Prelude to 17th Commemoration of Pandit Puttaraja Kavi Gawaigala

ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 17ನೇ ಪುಣ್ಯಸ್ಮರಣೆ ಪೂರ್ವಭಾವಿ

ಸೆ.21ರಂದು ಶ್ರದ್ಧಾ-ಭಕ್ತಿಯಿಂದ ಆಚರಣೆ: ಪೂರ್ವಭಾವಿ ಸಭೆಯಲ್ಲಿ ಸಿದ್ಧತೆಗಳ ಚರ್ಚೆ
ಗಂಗಾವತಿ: ಸಂಗೀತ, ಸಾಹಿತ್ಯ ಹಾಗೂ ಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ತ್ರಿಭಾಷಾ ಕವಿ, ಗಾನಯೋಗಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 17ನೇ ಪುಣ್ಯಸ್ಮರಣೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುವ ಹಿನ್ನೆಲೆಯಲ್ಲಿ ನಗರದ ವಿಪ್ರನಗರದಲ್ಲಿರುವ ಶ್ರೀ ಪುಟ್ಟರಾಜ ಕವಿ ಗವಾಯಿಗಳವರ ಆಶ್ರಮದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.
ಶ್ರೀ ಕಲ್ಲಯ್ಯ ಅಜ್ಜನವರ ಸಾನಿಧ್ಯ ಹಾಗೂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಜ್ಜನವರ ಶಿಷ್ಯರು, ಕಲಾವಿದರು ಮತ್ತು ಭಕ್ತರು ಭಾಗವಹಿಸಿ, ಸೆ.21ರಂದು ನಡೆಯಲಿರುವ ಪುಣ್ಯಸ್ಮರಣೆ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಚರ್ಚಿಸಿದರು.
ಪುಣ್ಯಸ್ಮರಣೆಯ ಅಂಗವಾಗಿ ಸಂಗೀತ ಸೇವೆ, ಅನ್ನದಾಸೋಹ, ವೇದಿಕೆ ನಿರ್ಮಾಣ ಸೇರಿದಂತೆ ವಿವಿಧ ವ್ಯವಸ್ಥೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ತನು-ಮನ-ಧನದಿಂದ ಸಹಕರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕಲ್ಲಯ್ಯ ಅಜ್ಜನವರು, “ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 17ನೇ ಪುಣ್ಯಸ್ಮರಣೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುವ ಮೂಲಕ ಅವರ ಸ್ಮರಣೆಯನ್ನು ಚಿರಸ್ಥಾಯಿಗೊಳಿಸಬೇಕು. ಸ್ವರ-ಸಂಗೀತದ ಸೇವೆಯನ್ನು ಅವರ ಪಾದಗಳಿಗೆ ಅರ್ಪಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ” ಎಂದು ಹೇಳಿದರು.
ಸೆ.21ರಂದು ಬೆಳಿಗ್ಗೆ 9 ಗಂಟೆಗೆ ಪೂಜಾ ಕಾರ್ಯಕ್ರಮ ಮುಗಿದ ಬಳಿಕ ರೇವಣಕಿಗೆ ತೆರಳಿ, ಶ್ರೀ ಪುಟ್ಟರಾಜ ಕವಿ ಗವಾಯಿಗಳವರ ರಥೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ಪುನಃ ಆಶ್ರಮಕ್ಕೆ ಆಗಮಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕೆ.ಎಫ್. ಮುದ್ದಾಬಳ್ಳಿ, ವೀರಯ್ಯ, ಪ್ರಕಾಶ್‌ಗೌಡ ಪಾಟೀಲ್, ಬಡಿಗರ್ ಸರ್, ವಿರೂಪಾಕ್ಷಿ, ಮಲ್ಲಿಕಾರ್ಜುನಗೌಡ, ಸಣ್ಣಪ್ಪ ಕಮ್ಮಾರ್, ಶಿವಪ್ಪ ಹುಳ್ಳಿ, ರಾಘವೇಂದ್ರ ಗಂಗಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅಗತ್ಯವಾದ ಸಲಹೆ-ಸೂಚನೆಗಳನ್ನು ನೀಡಿದರು.

