Guru Basavanna was the one who gave birth to democracy, yet it was killed by many who donned saffron robes in his name! What a profound irony this is!

ಪ್ರಜಾ ಪ್ರಭುತ್ವವನ್ನು ಹುಟ್ಟುಹಾಕಿದವರು ಗುರು ಬಸವಣ್ಣನವರು ಅದನ್ನು ಕೊಂದವರು ಅವರ ಹೆಸರಿನಲ್ಲಿ ಕಾವಿ ಧರಿಸಿದ ಅನೆಕರು! ಎಂತಹ ಮಹಾನ್ ವೈರುಧ್ಯವಿದು!

–ಸಚ್ಚಿದಾನಂದ ಪ್ರಭು ಚಟ್ನಳ್ಳಿ
ಗುರು ಬಸವಣ್ಣನವರನ್ನು “ಪ್ರಜಾಪ್ರಭುತ್ವದ ಪಿತಾಮಹ” ಎಂದು ಕರೆಯಲಾಗುತ್ತದೆ. ಅವರ ಚಿಂತನೆಗಳಲ್ಲಿ ಸಮಾನತೆ, ವಿಚಾರ ಸ್ವಾತಂತ್ರ್ಯ, ಸಂವಾದ, ಪರಸ್ಪರ ಗೌರವ ಮತ್ತು ಸಾಮೂಹಿಕ ಚರ್ಚೆಗೆ ಮಹತ್ವವಿತ್ತು.
ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಎಲ್ಲರೂ ಒಂದೇ ಅಭಿಪ್ರಾಯ ಹೊಂದಿರುವುದರಲ್ಲಿ ಇಲ್ಲ. ಭಿನ್ನಾಭಿಪ್ರಾಯಗಳಿದ್ದರೂ ಒಟ್ಟಿಗೆ ಕುಳಿತು, ಪರಸ್ಪರ ವಿಚಾರಗಳನ್ನು ಆಲಿಸಿ, ಚರ್ಚಿಸಿ, ಒಬ್ಬರನ್ನೊಬ್ಬರು ಗೌರವಿಸುವುದೇ ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ. ಆದರೆ ಬಸವಣ್ಣನವರ ತತ್ವವನ್ನು ಸಾರುವ ನಮ್ಮ ಸಮಾಜದಲ್ಲಿ ಕೆಲವೊಮ್ಮೆ ಇದಕ್ಕೆ ವಿರುದ್ಧವಾದ ನಡವಳಿಕೆ ಕಾಣಿಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಅಭಿಪ್ರಾಯ ಭಿನ್ನವಾದ ತಕ್ಷಣ ಮಾತುಕತೆ ನಿಲ್ಲುತ್ತದೆ. ಒಬ್ಬರ ಮುಖವನ್ನು ಮತ್ತೊಬ್ಬರು ನೋಡದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಿಚಾರದ ಭಿನ್ನತೆ ವೈಮನಸ್ಸಾಗಿ, ವೈಮನಸ್ಸು ದ್ವೇಷವಾಗಿ, ಕೊನೆಗೆ ಶತ್ರುತ್ವವಾಗಿ ಮಾರ್ಪಡುತ್ತದೆ.
ಇದಕ್ಕೆ ಒಂದು ನೋವಿನ ಉದಾಹರಣೆ — ಮಾತೆ ಮಹಾದೇವಿಯವರ ಪ್ರಸಂಗ
ಮಾತೆ ಮಹಾದೇವಿಯವರು “ಲಿಂಗದೇವ” ಎಂಬುದು ಗುರು ಬಸವಣ್ಣನವರ ವಚನಾಂಕಿತ ಅಥವಾ ಅಂಕಿತನಾಮವಾಗಿರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆ ಅಭಿಪ್ರಾಯವನ್ನು ಒಪ್ಪದಿರುವ ಸಂಪೂರ್ಣ ಹಕ್ಕು ಇತರರಿಗೆ ಇತ್ತು. ಅವರ ಅಭಿಪ್ರಾಯವನ್ನು ತೀವ್ರವಾ ಗಿ ವಿರೋಧಿಸುವ ಹಕ್ಕು ಕೂಡ ಇತ್ತು. ಆದರೆ ಪ್ರಶ್ನೆ ಬೇರೆಯದು:ಭಿನ್ನಾಭಿಪ್ರಾಯವನ್ನು ನಾವು ಹೇಗೆ ಎದುರಿಸಿದ್ದೇವೆ?
