Minister Dr. Yathindra Siddaramaiah visits the Pachchanadi solid waste disposal unit.


ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ

ಮೂಲದಲ್ಲೇ ಶೇ.100ರಷ್ಟು ಕಸ ವಿಂಗಡಣೆ ಕಡ್ಡಾಯ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ
ಮಂಗಳೂರು: ಮಂಗಳೂರು ಪ್ರವಾಸದ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪಚ್ಚನಾಡಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಇಂದು ಭೇಟಿ ನೀಡಿ, ಘಟಕದಲ್ಲಿ ನಡೆಯುತ್ತಿರುವ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ವೇಳೆ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಪ್ರಕ್ರಿಯೆ, ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆ ಹಾಗೂ ಪ್ರಸ್ತುತ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.
ಪಚ್ಚನಾಡಿ ಘಟಕದಲ್ಲಿ ಪ್ರಸ್ತುತ ಪ್ರತಿದಿನ ಸುಮಾರು 121 ಟನ್ ಹಸಿಕಸ ಹಾಗೂ 50 ಟನ್ ಒಣಕಸ ಸೇರಿದಂತೆ ಎಳನೀರು ಮತ್ತು ತೆಂಗಿನಕಾಯಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸುವುದರ ಜೊತೆಗೆ, ಮೂಲದಲ್ಲೇ ಶೇ.100ರಷ್ಟು ಕಸವನ್ನು ಕಡ್ಡಾಯವಾಗಿ ವಿಂಗಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ತ್ಯಾಜ್ಯ ವಿಂಗಡಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ಮತ್ತಷ್ಟು ಸುಧಾರಿಸಬೇಕು. ಸಾರ್ವಜನಿಕರಲ್ಲಿ ಮೂಲದಲ್ಲೇ ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸಿ, ನಗರವನ್ನು ಸ್ವಚ್ಛ ಹಾಗೂ ಸುಸ್ಥಿರವಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜಾ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ರಾಹುಲ್ ರತ್ನಂ ಪಾಂಡೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

