ಮೂಡಲಗಿಯಲ್ಲಿ ಪರವಾನಿಗೆ ಇಲ್ಲದೆ ಅಕ್ರಮ ಕೋಚಿಂಗ್ ಸೆಂಟರ್‌ಗಳ ದಂಧೆ?

H.Mallikarjun
H.Mallikarjun - Kalyanasiri
3 Min Read
Illegal coaching center racket operating without licenses in Moodalagi?

ಮೂಡಲಗಿಯಲ್ಲಿ ಪರವಾನಿಗೆ ಇಲ್ಲದೆ ಅಕ್ರಮ ಕೋಚಿಂಗ್ ಸೆಂಟರ್‌ಗಳ ದಂಧೆ?

ಜಾಹೀರಾತು


ಶಿಕ್ಷಣ ಇಲಾಖೆಯ ಮೌನಕ್ಕೆ ಪೋಷಕರ ಆಕ್ರೋಶ; ಖಾಸಗಿ ಶಾಲೆಗಳಲ್ಲೇ ನಿಯಮಬಾಹಿರ ತರಗತಿಗಳ ಆರೋಪ


ಮೂಡಲಗಿ: ಪಟ್ಟಣದಲ್ಲಿ ಶಿಕ್ಷಣ ಇಲಾಖೆಯ ಅನುಮತಿ ಹಾಗೂ ಅಗತ್ಯ ಪರವಾನಿಗೆಗಳಿಲ್ಲದೆ ಕೆಲವು ಖಾಸಗಿ ಶಾಲೆಗಳು ಮತ್ತು ಕೋಚಿಂಗ್ ಸೆಂಟರ್‌ಗಳು ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂಜೆ ಶಾಲಾ ಅವಧಿ ಮುಗಿದ ಬಳಿಕ ಶಾಲಾ ಕೊಠಡಿಗಳಲ್ಲೇ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಕೋಚಿಂಗ್ ತರಗತಿಗಳು ನಡೆಯುತ್ತಿದ್ದು, ಇದರಿಂದ ಪೋಷಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಪೋಷಕರು ದೂರಿದ್ದಾರೆ.
ನಿಯಮಾನುಸಾರ ಕೋಚಿಂಗ್ ಸೆಂಟರ್‌ಗಳನ್ನು ನಡೆಸುವ ಸಂದರ್ಭದಲ್ಲಿ ಸಂಬಂಧಿತ ಇಲಾಖೆಯ ನೋಂದಣಿ, ಕಟ್ಟಡದ ಸುರಕ್ಷತೆ, ಅಗ್ನಿ ಸುರಕ್ಷತಾ ವ್ಯವಸ್ಥೆ, ಮೂಲಭೂತ ಸೌಕರ್ಯ ಸೇರಿದಂತೆ ಅಗತ್ಯ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಮೂಡಲಗಿ ಪಟ್ಟಣದಲ್ಲಿ ಇಂತಹ ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಂಜೆಯಾದರೆ ಶಾಲಾ ಕೊಠಡಿಗಳೇ ಕೋಚಿಂಗ್ ಸೆಂಟರ್?
ಕೆಲವು ಖಾಸಗಿ ಶಾಲೆಗಳಲ್ಲಿ ಸಂಜೆ 5 ಗಂಟೆಯ ನಂತರವೂ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದ್ದು, ಇವು ಶಾಲೆಯ ನಿಯಮಿತ ಶೈಕ್ಷಣಿಕ ಚಟುವಟಿಕೆಯ ಭಾಗವೇ ಅಥವಾ ಪ್ರತ್ಯೇಕ ಕೋಚಿಂಗ್ ವ್ಯವಸ್ಥೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಅಗತ್ಯವಾಗಿದೆ.
ಇನ್ನು ಕೆಲವು ಕಡೆ ಬಾಡಿಗೆ ಕಟ್ಟಡಗಳು ಹಾಗೂ ಮನೆಗಳಲ್ಲಿ ಕೋಚಿಂಗ್ ತರಗತಿಗಳು ನಡೆಯುತ್ತಿದ್ದು, ಅಲ್ಲಿ ಅಗತ್ಯ ಸುರಕ್ಷತಾ ವ್ಯವಸ್ಥೆಗಳಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕಾಗಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ.
ಸಾವಿರಾರು ರೂಪಾಯಿ ಶುಲ್ಕ – ಸೌಲಭ್ಯಗಳೇನು?
ವಿದ್ಯಾರ್ಥಿಗಳಿಂದ ತಿಂಗಳಿಗೆ ಸಾವಿರಾರು ರೂಪಾಯಿ ವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಶುಲ್ಕಕ್ಕೆ ಅನುಗುಣವಾಗಿ ಗುಣಮಟ್ಟದ ಬೋಧನೆ, ಅರ್ಹ ಶಿಕ್ಷಕರು, ಸೂಕ್ತ ಮೂಲಸೌಕರ್ಯ ಹಾಗೂ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಸಂಬಂಧಿಸಿದವರು ಉತ್ತರಿಸಬೇಕಿದೆ.
ಒಂದು ವೇಳೆ ಕೋಚಿಂಗ್ ಕೇಂದ್ರದಲ್ಲಿ ಅವಘಡ ಸಂಭವಿಸಿದರೆ ವಿದ್ಯಾರ್ಥಿಗಳ ಸುರಕ್ಷತೆಗೆ ಯಾರು ಹೊಣೆ? ಎಂಬುದು ಪೋಷಕರ ಪ್ರಮುಖ ಪ್ರಶ್ನೆಯಾಗಿದೆ.
