

ಡಂಬಳ ಶಾಲೆಯಲ್ಲಿ ಸುರಕ್ಷಿತ ಬಚಪನ್ ಅಭಿಯಾನ ಅರಿವು ಕಾರ್ಯಕ್ರಮ
ಮಕ್ಕಳ ಹಕ್ಕು, ಸುರಕ್ಷತೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಜಾಗೃತಿ
Surakshita Bachapan Abhiyan' Awareness Program at Dumbala School


ಮುಂಡರಗಿ, ಅ.28: ತಾಲೂಕಿನ ಡಂಬಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ (ಡಿ.ಪಿ.ಇ.ಪಿ.) ಶಾಲೆಯಲ್ಲಿ **‘ಸುರಕ್ಷಿತ ಬಚಪನ್ ಅಭಿಯಾನ’**ದ ಅಂಗವಾಗಿ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಶಾಂತಪ್ಪ ಕಂಬಳಿ ಅವರು ಮಕ್ಕಳ ಹಕ್ಕುಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಸುರಕ್ಷತೆ ಹಾಗೂ ಗೌರವಯುತ ಬಾಲ್ಯ ದೊರೆಯುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಶಾಲೆಯ ಹಿರಿಯ ಶಿಕ್ಷಕಿ ರಿಹಾನ ಬೇಗಂ ಅಕ್ಕಿ ಅವರು ಮಕ್ಕಳಿಗೆ ಉತ್ತಮ ನಡವಳಿಕೆ, ಗುಡ್ ಟಚ್–ಬ್ಯಾಡ್ ಟಚ್ ಹಾಗೂ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಪೋಕ್ಸೋ ಕಾಯ್ದೆ ಕುರಿತು ವಿವರವಾಗಿ ಮಾಹಿತಿ ನೀಡಿದರು. ಅಪರಿಚಿತರು ಅಥವಾ ಪರಿಚಿತರಿಂದಲೇ ಯಾವುದೇ ರೀತಿಯ ಅಸುರಕ್ಷಿತ ವರ್ತನೆ ಕಂಡುಬಂದರೆ ತಕ್ಷಣ ಪೋಷಕರು, ಶಿಕ್ಷಕರು ಅಥವಾ ವಿಶ್ವಾಸಾರ್ಹ ವ್ಯಕ್ತಿಗಳಿಗೆ ತಿಳಿಸುವಂತೆ ಮಕ್ಕಳಿಗೆ ಸಲಹೆ ನೀಡಿದರು.
ಶಿಕ್ಷಕಿ ಪ್ರೇಮಾ ಲಮಾಣಿ ಅವರು ಬಾಲ್ಯ ವಿವಾಹದ ಕುರಿತು ಮಾತನಾಡಿ, ಬಾಲ್ಯದಲ್ಲಿಯೇ ಮದುವೆ ಮಾಡುವುದರಿಂದ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಬಾಲ್ಯ ವಿವಾಹವನ್ನು ತಡೆಯಲು ಮಕ್ಕಳು ಹಾಗೂ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ತಿಳಿಸಿದರು.
ಸಮಾಜ ವಿಜ್ಞಾನ ಶಿಕ್ಷಕಿ ಶಾಂತಾ ಲಮಾಣಿ ಅವರು ಮಕ್ಕಳ ಹಕ್ಕುಗಳಾದ ಓದುವ ಹಕ್ಕು, ಮಾತನಾಡುವ ಹಕ್ಕು, ಆಡುವ ಹಕ್ಕು, ಸುರಕ್ಷತೆಯ ಹಕ್ಕು, ಆರೋಗ್ಯದ ಹಕ್ಕು ಹಾಗೂ ತಪ್ಪುಗಳಿಂದ ಕಲಿಯುವ ಹಕ್ಕುಗಳ ಕುರಿತು ವಿವರಿಸಿದರು. ಹಕ್ಕುಗಳ ಜೊತೆಗೆ ಮಕ್ಕಳ ಜವಾಬ್ದಾರಿಗಳ ಬಗ್ಗೆಯೂ ತಿಳಿಸಿದರು. ಇದೇ ಸಂದರ್ಭದಲ್ಲಿ ‘ನನ್ನ ಬಾಲ್ಯ, ನನ್ನ ಅಧಿಕಾರ’ ಎಂಬ ಕವನವನ್ನು ಪಠಿಸಿ ಮಕ್ಕಳಲ್ಲಿ ಅರಿವು ಮೂಡಿಸಿದರು.
ಗಣಿತ ಶಿಕ್ಷಕಿ ಚೈತ್ರಾ ವಾಲ್ಮೀಕಿ ಅವರು ಡಿಜಿಟಲ್ ಸುರಕ್ಷತೆ ಕುರಿತು ಮಾಹಿತಿ ನೀಡಿ, ಮೊಬೈಲ್ನಲ್ಲಿ ಸುರಕ್ಷಿತ ಆ್ಯಪ್ಗಳನ್ನು ಮಾತ್ರ ಬಳಸಬೇಕು. ಅಪರಿಚಿತ ವ್ಯಕ್ತಿಗಳಿಗೆ ವೈಯಕ್ತಿಕ ಮಾಹಿತಿ, ಪಾಸ್ವರ್ಡ್, ಫೋಟೋ ಅಥವಾ ಇತರ ಖಾಸಗಿ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಮಕ್ಕಳಿಗೆ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ವೀಣಾ ಅಥಣಿ, ಅತಿಥಿ ಶಿಕ್ಷಕಿಯರಾದ ಸಾವಿತ್ರಿ ಮಾಳೆಕೊಪ್ಪ, ಪ್ರಿಯಾಂಕಾ ಮೇಗೂರ, ಬೋಧಕೇತರ ಸಿಬ್ಬಂದಿ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ತಮ್ಮ ಹಕ್ಕುಗಳು, ವೈಯಕ್ತಿಕ ಸುರಕ್ಷತೆ, ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಆನ್ಲೈನ್ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಯಿತು.
.



