
The Buddha’s scientific thinking and message of equality remain relevant even today: Dr. Yathindra Siddaramaiahಬುದ್ಧರ ವೈಜ್ಞಾನಿಕ ಚಿಂತನೆ, ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ: ಡಾ. ಯತೀಂದ್ರ ಸಿದ್ದರಾಮಯ್ಯ

ಚಾಮರಾಜನಗರ: ಜಗತ್ತಿನಲ್ಲಿ ಅಶಾಂತಿ, ಅಸಹನೆ ಹಾಗೂ ಹಿಂಸಾಚಾರ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಭಗವಾನ್ ಬುದ್ಧರ ಶಾಂತಿ, ಕರುಣೆ, ಸಮಾನತೆ ಮತ್ತು ಅಹಿಂಸೆಯ ಬೋಧನೆಗಳು ಮಾನವಕುಲದ ಸಂಕಷ್ಟಗಳಿಗೆ ಪರಿಹಾರವಾಗಬಲ್ಲವು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಗವಾನ್ ಬುದ್ಧ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿದರು.
ಸಾವಿರಾರು ವರ್ಷಗಳ ಹಿಂದೆಯೇ ಬುದ್ಧರು ಶಾಂತಿ, ಸಮಾನತೆ ಮತ್ತು ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಸಾರಿದ್ದರು. ಕುರುಡು ನಂಬಿಕೆಗಳಿಗಿಂತ ವಿಚಾರವಿಮರ್ಶೆ, ವೈಚಾರಿಕತೆ ಹಾಗೂ ಸತ್ಯಾನ್ವೇಷಣೆಗೆ ಆದ್ಯತೆ ನೀಡಿದ ಅವರು, ಯಾವುದೇ ವಿಚಾರವನ್ನು ಪ್ರಶ್ನಿಸದೆ ಒಪ್ಪಿಕೊಳ್ಳದೆ, ಸ್ವತಃ ಪರಿಶೀಲಿಸಿ ಸತ್ಯವೆಂದು ಮನಗಂಡ ಬಳಿಕ ಜೀವನದಲ್ಲಿ ಅಳವಡಿಸಿಕೊಳ್ಳುವ ವೈಜ್ಞಾನಿಕ ಮನೋಭಾವವನ್ನು ಬೋಧಿಸಿದ್ದರು ಎಂದು ಹೇಳಿದರು.
ವರ್ಣವ್ಯವಸ್ಥೆ ಹಾಗೂ ಜಾತಿ ಆಧಾರಿತ ಅಸಮಾನತೆಯನ್ನು ತಿರಸ್ಕರಿಸಿದ ಬುದ್ಧರು ಪ್ರತಿಯೊಬ್ಬ ಮನುಷ್ಯನೂ ಸಮಾನ ಎಂಬ ಸಂದೇಶ ಸಾರಿದ್ದರು. ಬುದ್ಧರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಉತ್ತಮ ಸಮಾಜ ನಿರ್ಮಿಸಬಹುದು. ದೇಶದಲ್ಲಿ ಶಾಂತಿ, ಸಹನೆ ಮತ್ತು ಕರುಣೆ ನೆಲೆಸಲು ಬೌದ್ಧ ಧರ್ಮದ ತತ್ವಗಳು ಹಾಗೂ ಬುದ್ಧರ ವಿಚಾರಗಳು ಪ್ರತಿಯೊಂದು ಜಿಲ್ಲೆಗೂ ತಲುಪಬೇಕು ಎಂದರು.
ಸಂವಿಧಾನ ಮತ್ತು ಅಂಬೇಡ್ಕರ್ ಆಶಯ ಸಾಕಾರಗೊಳಿಸೋಣ
ದಲಿತರು, ಶೋಷಿತರು, ಮಹಿಳೆಯರು ಹಾಗೂ ಸಮಾಜದ ಅಂಚಿನಲ್ಲಿರುವವರು ಗೌರವ ಮತ್ತು ಸ್ವಾಭಿಮಾನದಿಂದ ಬದುಕುವ ಹಕ್ಕು ದೊರಕಿಸಿಕೊಟ್ಟ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್. ಅವರು ರಚಿಸಿದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ, ಸಮಾನತೆ ಹಾಗೂ ಹಕ್ಕುಗಳ ಭದ್ರತೆ ಒದಗಿಸಿದೆ ಎಂದು ಸಚಿವರು ಹೇಳಿದರು.
ಜಾತಿ ಆಧಾರಿತ ತಾರತಮ್ಯವನ್ನು ಪ್ರಶ್ನಿಸಿದ ಅಂಬೇಡ್ಕರ್ ಅವರು ಸಮಾನತೆ ಮತ್ತು ಮಾನವ ಘನತೆಯನ್ನು ಪ್ರತಿಪಾದಿಸುವ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಸಂವಿಧಾನದ ಪೀಠಿಕೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಆಶಯಗಳಿಗೆ ಬೌದ್ಧ ಚಿಂತನೆಗಳು ಪ್ರೇರಣೆಯಾಗಿವೆ. ಬಾಬಾಸಾಹೇಬರು ಯಾವ ಆದರ್ಶಗಳಿಗಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿದರೋ, ಆ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದೇಶವು ಯಾವುದೇ ಒಂದು ಧರ್ಮದ ಆಧಾರದ ಮೇಲೆ ನಡೆಯದೆ ಸಂವಿಧಾನದ ಆಶಯಗಳ ಆಧಾರದ ಮೇಲೆ ಮುನ್ನಡೆಯಬೇಕು ಎಂಬುದು ಅಂಬೇಡ್ಕರ್ ಅವರ ಚಿಂತನೆಯಾಗಿತ್ತು. ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಮೆಚ್ಚುಗೆ
ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಯಶವಂತರಾವ್ ಭೀಮರಾವ್ ಅಂಬೇಡ್ಕರ್ ಅವರನ್ನು ಕರ್ನಾಟಕಕ್ಕೆ ಸ್ವಾಗತಿಸಿದ ಸಚಿವರು, ಇಂತಹ ಮಹತ್ವದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಆಯೋಜಿಸಿರುವುದು ಸಂತಸದ ಸಂಗತಿ ಎಂದರು.
ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಯಶವಂತರಾವ್ ಭೀಮರಾವ್ ಅಂಬೇಡ್ಕರ್, ಸಚಿವ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಡಾ. ಹೆಚ್.ಸಿ. ಮಹದೇವಪ್ಪ, ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕರಾದ ಆರ್. ನರೇಂದ್ರ ಹಾಗೂ ಜಿ.ಎನ್. ನಂಜುಂಡಸ್ವಾಮಿ, ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ, ಪೂಜ್ಯ ಮನೋರಕ್ಕಿತ ಬಂತೇಜಿ, ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಸೇರಿದಂತೆ ಬೌದ್ಧ ಭಿಕ್ಕುಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.




