ಕನಕಗಿರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

 

The excitement of the Kannada Literary Conference in Kanakagiri
 

 

ಕನಕಗಿರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ

ಜಾಹೀರಾತು
ಜಾಹೀರಾತು

ರಾಜಬೀದಿಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಅಬ್ಬರಕ್ಕೆ ಜನರು ಫಿದಾ!


ಕನಕಗಿರಿ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ ನಡೆದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ನಾಡು-ನುಡಿಯ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ಜರುಗಿತು. ಸಮ್ಮೇಳನದ ಅಂಗವಾಗಿ ಇಡೀ ಕನಕಗಿರಿ ಪಟ್ಟಣವೇ ಕೆಂಪು-ಹಳದಿ ಬಣ್ಣದಿಂದ ಕಂಗೊಳಿಸಿದ್ದು, ಕನ್ನಡದ ಹಬ್ಬಕ್ಕೆ ಸಾಕ್ಷಿಯಾಯಿತು.
ಬೆಳಿಗ್ಗೆ ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದಿಂದ ಆರಂಭಗೊಂಡ ಭವ್ಯ ಮೆರವಣಿಗೆ ರಾಜಬೀದಿಯಲ್ಲಿ ಸಾಗುತ್ತಿದ್ದಂತೆ ಪಟ್ಟಣದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೋಲಾಟ ಹಾಗೂ ತಮಟೆ ವಾದನ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿ ಕನ್ನಡದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದವು.

 


ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿದ ಕಲಾವಿದರು
ಹಳದಿ ಪೇಟ, ಕೆಂಪು-ಹಳದಿ ಶಾಲು ಧರಿಸಿ ಡೊಳ್ಳುಗಳನ್ನು ಕಟ್ಟಿಕೊಂಡ ಮಹಿಳೆಯರು ಹಾಗೂ ಪುರುಷ ಕಲಾವಿದರು ಲಯಬದ್ಧವಾಗಿ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆದರು. ಡೊಳ್ಳಿನ ನಾದಕ್ಕೆ ತಕ್ಕಂತೆ ಕುಣಿಯುತ್ತಾ ಕನ್ನಡ ಬಾವುಟಗಳನ್ನು ಹಾರಿಸುತ್ತ ಸಾಗಿದ ಕಲಾವಿದರನ್ನು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ವೀರಗಾಸೆಯ ವೀರಾವೇಶದ ಹೆಜ್ಜೆಗಳು ಹಾಗೂ ಡೊಳ್ಳು ಕುಣಿತದ ಭರ್ಜರಿ ಪ್ರದರ್ಶನ ರಾಜಬೀದಿಯಲ್ಲಿ ಸಂಭ್ರಮದ ಅಲೆ ಎಬ್ಬಿಸಿತು. ‘ಜೈ ಕರ್ನಾಟಕ ಮಾತೆ’, ‘ಸಿರಿಗನ್ನಡಂ ಗೆಲ್ಗೆ’ ಎಂಬ ಘೋಷಣೆಗಳು ಮೊಳಗಿದವು.
ಸಾಹಿತ್ಯ, ಸಂಸ್ಕೃತಿಯ ಸಂಗಮ
ಮೆರವಣಿಗೆಯ ನಂತರ ನಡೆದ ಸಮ್ಮೇಳನದಲ್ಲಿ ಕವಿಗೋಷ್ಠಿ, ಸಾಹಿತ್ಯ ಗೋಷ್ಠಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತಾಲೂಕಿನ ಹಿರಿಯ ಸಾಹಿತಿಗಳು, ಕವಿಗಳು, ಲೇಖಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯದ ಮಹತ್ವವನ್ನು ಸಾರಿದರು.
ಕನ್ನಡ ಸಾಹಿತ್ಯ ಸಮ್ಮೇಳನಗಳು ನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ವೇದಿಕೆಗಳಾಗಿವೆ. ಡೊಳ್ಳು ಕುಣಿತ, ವೀರಗಾಸೆಯಂತಹ ಜಾನಪದ ಕಲೆಗಳು ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಸಮ್ಮೇಳನವನ್ನು ಯಶಸ್ವಿಗೊಳಿಸಲು ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಆಡಳಿತ, ಮುಸಲಾಪುರ ಗ್ರಾಮ ಪಂಚಾಯಿತಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳು ಸಹಕಾರ ನೀಡಿದ್ದವು.
ವರದಿ: ಶರಣಯ್ಯ ಹಿರೇಮಠ

Total Views: 0
ಜಾಹೀರಾತು
Share This Article
Leave a Comment