It is mandatory for PM-Kisan scheme beneficiaries to complete e-KYC.
ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯ

ಕೊಪ್ಪಳ ಆಗಸ್ಟ್ 25, (ಕರ್ನಾಟಕ ವಾರ್ತೆ): ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ಮುಂದಿನ ಕಂತಿನ ಹಣವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗಲು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಪಿಎಂ-ಕಿಸಾನ್ ಯೋಜನೆಯ ಎಲ್ಲಾ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ತಿಳಿಸಲಾಗಿದೆ.
ಪಿಎಂ-ಕಿಸಾನ್ ಯೋಜನೆಯ 24ನೇ ಕಂತಿನ ಹಣವು ತಾತ್ಕಾಲಿಕವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಮುಂದಿನ ಕಂತಿನ ಹಣವನ್ನು ನೇರವಾಗಿ ಫಲಾನುಭವಿಗಳ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಇ-ಕೆವೈಸಿ ಪೂರ್ಣಗೊಂಡಿರುವುದು ಅಗತ್ಯವಾಗಿದೆ. ಆದ್ದರಿಂದ ಜಿಲ್ಲೆಯ ಪ್ರತಿಯೊಬ್ಬ ಪಿಎಂ-ಕಿಸಾನ್ ಫಲಾನುಭವಿಯು ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಬೇಕು.
ಪಿಎಂ-ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣವು ತಾತ್ಕಾಲಿಕವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅರ್ಹ ರೈತರ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗಳಿಗೆ ಹಣ ನೇರವಾಗಿ ಜಮೆಯಾಗಲು ಇ-ಕೆವೈಸಿ ಕಡ್ಡಾಯವಾಗಿದೆ. ಮೃತಪಟ್ಟ ಫಲಾನುಭವಿಗಳನ್ನು ಹೊರಗಿಟ್ಟು, ಕೇವಲ ನೈಜ ಹಾಗೂ ಅರ್ಹ ರೈತರಿಗೆ ಯೋಜನೆಯ ಲಾಭ ತಲುಪಿಸುವ ಉದ್ದೇಶದಿಂದ ಬಯೋಮೆಟ್ರಿಕ್ ಮತ್ತು ಮುಖ ಆಧಾರಿತ ಇ-ಕೆವೈಸಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇ-ಕೆವೈಸಿ ಮಾಡಿಸಬೇಕಾದ ರೈತರ ಸಂಖ್ಯೆ ಕೊಪ್ಪಳ ತಾಲೂಕಿನಲ್ಲಿ 25,869, ಕುಷ್ಟಗಿ ತಾಲೂಕಿನಲ್ಲಿ 35,793, ಯಲಬುರ್ಗಾ ತಾಲೂಕಿನಲ್ಲಿ 21,241, ಕುಕನೂರು ತಾಲೂಕಿನಲ್ಲಿ 14,776, ಗಂಗಾವತಿ ತಾಲೂಕಿನಲ್ಲಿ 11,099, ಕಾರಟಗಿ ತಾಲೂಕಿನಲ್ಲಿ 13,801, ಕನಕಗಿರಿ ತಾಲೂಕಿನಲ್ಲಿ 13,384 ಸೇರಿದಂತೆ ಒಟ್ಟು 1,35,963 ಫಲಾನುಭವಿಗಳು ಇ-ಕೆವೈಸಿ ಮಾಡಿಕೊಳ್ಳಬೇಕು.
ಫಲಾನುಭವಿಗಳು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಅಥವಾ ರೈತ ಸಂಪರ್ಕ ಕೇಂದ್ರಗಳ ಮೂಲಕ ಮೂಲಕ ಬಯೋಮೆಟ್ರಿಕ್/ಬೆರಳಚ್ಚಿನ ದೃಢೀಕರಣದ ಮೂಲಕ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಬಹುದು. ಇದಲ್ಲದೆ, ಪಿಎಂ-ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಮುಖ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವ ಸೌಲಭ್ಯವೂ ಲಭ್ಯವಿದೆ.
ಫಲಾನುಭವಿಗಳು ಗೂಗಲ್ ಪ್ಲೇ ಸ್ಟೋರ್‌ನಿಂದ PM-KISAN ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು, ಅಗತ್ಯವಿರುವ ವಿವರಗಳನ್ನು ನಮೂದಿಸಿ ಹಾಗೂ ಮುಖ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು.
ಈ ಹಿಂದೆ ಒಟಿಪಿ ಆಧಾರಿತ ಇ-ಕೆವೈಸಿ ಮಾಡಿಕೊಳ್ಳುವ ಅವಕಾಶವಿದ್ದರೂ, ಮೃತ ಫಲಾನುಭವಿಗಳ ನಿಖರ ಪರಿಶೀಲನೆ ಹಾಗೂ ಯೋಜನೆಯಡಿ ದೊರೆಯುವ ಆರ್ಥಿಕ ನೆರವು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವುದನ್ನು ಖಚಿತಪಡಿಸುವ ಉದ್ದೇಶದಿಂದ ಬಯೋಮೆಟ್ರಿಕ್ ಹಾಗೂ ಮುಖ ಆಧಾರಿತ ಇ-ಕೆವೈಸಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಆದ್ದರಿಂದ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯ ಎಲ್ಲಾ ಪಿಎಂ-ಕಿಸಾನ್ ಫಲಾನುಭವಿಗಳು ಮತ್ತೊಮ್ಮೆ ಬಯೋಮೆಟ್ರಿಕ್ ಅಥವಾ ಮುಖ ಆಧಾರಿತ ಇ-ಕೆವೈಸಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿಕೊಳ್ಳಬೇಕು. ಇ-ಕೆವೈಸಿ ಪೂರ್ಣಗೊಳಿಸದಿದ್ದಲ್ಲಿ ಮುಂದಿನ ಕಂತಿನ ಹಣ ಜಮೆಯಾಗುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.
ಇ-ಕೆವೈಸಿ ಮಾಡಿಸಿಕೊಳ್ಳಲು ಫಲಾನುಭವಿಗಳು ತಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

