
Farmers' day-and-night protest against PowerGridಪವರ್ಗ್ರಿಡ್ ವಿರುದ್ಧ ರೈತರ ಅಹೋರಾತ್ರಿ ಧರಣಿ
ಹೈಟೆನ್ಷನ್ ವಿದ್ಯುತ್ ಸ್ಥಾವರ ಹಾಗೂ ತಂತಿ ಎಳೆಯುವ ಕಾಮಗಾರಿಗೆ ವಿರೋಧ; ನ್ಯಾಯಕ್ಕಾಗಿ ರೈತರ ಹೋರಾಟ
ಕುಕನೂರು: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರು ತಾಲೂಕಿನ ರ್ಯಾ ವಣಕಿ ಗ್ರಾಮದ ರೈತರು ಪವರ್ಗ್ರಿಡ್ ಹೈಟೆನ್ಷನ್ ವಿದ್ಯುತ್ ಸ್ಥಾವರ ಹಾಗೂ ವಿದ್ಯುತ್ ತಂತಿ ಎಳೆಯುವ ಕಾಮಗಾರಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು.
ರ್ಯಾವಣಕಿ ಗ್ರಾಮದ ರೈತ ಶ್ರೀ ಕರಿಯಪ್ಪ ಚೆನ್ನದಾಸರ್ ಅವರ ಹೊಲದಲ್ಲಿ ರೈತರು ಧರಣಿ ಸತ್ಯಾಗ್ರಹ ನಡೆಸಿ, ತಮ್ಮ ಜಮೀನುಗಳಲ್ಲಿ ವಿದ್ಯುತ್ ಸ್ಥಾವರ ಹಾಗೂ ಹೈಟೆನ್ಷನ್ ವಿದ್ಯುತ್ ತಂತಿ ಅಳವಡಿಸುವ ಸಂದರ್ಭದಲ್ಲಿ ರೈತರ ಹಕ್ಕು ಮತ್ತು ಹಿತಾಸಕ್ತಿಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಯೋಜನೆಯಿಂದ ಕೃಷಿ ಜಮೀನುಗಳಿಗೆ ಹಾನಿಯಾಗುವುದರ ಜೊತೆಗೆ, ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಆತಂಕವಿದೆ. ಜಮೀನು ಕಳೆದುಕೊಳ್ಳುವ ಹಾಗೂ ಬೆಳೆಗಳಿಗೆ ಹಾನಿಯಾಗುವ ಪರಿಸ್ಥಿತಿ ಎದುರಾಗಿರುವುದರಿಂದ ರೈತರಿಗೆ ಸೂಕ್ತ ಪರಿಹಾರ ಹಾಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೈತರೊಂದಿಗೆ ಸಮಾಲೋಚನೆ ನಡೆಸದೆ ಯಾವುದೇ ಕಾಮಗಾರಿ ಮುಂದುವರಿಸಬಾರದು. ರೈತರ ಜಮೀನು, ಬೆಳೆ ಮತ್ತು ಜೀವನೋಪಾಯಕ್ಕೆ ಉಂಟಾಗುವ ನಷ್ಟವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಧರಣಿ ನಿರತ ರೈತರು ಒತ್ತಾಯಿಸಿದರು.
ರೈತರ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ನ್ಯಾಯಯುತ ಪರಿಹಾರ ಕಂಡುಕೊಳ್ಳುವವರೆಗೆ ಹೋರಾಟ ಮುಂದುವರಿಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ರೈತರ ಅಹೋರಾತ್ರಿ ಧರಣಿಯಿಂದ ಸ್ಥಳದಲ್ಲಿ ಗಮನ ಸೆಳೆಯುವ ವಾತಾವರಣ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ವರದಿ: ಕೆ. ವಿರುಪಾಕ್ಷಿ
ಯಲಬುರ್ಗಾ ತಾಲೂಕು ವರದಿಗಾರ