ಶಾಲಾ ನಿರ್ವಹಣೆಯಲ್ಲೂ ನಿಯಮ ಉಲ್ಲಂಘನೆಯ ಆರೋಪ
ಕೋಚಿಂಗ್ ಸೆಂಟರ್‌ಗಳಷ್ಟೇ ಅಲ್ಲದೆ, ಕೆಲವು ಖಾಸಗಿ ಶಾಲೆಗಳ ನಿರ್ವಹಣೆಯಲ್ಲೂ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ವಿಶೇಷವಾಗಿ ಶಾಲಾ ಬಸ್‌ಗಳ ಸುರಕ್ಷತೆ, ವಿದ್ಯಾರ್ಥಿಗಳ ಸಾಗಾಟ, ಅಗ್ನಿ ಸುರಕ್ಷತೆ, ಕಟ್ಟಡದ ಸುರಕ್ಷತೆ, ಮೂಲಸೌಕರ್ಯ ಹಾಗೂ ಇತರ ಕಡ್ಡಾಯ ಮಾನದಂಡಗಳ ಬಗ್ಗೆ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಮೌನಕ್ಕೆ ಕಾರಣವೇನು?
ಪಟ್ಟಣದಲ್ಲಿ ನಿಯಮಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳ ನಡುವೆಯೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸುತ್ತಿಲ್ಲ ಎಂಬ ಆಕ್ರೋಶ ಪೋಷಕರಿಂದ ವ್ಯಕ್ತವಾಗಿದೆ.
ಕೆಲವು ಪೋಷಕರು “ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂತಹ ವ್ಯವಸ್ಥೆಗಳು ಮುಂದುವರಿಯುತ್ತಿವೆ” ಎಂದು ಆರೋಪಿಸಿದ್ದು, ಈ ಆರೋಪಗಳ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿರುವ ಕಮಿಷನ್ ಆರೋಪಗಳಿಗೂ ತನಿಖೆಯ ಮೂಲಕ ಉತ್ತರ ಸಿಗಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಜಿಲ್ಲಾ ಮಟ್ಟದಲ್ಲಿ ಸಮಗ್ರ ತಪಾಸಣೆಗೆ ಆಗ್ರಹ
ಮೂಡಲಗಿ ಪಟ್ಟಣದ ಎಲ್ಲಾ ಖಾಸಗಿ ಶಾಲೆಗಳು ಹಾಗೂ ಕೋಚಿಂಗ್ ಸೆಂಟರ್‌ಗಳ ಕುರಿತು ಶಿಕ್ಷಣ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕು. ಅಗತ್ಯ ದಾಖಲೆಗಳು, ಪರವಾನಿಗೆ, ಕಟ್ಟಡದ ಸುರಕ್ಷತೆ, ಅಗ್ನಿ ಸುರಕ್ಷತಾ ವ್ಯವಸ್ಥೆ, ಶಿಕ್ಷಕರ ಅರ್ಹತೆ ಹಾಗೂ ವಿದ್ಯಾರ್ಥಿಗಳ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು ಎಂದು ಪೋಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.
ಅನುಮತಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ಕೋಚಿಂಗ್ ಸೆಂಟರ್‌ಗಳು ನಡೆಯುತ್ತಿರುವುದು ತನಿಖೆಯಲ್ಲಿ ಸಾಬೀತಾದರೆ, ಅಂತಹ ಕೇಂದ್ರಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಂಡು ಅಗತ್ಯವಿದ್ದಲ್ಲಿ ಮುಚ್ಚಿಸುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇದೀಗ ಮೂಡಲಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಆರೋಪಗಳಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ? ಖಾಸಗಿ ಶಾಲೆಗಳು ಹಾಗೂ ಕೋಚಿಂಗ್ ಸೆಂಟರ್‌ಗಳ ಮೇಲೆ ನಿಜಕ್ಕೂ ತಪಾಸಣೆ ನಡೆಯುತ್ತದೆಯೇ? ಅಥವಾ ಆರೋಪಗಳು ಆರೋಪಗಳಾಗಿಯೇ ಉಳಿಯುತ್ತವೆಯೇ? ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಈಶ್ವರ ಢವಳೇಶ್ವರ, ಮೂಡಲಗಿ

Total Views: 0
ಜಾಹೀರಾತು
Share This Article