ಅವರ ಅಭಿಪ್ರಾಯವನ್ನು ವಿಚಾರ ಮತ್ತು ತರ್ಕದ ಮೂಲಕ ಎದುರಿಸುವ ಬದಲು, ಅಂದಿನ ಅನೇಕ ಮಠಾಧೀಶರು ಹಾಗೂ ಅವರ ಅನುಯಾಯಿಗಳ ವಲಯದಿಂದ ಅವರ ವಿರುದ್ಧ ತೀವ್ರವಾದ ವೈಯಕ್ತಿಕ ಟೀಕೆಗಳು ಮತ್ತು ಅವಹೇಳನಕಾರಿ ಭಾಷೆಯ ಬಳಕೆಯಾದವು. ಅವರ ಅನುಯಾಯಿಗಳೊಂದಿಗೆ ಸಂಘರ್ಷದ ಘಟನೆಗಳೂ ನಡೆದವು. ಮಾತೆ ಮಹಾದೇವಿಯವರನ್ನು ಕೊಲ್ಲುವ ಪ್ರಯತ್ನಗಳೂ ನಡೆದವು ಎನ್ನುವುದನ್ನು ಕೇಳಲ್ಪಟ್ಟಿದ್ದೇವೆ.
ಒಬ್ಬರ ವಿಚಾರವನ್ನು ವಿರೋಧಿಸುವಾಗ, ಆ ವ್ಯಕ್ತಿಯ ಘನತೆಯನ್ನು ನಾವು ಕಾಪಾಡಿದ್ದೇವೆಯೇ? ಅವರ ಅಭಿಪ್ರಾಯ ತಪ್ಪು ಎಂದು ಭಾವಿಸಿದ್ದರೆ ವಚನಗಳ ಆಧಾರದಿಂದ ಉತ್ತರಿಸಬಹುದಿತ್ತು. ತರ್ಕದಿಂದ ವಿರೋಧಿಸಬಹುದಿತ್ತು. ವಿಚಾರ ಸಂಕಿರಣಗಳನ್ನು ನಡೆಸಬಹುದಿತ್ತು. ಚರ್ಚೆಗೆ ಆಹ್ವಾನಿಸಬಹುದಿತ್ತು. ಒಟ್ಟಿಗೆ ಕುಳಿತು ಸಂವಾದ ನಡೆಸಬಹುದಿತ್ತು. ಅದು ಬಸವಣ್ಣನವರ ಪ್ರಜಾಪ್ರಭುತ್ವದ ಮಾರ್ಗವಾಗಿರುತ್ತಿತ್ತು. ಮಾತೆ ಮಹಾದೇವಿಯವರು ನೂರಾರು ಬಾರಿ ಚರ್ಚೆಗೆ ಆಹ್ವಾನಿಸಿದರೂ ಯಾರೂ ಚರ್ಚೆಗೆ ಬರಲಿಲ್ಲ ಬದಲಾಗಿ ಮಾತೆ ಮಹಾದೇವಿಯವರನ್ನು ಅವರ ಜೀವನ ಪರ್ಯಂತರ ದೂಷಿಸಿದರು. ನಿಂದಿಸಿದರು. ಮಾತೆ ಮಹಾದೇವಿಯವರು ಲಿಂಗೈಕ್ಯರಾದ ಬಳಿಕವೂ ಅವರ ಶಿಷ್ಯರಿಗೆ “ನೀವು ಮಾತೆ ಮಹಾದೇವಿಯವರ ವಿಚಾರಗಳನ್ನು ಕೈಬಿಟ್ಟರೆ ಮಾತ್ರ ನೀವು ನಮ್ಮೊಂದಿಗೆ ಸೇರಿ ನಾವು ನಿಮ್ಮೊಂದಿಗೆ ಸೇರುತ್ತೇವೆ ಇಲ್ಲದಿದ್ದರೆ ಇಲ್ಲ” ಎಂದು ಮತ್ತೊಮ್ಮೆ ಗುರು ಬಸವಣ್ಣನವರ ಪ್ರಾಜಾಪ್ರಭುತ್ವವನು ಕೊಲೆ ಮಾಡಿದರು. ಆದರೆ ಒಬ್ಬರ ಅಭಿಪ್ರಾಯವನ್ನು ವಿರೋಧಿಸುವುದರಿಂದಲೇ ಅವರು ನಮ್ಮ ಶತ್ರುವಾಗಬೇಕೇ?
ವಿಚಾರವನ್ನು ವಿರೋಧಿಸುವುದು ಬೇರೆ; ವ್ಯಕ್ತಿಯನ್ನು ಅವಮಾನಿಸುವುದು ಬೇರೆ.
