Instead of abandoning an unwanted child just anywhere, hand the child over to the Child Welfare Committee
ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ತೊರೆಯದೆ, ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ

ಕೊಪ್ಪಳ ಸೆಪ್ಟೆಂಬರ್ 02 (ಕರ್ನಾಟಕ ವಾರ್ತೆ): ಬೇಡವಾದ ನವಜಾತ ಶಿಶುವನ್ನು ಎಲ್ಲೆಂದರಲ್ಲಿ ತೊರೆದು ಮಗುವಿನ ಜೀವಕ್ಕೆ ಅಪಾಯ ಉಂಟುಮಾಡುವ ಬದಲು, ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮನವಿ ಮಾಡಿದೆ.
ಭಾರತ ಸಂವಿಧಾನದ ಪರಿಚ್ಛೇದ 21ರಡಿ ಪ್ರತಿಯೊಬ್ಬ ನಾಗರಿಕನಿಗೂ ಜೀವಿಸುವ ಹಕ್ಕು ಇದೆ. ನವಜಾತ ಶಿಶುವಿಗೂ ಈ ಹಕ್ಕು ಅನ್ವಯವಾಗುತ್ತದೆ. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ–2015ರನ್ವಯ ಬೇಡವಾದ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಬಹುದಾಗಿದೆ. ಈ ರೀತಿಯಾಗಿ ಮಗುವನ್ನು ಸಮಿತಿಗೆ ಹಾಜರುಪಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ತಿಳಿಸಿದೆ.
ಮಗುವನ್ನು ಎಲ್ಲೆಂದರಲ್ಲಿ ತೊರೆದು ಹೋಗುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇದರಿಂದ ಮಗು ಮೃತಪಟ್ಟರೆ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 91ರನ್ವಯ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಮಗು ಮೃತಪಟ್ಟಿರುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡದೆ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿದರೆ, ಕಲಂ 94ರನ್ವಯ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಇತ್ತೀಚೆಗೆ ಬೆದವಟ್ಟಿ ಗ್ರಾಮದಿಂದ ಬೂದಗುಂಪ ಗ್ರಾಮದ ಕಡೆಗೆ ತೆರಳುವ ರಸ್ತೆಯ ಸವಳಹಳ್ಳಿ ಕೆನಾಲ್ ಬ್ರಿಡ್ಜ್ ಕೆಳಗಿನ ನೀರಿನಲ್ಲಿ ನವಜಾತ ಗಂಡು ಮಗುವಿನ ಮೃತದೇಹ ಪತ್ತೆಯಾಗಿತ್ತು. ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊರತೆಗೆದು ಕುಕನೂರ ತಾಲೂಕು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 106/2026ರಲ್ಲಿ ಪ್ರಕರಣ ದಾಖಲಾಗಿದೆ.
ಈ ರೀತಿಯಾಗಿ ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ತೊರೆದು ಹೋಗುತ್ತಿರುವುದು ಅಮಾನವೀಯ ಹಾಗೂ ಕಳವಳಕಾರಿ ಸಂಗತಿಯಾಗಿದೆ. ಆದ್ದರಿಂದ ಬೇಡವಾದ ಮಗುವನ್ನು ತೊರೆದು ಶಿಕ್ಷೆಗೆ ಗುರಿಯಾಗದೆ, ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸುವುದು, ಮಮತೆಯ ತೊಟ್ಟಿಲಿನಲ್ಲಿ ಇರಿಸುವುದು ಅಥವಾ ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತು ಸಹಾಯವಾಣಿ 112ಕ್ಕೆ ಮಾಹಿತಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

