತು ಸಹಾಯವಾಣಿ 112ಗೆ ಕರೆ ಮಾಡಬಹುದು.
ಸಾರ್ವಜನಿಕರು ಯಾವುದೇ ರೀತಿಯ ಅಜಾಗರೂಕತೆ ಅಥವಾ ಬೇಜವಾಬ್ದಾರಿತನ ತೋರದೆ, ಮುನ್ನೆಚ್ಚರಿಕೆಯೊಂದಿಗೆ ದೀಪಗಳನ್ನು ಬೆಳಗಿಸಿ ಸುರಕ್ಷಿತವಾಗಿ ಹಾಗೂ ಸಂಭ್ರಮದಿಂದ ಹಬ್ಬ ಆಚರಿಸುವಂತೆ ಕೊಪ್ಪಳ ಜಿಲ್ಲಾಡಳಿತವು ಶುಭ ಕೋರಿದೆ.

Total Views: 0
ಜಾಹೀರಾತು
Share This Article
Leave a Comment