
The passing of Nana Patekar is an irreparable loss to the film industry.
ನಾನಾ ಪಾಟೇಕರ್ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ
ಸರಳತೆ, ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಯ ಹೃದಯವಂತ ಕಲಾವಿದನ ಅಗಲಿಕೆ: ಡಾ. ಶಿವಕುಮಾರ ಮಹಾಸ್ವಾಮಿಗಳು
ಸಿದ್ದನಕೊಳ್ಳ: ಬಹುಭಾಷಾ ಅಭಿನಯ ಚತುರ, ಖ್ಯಾತ ಹಿರಿಯ ನಟ ನಾನಾ ಪಾಟೇಕರ್ (75) ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಸಿದ್ದನಕೊಳ್ಳದ ನಿರಂತರ ದಾಸೋಹ ಹಾಗೂ ಕಲಾಪೋಷಕರ ಮಠದ ಧರ್ಮಾಧಿಕಾರಿ ಪರಮಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿಗಳು ಸಂತಾಪ ವ್ಯಕ್ತಪಡಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಾನಾ ಪಾಟೇಕರ್ ಅವರು ಸರಳ-ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಬಡವರು ಹಾಗೂ ಸಂಕಷ್ಟದಲ್ಲಿರುವವರ ಪರ ಸದಾ ಮಿಡಿಯುವ ಹೃದಯ ಹೊಂದಿದ್ದರು. ಅವರ ಅಗಲಿಕೆ ತೀವ್ರ ದುಃಖವನ್ನುಂಟು ಮಾಡಿದೆ. ಭಾರತೀಯ ಚಿತ್ರರಂಗವು ಒಬ್ಬ ಅಪರೂಪದ ಕಲಾವಿದನನ್ನು ಕಳೆದುಕೊಂಡಂತಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಛಾಪು ಮೂಡಿಸಿದ್ದ ನಾನಾ ಪಾಟೇಕರ್, ‘ಕ್ರಾಂತಿವೀರ’, ‘ನಟಸಮ್ರಾಟ್’, ‘ವೆಲ್ಕಮ್’, ‘ಟ್ಯಾಕ್ಸಿ ನಂ. 9211’, ‘ಪರಿಂಡಾ’, ‘ಅಗ್ನಿಸಾಕ್ಷಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿದ್ದಾರೆ. ಕನ್ನಡದ ‘ಯಕ್ಷ’ ಚಿತ್ರದಲ್ಲಿಯೂ ಅವರು ಅಭಿನಯಿಸಿದ್ದರು.
ಅಭಿನಯ ಕ್ಷೇತ್ರದ ಸಾಧನೆಗಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದ ಅವರು, 2013ರಲ್ಲಿ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು. ತಮ್ಮ ವಿಶಿಷ್ಟ ಅಭಿನಯದ ಮೂಲಕ ರಾಷ್ಟ್ರಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಕಲಾವಿದನಾಗಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿಯೂ ನಾನಾ ಪಾಟೇಕರ್ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಹಾರಾಷ್ಟ್ರದಲ್ಲಿ ಬರಗಾಲ ಹಾಗೂ ಕೃಷಿ ಸಂಕಷ್ಟದಿಂದ ತೊಂದರೆಗೊಳಗಾದ ರೈತರು ಮತ್ತು ಅವರ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ 2015ರಲ್ಲಿ ‘ನಾಮ್ ಫೌಂಡೇಶನ್’ ಸ್ಥಾಪಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಸಿದ್ದಶ್ರೀ ಉತ್ಸವಕ್ಕೆ ಆಗಮಿಸಬೇಕಿತ್ತು
2027ರ ಜನವರಿ ತಿಂಗಳಲ್ಲಿ ನಡೆಯಲಿದ್ದ ಸಿದ್ಧಶ್ರೀ ಉತ್ಸವಕ್ಕೆ ನಾನಾ ಪಾಟೇಕರ್ ಅವರನ್ನು ಅತಿಥಿಗಳಾಗಿ ಸಿದ್ದನಕೊಳ್ಳ ಶ್ರೀಮಠಕ್ಕೆ ಕರೆತರುವ ಕುರಿತು ಈಗಾಗಲೇ ಚರ್ಚೆ ನಡೆದಿತ್ತು. ತೆಲುಗು ಚಿತ್ರರಂಗದ ನಿರ್ದೇಶಕರೊಬ್ಬರು ಅವರನ್ನು ಕಾರ್ಯಕ್ರಮಕ್ಕೆ ಕರೆತರುವ ಬಗ್ಗೆ ತಿಳಿಸಿದ್ದರು. ಆದರೆ ಅವರ ಅಕಾಲಿಕ ನಿಧನದಿಂದ ಆ ನಿರೀಕ್ಷೆ ಈಡೇರದಂತಾಗಿದೆ ಎಂದು ಡಾ. ಶಿವಕುಮಾರ ಮಹಾಸ್ವಾಮಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ನಾನಾ ಪಾಟೇಕರ್ ಅವರ ನಿಧನಕ್ಕೆ ಸಿದ್ದಶ್ರೀ ಚಲನಚಿತ್ರೋತ್ಸವ ಆಯ್ಕೆ ಸಮಿತಿಯ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ಅರವಿಂದ ಮುಳಗುಂದ, ಸಂಗನಗೌಡ ರುದ್ರಗೌಡ್ರ (ಕುರುಡಗಿ), ವೀರೇಶ ಪುರವಂತ, ಶರಣು ಸುಗ್ನಳ್ಳಿ, ಲೋಕೇಶ ವಿದ್ಯಾಧರ, ಸುನಂದಾ ಕಲ್ಬುರ್ಗಿ ಹಾಗೂ ಕೃತ್ತಿಕಾ ಸೇರಿದಂತೆ ಸಮಿತಿಯ ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಓಂ ಶಾಂತಿ.
ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆ 2026ರ ಅಕ್ಟೋಬರ್ 8ರಂದು ಪುಣೆಯ ಫಾರ್ಮ್‌ಹೌಸ್‌ನಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ ಎಂಬುದನ್ನೂ ವರದಿಗಳು ತಿಳಿಸಿವೆ. �




