

Lokayukta registers suo motu case in Koppal district too: Justice B.S. Patil

ಕೊಪ್ಪಳ ಜಿಲ್ಲೆಯಲ್ಲೂ ಲೋಕಾಯುಕ್ತದಿಂದ ಸುಮೋಟೊ ಕೇಸ್ ದಾಖಲು: ನ್ಯಾಯಮೂರ್ತಿ ಬಿ.ಎಸ್. ಪಾಟೀಲ

ಕೊಪ್ಪಳ, ನ. 06 : ಕೊಪ್ಪಳ ಜಿಲ್ಲೆಯಲ್ಲಿ ಲೋಕಾಯುಕ್ತದಿಂದ ನಡೆದ ದಾಳಿ ವೇಳೆಯಲ್ಲಿ ಕೆಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತ ಸಂಸ್ಥೆಯಿಂದ ಸುಮೊಟೊ ಕೇಸ್
ದಾಖಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಹೇಳಿದರು.
ಜಿಲ್ಲಾ ಪಂಚಾಯಿತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನವೆಂಬರ್ 6ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೊಪ್ಪಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕೈಗೊಂಡ ಪ್ರವಾಸದ ವೇಳೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ತಹಶೀಲ್ದಾರ್ ಕಚೇರಿ, ಆರ್‌ಟಿಒ, ಗ್ರಾಮ ಪಂಚಾಯಿತಿ, ವಿದ್ಯಾರ್ಥಿನಿಲಯಗಳು ಹಾಗೂ ಶಾಲೆಗಳು ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ಮೇಲೆ ಆಕಸ್ಮಿಕ ದಾಳಿ ಕಾರ್ಯಚರಣೆ ನಡೆಸಲಾಗಿದೆ. ಇದಕ್ಕಾಗಿ ಸುಮಾರು 65 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡಗಳನ್ನು ರಚಿಸಿ, ನಾಲ್ಕು ಜಿಲ್ಲೆಗಳಲ್ಲಿ ಸತತ ನಾಲ್ಕು ದಿನಗಳ ಕಾಲ ಕಾರ್ಯಚರಣೆ ನಡೆಸಲಾಗಿದೆ ಎಂದರು.
ಶಾಲೆಗಳ ಮೇಲ್ಚಾವಣಿ ಕುಸಿತ, ಮೂಲಸೌಕರ್ಯ ಕೊರತೆಗಳಂತಹ ಬೇರೆ ಬೇರೆ ವಿಷಯಗಳ ಬಗ್ಗೆ ಮಾಧ್ಯಮಗಳ ವರದಿ ಮತ್ತು ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ (ಸುಮೋಟೊ) ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಪ್ರಕರಣಗಳ ವಿಲೇವಾರಿಯಲ್ಲಿ ಆಗುವ ವಿಳಂಬ ತಪ್ಪಿಸಲು ಲೋಕಾಯುಕ್ತ ಸಂಸ್ಥೆಯು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ನಾಗರಿಕರ ಕುಂದುಕೊರತೆಗಳಿಗೆ ಸ್ಪಂದಿಸಿ ಲೋಕಾಯುಕ್ತ ಸಂಸ್ಥೆಯು ಸದಾ ಕಾಲ ಸಾರ್ವಜನಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಲೋಕಾಯುಕ್ತ ಸಂಸ್ಥೆಯಲ್ಲಿರುವ ಸುಮಾರು 30 ರಿಂದ 35 ನ್ಯಾಯಾಂಗ ಅಧಿಕಾರಿಗಳು ಹಾಗೂ ಅವರ ಸಿಬ್ಬಂದಿ ಶನಿವಾರ, ಭಾನುವಾರ ಸೇರಿದಂತೆ ರಜಾ ದಿನಗಳಲ್ಲೂ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆ ದಿನಗಳಲ್ಲೂ ಕರ್ತವ್ಯ ನಿರ್ವಹಿಸುವ ಮೂಲಕ ಸಂಸ್ಥೆಯು ಸಾವಿರಾರು ಪ್ರಕರಣಗಳನ್ನು ವಿಲೇವಾರಿ ಮಾಡಿದೆ. ಮಾನವ ಸಂಪನ್ಮೂಲದ ಕೊರತೆಯ ನಡುವೆಯೂ ಲೋಕಾಯುಕ್ತ ಸಂಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಥೆಯಲ್ಲಿ
ಅಧಿಕಾರಿಗಳು ಸಿಬ್ಬಂದಿ ಇಲ್ಲ ಎಂದು ಕಾರ್ಯಚರಣೆಯನ್ನು ನಿಲ್ಲಿಸಿಲ್ಲ; ನಿಲ್ಲಿಸುವುದಿಲ್ಲ ಎಂದರು. ಹೊಸದಾಗಿ
ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿ ಭರ್ತಿಗು ಸಹ ಒತ್ತು ನೀಡುತ್ತಿದ್ದೇವೆ ಎಂದರು.
ತಾವು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ವೇಳೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೇ ಈಗ ದಾಖಲಾಗುವ ಪ್ರಕರಣಗಳ ಸಂಖ್ಯೆ ದುಪ್ಪಟ್ಟಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ದಿನೇದಿನೆ ದಾಖಲಾಗುವ ದೂರುಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಜನತೆ ರೋಷಿಹೋಗಿ
ಲೋಕಾಯುಕ್ತ ಸಂಸ್ಥೆಯ ಬಾಗಿಲು ತಟ್ಟದಂತೆ, ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಜನತೆಗೆ ಸ್ಪಂದಿಸಬೇಕು ಎಂದು ತಿಳಿಸಿದರು.
*ಭ್ರಷ್ಟಾಚಾರ ಕಡಿವಾಣಕ್ಕೆ ಕ್ರಮ:* ಯಾವುದೇ ಇಲಾಖೆಗಳಲ್ಲಿ ಕರ್ತವ್ಯ ಲೋಪ, ದುರಾಡಳಿತ ಹಾಗೂ ಭ್ರಷ್ಟಾಚಾರ ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ವೈಯಕ್ತಿಕ ಹೊಣೆಗಾರಿಕೆ ನಿಗದಿಪಡಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೌರವಾನ್ವಿತ ಲೋಕಾಯುಕ್ತರು ಇದೆ ವೇಳೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಕಾರ್ಯದರ್ಶಿಗಳಾದ ಶ್ರೀನಾಥ, ವಿಚಾರಣಾ ವಿಭಾಗದ ಅಪರ ನಿಬಂಧಕರಾದ ಕೃಷ್ಣಯ್ಯ, ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ, ರಾಯಚೂರು, ಕೊಪ್ಪಳ ಲೋಕಾಯುಕ್ತ ಎಸ್ಪಿ ಸಿದ್ದರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಿರ್ಮಲಾ, ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಇದ್ದರು.



