ಕೊಪ್ಪಳ ಅಂಚೆ ವಿಭಾಗದಲ್ಲಿ ಅಂಚೆ ಕಚೇರಿ ಫ್ರಾಂಚೈಸಿ ಮಳಿಗೆಗಳನ್ನು ಆರಂಭಿಸಲು ಅರ್ಜಿಗಳ ಆಹ್ವಾನ

H.Mallikarjun
H.Mallikarjun - Kalyanasiri
2 Min Read

Applications invited to open Post Office franchise outlets in the Koppal Postal Division.

ಕೊಪ್ಪಳ ಅಂಚೆ ವಿಭಾಗದಲ್ಲಿ ಅಂಚೆ ಕಚೇರಿ ಫ್ರಾಂಚೈಸಿ ಮಳಿಗೆಗಳನ್ನು ಆರಂಭಿಸಲು ಅರ್ಜಿಗಳ ಆಹ್ವಾನ

ಜಾಹೀರಾತು

ಕೊಪ್ಪಳ ಸೆಪ್ಟೆಂಬರ್ 02, (ಕರ್ನಾಟಕ ವಾರ್ತೆ): ಸಾರ್ವಜನಿಕರಿಗೆ ಅಂಚೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ,  ತ್ವರಿತವಾಗಿ ಹಾಗೂ ಸಮೀಪದಲ್ಲಿ ಒದಗಿಸುವ ಉದ್ದೇಶದಿಂದ ಭಾರತ ಸರ್ಕಾರದ ಅಂಚೆ ಇಲಾಖೆಯು ಕೊಪ್ಪಳ ಅಂಚೆ ವಿಭಾಗದ ವ್ಯಾಪ್ತಿಯ ಆಯ್ದ ಸ್ಥಳಗಳಲ್ಲಿ ಅಂಚೆ ಕಚೇರಿ ಫ್ರಾಂಚೈಸಿ ಮಳಿಗೆಗಳನ್ನು ಆರಂಭಿಸಲು ಅರ್ಹ ವ್ಯಕ್ತಿಗಳು, ಸ್ವಯಂ ಉದ್ಯೋಗಿಗಳು, ಸ್ವಸಹಾಯ ಸಂಘಗಳು, ಸಹಕಾರ ಸಂಘಗಳು,  ಸಂಸ್ಥೆಗಳು ಹಾಗೂ ಆಸಕ್ತ ಉದ್ಯಮಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅಂಚೆ ಇಲಾಖೆಯ ಫ್ರಾಂಚೈಸಿ ಯೋಜನೆಯಡಿ ಆಯ್ಕೆಯಾಗುವ ಫ್ರಾಂಚೈಸಿದಾರರು ಇಲಾಖೆಯ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಸಾರ್ವಜನಿಕರಿಗೆ ಫ್ರಾಂಚೈಸಿ ಮಳಿಗೆಯಲ್ಲಿ ಲಭ್ಯವಿರುವ ಪ್ರಮುಖ ಸೇವೆಗಳಾದ ಸ್ಪೀಡ್ ಪೋಸ್ಟ್ ಲೇಖನಗಳ ಬುಕ್ಕಿಂಗ್, ಅಂಚೆಚೀಟಿಗಳು, ಅಂಚೆ ಲಕೋಟೆಗಳು, ಇನ್‌ಲ್ಯಾಂಡ್ ಪತ್ರಗಳು ಹಾಗೂ ಇತರೆ ಅಂಚೆ ಸಾಮಗ್ರಿಗಳ ಮಾರಾಟ, ಅಂಚೆ ಇಲಾಖೆಯಿಂದ ಕಾಲಕಾಲಕ್ಕೆ ಅನುಮತಿಸಲ್ಪಡುವ ಇತರೆ ಚಿಲ್ಲರೆ ಅಂಚೆ ಸೇವೆಗಳು,  ನಾಗರಿಕ ಸೇವೆಗಳು ಹಾಗೂ ಇಲಾಖೆಯಿಂದ ಸೂಚಿಸಲ್ಪಡುವ ಇತರೆ ಸೇವೆಗಳನ್ನು ಒದಗಿಸಬೇಕಾಗುತ್ತದೆ.
ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು. ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು.  ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ ಹೊಂದಿರಬೇಕು.  ಫ್ರಾಂಚೈಸಿ ಮಳಿಗೆ ನಡೆಸಲು ಸೂಕ್ತವಾದ ಸ್ವಂತ ಅಥವಾ ಬಾಡಿಗೆ ಕಟ್ಟಡ/ಸ್ಥಳ ಹೊಂದಿರಬೇಕು.  ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಿದ್ಧರಾಗಿರಬೇಕು. ಅಂಚೆ ಇಲಾಖೆಯ ಫ್ರಾಂಚೈಸಿ ಯೋಜನೆಯ ನಿಯಮಗಳು ಹಾಗೂ ಷರತ್ತುಗಳನ್ನು ಪಾಲಿಸಲು ಒಪ್ಪಿರಬೇಕು.
ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡ್,  ಮತದಾರರ ಗುರುತಿನ ಚೀಟಿ ಅಥವಾ ಇತರೆ ಮಾನ್ಯ ಗುರುತಿನ ದಾಖಲೆ, ವಿಳಾಸದ ಪುರಾವೆ, ಪ್ಯಾನ್ ಕಾರ್ಡ್ ಪ್ರತಿ, ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ,  ಫ್ರಾಂಚೈಸಿ ಮಳಿಗೆ ನಡೆಸಲಿರುವ ಸ್ಥಳದ ವಿವರಗಳು, ಇಲಾಖೆಯು ಅಗತ್ಯವೆಂದು ಸೂಚಿಸುವ ಇತರೆ ದಾಖಲೆಗಳನ್ನು ಸಲ್ಲಿಸಬೇಕು.
ಅರ್ಜಿ ನಮೂನೆಯನ್ನು ಕೊಪ್ಪಳ  ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ಅರ್ಜಿ ನಮೂನೆ ಹಾಗೂ ಫ್ರಾಂಚೈಸಿ ಯೋಜನೆಗೆ ಸಂಬAಧಿಸಿದ ಹೆಚ್ಚಿನ ಮಾಹಿತಿಯನ್ನು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕವೂ ಪಡೆಯಬಹುದು. ಅಗತ್ಯ ದಾಖಲೆಗಳೊಂದಿಗೆ ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯನ್ನು ಅಂಚೆ ಅಧೀಕ್ಷಕರು, ಕೊಪ್ಪಳ ಅಂಚೆ ವಿಭಾಗ, ಕೊಪ್ಪಳ–583231 ವಿಳಾಸಕ್ಕೆ ಸಲ್ಲಿಸಬೇಕು.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಪ್ರದೇಶದ ಸಾರ್ವಜನಿಕರಿಗೆ ಅಂಚೆ ಸೇವೆಗಳನ್ನು ಸುಲಭವಾಗಿ ತಲುಪಿಸುವಲ್ಲಿ ಅಂಚೆ ಇಲಾಖೆಯೊಂದಿಗೆ ಕೈಜೋಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 7411965358, ಇ-ಮೇಲ್:  dokoppal.ka@indiapost.gov.in      ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನಾಗರಾಜ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
ಜಾಹೀರಾತು
Share This Article