ಇವೆರಡರ ನಡುವಿನ ವ್ಯತ್ಯಾಸವನ್ನು ನಾವು ಅರಿಯಬೇಕಾಗಿದೆ. ಮಾತೆ ಮಹಾದೇವಿಯವರು ಇಂದು ನಮ್ಮ ನಡುವೆ ಇಲ್ಲ. ಆದರೆ ಅವರು ಪ್ರತಿಪಾದಿಸಿದ ವಿಚಾರಗಳನ್ನು ಇಂದಿಗೂ ವಿರೋಧಿಸಲ್ಪಡುತ್ತಿವೆ. ಹೊರಗನಿನವರಿಂದಷ್ಟೇ ಅಲ್ಲದೆ ಸ್ವತಃ ಅವರಿಂದ ಅನ್ನ ಆಶ್ರಯಗಳನ್ನು ಪಡೆದು ಬೆಳೆದವರಿಂದಲೂ ವಿರೋಧಿಸಲ್ಪಡುತ್ತಿವೆ. ಇದು ಈ ಸಮಾಜ ಕಂಡ ಬಹುದೊಡ್ಡ ದುರಂತ. ಇಲ್ಲಿಯೇ ಮತ್ತೊಂದು ಗಂಭೀರ ಪ್ರಶ್ನೆ ಎದುರಾಗುತ್ತದೆ:ಒಬ್ಬ ವ್ಯಕ್ತಿ ಬದುಕಿರುವಾಗ ಅವರೊಂದಿಗೆ ಸಂವಾದ ನಡೆಸಲು ಸಾಧ್ಯವಾಗದಿದ್ದರೆ, ಅವರು ಇಲ್ಲದ ನಂತರ ಅವರ ಪರಂಪರೆ ಮತ್ತು ಚಿಂತನೆಗಳ ಕುರಿತು ನಾವು ಹೇಗೆ ಡೆದುಕೊಳ್ಳಬೇಕು? ಒಬ್ಬರ ವಿಚಾರಗಳನ್ನು ಒಪ್ಪದಿದ್ದರೆ ಅದನ್ನು ಬಹಿರಂಗವಾಗಿ ವಿಮರ್ಶಿಸಬಹುದು. ಅವರ ತತ್ವಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಬಹುದು. ಅವರ ವ್ಯಾಖ್ಯಾನವನ್ನು ಪ್ರಶ್ನಿಸಬಹುದು. ಆದರೆ ವಿಚಾರವನ್ನು ಪ್ರಶ್ನಿಸುವ ಹಕ್ಕು ನಮಗಿದ್ದರೂ, ವ್ಯಕ್ತಿಯ ಘನತೆಯನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ.
ಇದು ಮಾತೆ ಮಹಾದೇವಿಯವರ ವಿಷಯ ಮಾತ್ರವಲ್ಲ.
ಇದು ನಮ್ಮ ಬಸವ ಚಳವಳಿಯ ಸಂಸ್ಕೃತಿಯ ಪ್ರಶ್ನೆ. ಬಸವಣ್ಣನವರ ವಚನಗಳನ್ನು ನಾವು ಎಷ್ಟು ಬಾರಿ ಪಠಿಸುತ್ತೇವೆ ಎಂಬುದಕ್ಕಿಂತ, ಭಿನ್ನಾಭಿಪ್ರಾಯ ಹೊಂದಿರುವ ವ್ಯಕ್ತಿಯೊಂದಿಗೆ ನಾವು ಹೇಗೆ ವರ್ತಿಸುತ್ತೇವೆ ಎಂಬುದೇ ನಮ್ಮ ಬಸವತ್ವದ ನಿಜವಾದ ಪರೀಕ್ಷೆ. ನನ್ನೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ವ್ಯಕ್ತಿ ನನ್ನ ಶತ್ರುವಲ್ಲ. ಅವರು ನನ್ನನ್ನು ಪ್ರಶ್ನಿಸಬಹುದು. ನಾನು ಅವರನ್ನು ಪ್ರಶ್ನಿಸಬಹುದು. ನಾವು ಪರಸ್ಪರ ಒಪ್ಪಿಕೊಳ್ಳದಿರಬಹುದು. ಆದರೆ ನಾವು ಒಟ್ಟಿಗೆ ಕುಳಿತು ಮಾತನಾಡಬಹುದು. ಒಬ್ಬರ ಮಾತನ್ನು ಮತ್ತೊಬ್ಬರು ಆಲಿಸಬಹುದು. ಭಿನ್ನಾಭಿಪ್ರಾಯದ ನಡುವೆಯೂ ಪರಸ್ಪರ ಗೌರವಿಸಬಹುದು.
ಇದೇ ಪ್ರಜಾಪ್ರಭುತ್ವ. ಇದೇ ಗುರು ಬಸವಣ್ಣನವರ ಚಿಂತನೆಯ ಆತ್ಮ.
ವಚನಗಳನ್ನು ಬೋಧಿಸುವುದರಿಂದ ವಚನ ತತ್ವದ ಅನುಯಾಯಿಗಳಾಗುವುದಿಲ್ಲ; ವಚನಗಳ ಆಶಯವನ್ನು ಬದುಕುವುದರಿಂದ ಮಾತ್ರ ನಿಜವಾದ ಅನುಯಾಯಿಗಳಾಗುತ್ತೇವೆ.
ನಮ್ಮ ಅಭಿಪ್ರಾಯಗಳು ಒಂದಾಗಬೇಕಿಲ್ಲ. ಆದರೆ ನಮ್ಮ ಮನಸ್ಸುಗಳು ಬೇರ್ಪಡಬೇಕಿಲ್ಲ. ನಮ್ಮ ವಿಚಾರಗಳು ಭಿನ್ನವಾಗಿರಬಹುದು. ಆದರೆ ನಮ್ಮ ಮಾನವೀಯತೆ ಒಂದಾಗಿರಲಿ. ಭಿನ್ನಾಭಿಪ್ರಾಯಗಳು ಸಂವಾದಕ್ಕೆ ಕಾರಣವಾಗಲಿ ದ್ವೇಷಕ್ಕೆ ಅಲ್ಲ.
ವಿಚಾರಗಳ ಸಂಘರ್ಷ ಜ್ಞಾನವನ್ನು ಹೆಚ್ಚಿಸಲಿ ಸಂಬಂಧಗಳನ್ನು ನಾಶ ಮಾಡಬಾರದು. ನಾವು ಗುರು ಬಸವಣ್ಣನವರ ಹೆಸರನ್ನು ಹೇಳುವುದಕ್ಕಿಂತ ಅವರ ಚಿಂತನೆಯನ್ನು ನಮ್ಮ ನಡವಳಿಕೆಯಲ್ಲಿ ತೋರಿಸೋಣ. ಅವರ ವಚನಗಳನ್ನು ಉಲ್ಲೇಖಿಸುವುದಕ್ಕಿಂತ ಅವುಗಳ ಮೌಲ್ಯಗಳನ್ನು ಆಚರಣೆಯಲ್ಲಿ ತರೋಣ.
ಗುರು ಬಸವಣ್ಣನವರನ್ನು ಕುರಿತು ಮಾತನಾಡುವುದು ಸುಲಭ; ಗುರು ಬಸವಣ್ಣನವರಂತೆ ಭಿನ್ನಾಭಿಪ್ರಾಯವನ್ನು ಗೌರವಿಸುವುದು ಕಷ್ಟ. ಆ ಕಷ್ಟದ ಮಾರ್ಗವನ್ನೇ ನಾವು ಆರಿಸಬೇಕಾಗಿದೆ.
ಕೊನೆಯದಾಗಿ ನಮ್ಮೆಲ್ಲರ ಮುಂದಿರುವ ಪ್ರಶ್ನೆ:
ನಾವು ಕೇವಲ ವಚನಗಳ ಪ್ರಚಾರಕರೇ?ಅಥವಾ ನಿಜವಾಗಿಯೂ ವಚನ ತತ್ವದ ಆಚರಣಾಕಾರರೇ?
ಈ ಪ್ರಶ್ನೆಗೆ ಉತ್ತರವನ್ನು ಮತ್ತೊಬ್ಬರಲ್ಲಿ ಹುಡುಕಬೇಕಾಗಿಲ್ಲ. ಪ್ರತಿಯೊಬ್ಬರೂ ತಮ್ಮೊಳಗೆ ತಾವೇ ಕಂಡುಕೊಳ್ಳಬೇಕಾಗಿದೆ.
🌿 ಭಿನ್ನಾಭಿಪ್ರಾಯದ ನಡುವೆಯೂ ಒಟ್ಟಿಗೆ ಕುಳಿತುಕೊಳ್ಳುವ ಸಂಸ್ಕೃತಿಯನ್ನು ಬೆಳೆಸೋಣ.
🌿 ವ್ಯಕ್ತಿಯನ್ನು ಅಲ್ಲ, ವಿಚಾರವನ್ನು ವಿಮರ್ಶಿಸೋಣ.
🌿 ದ್ವೇಷವನ್ನು ಅಲ್ಲ, ಸಂವಾದವನ್ನು ಬೆಳೆಸೋಣ.
🌿 ಗುರು ಬಸವಣ್ಣನವರನ್ನು ಕುರಿತು ಕೇವಲ ಮಾತನಾಡದೆ—ಅವರ ತತ್ಬಗಳಂತೆ ಬದುಕೋಣ.
ಗುರು ಬಸವಣ್ಣನವರ ಹಾಗೂ ಆದಿ ಶರಣರ ಚಿಂತನೆ ನಮ್ಮ ಮಾತಿನಲ್ಲಿ ಮಾತ್ರವಲ್ಲ, ನಮ್ಮ ನಡವಳಿಕೆಯಲ್ಲೂ ಮೂಡಲಿ.
–ಸಚ್ಚಿದಾನಂದ ಪ್ರಭು ಚಟ್ನಳ್ಳಿ

