Commercial activities should not be permitted in the park: Basavaraja Magalamani

ಉದ್ಯಾನವನದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು: ಬಸವರಾಜ ಮ್ಯಾಗಳಮನಿ

ಗಂಗಾವತಿ, ಆ.24: ನಗರದ ಬಸ್ ನಿಲ್ದಾಣದ ಸಮೀಪದಲ್ಲಿರುವ ನೆಹರು ಉದ್ಯಾನವನದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ನೀಡಬಾರದು ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ನಗರಸಭೆಯ ವ್ಯವಸ್ಥಾಪಕ ಷಣ್ಮುಖಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ನೆಹರು ಉದ್ಯಾನವನವು ನಗರದ ಸಾರ್ವಜನಿಕರಿಗೆ ಮಾತ್ರವಲ್ಲದೆ ಬಸ್ ನಿಲ್ದಾಣದ ಸಮೀಪ ಇರುವುದರಿಂದ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೂ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.

ಪ್ರಯಾಣಿಕರು ಹಾಗೂ ಸಾರ್ವಜನಿಕರು ಉಪಹಾರ, ಫಲಹಾರ ಸೇವಿಸಿ, ವಿಶ್ರಾಂತಿ ಪಡೆಯಲು ಉದ್ಯಾನವನದ ವಾತಾವರಣ ಸಹಕಾರಿಯಾಗಿದೆ. ಜಿಲ್ಲೆಯಲ್ಲಷ್ಟೇ ಅಲ್ಲದೆ ನೆರೆಹೊರೆಯ ಜಿಲ್ಲೆಗಳಲ್ಲಿಯೂ ಬಸ್ ನಿಲ್ದಾಣದ ಸಮೀಪ ಇಂತಹ ವಿಶಾಲವಾದ ಉದ್ಯಾನವನಗಳು ವಿರಳವಾಗಿವೆ. ಹೀಗಿರುವಾಗ ಉದ್ಯಾನವನದ ಆವರಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ಮಾಹಿತಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದು ಅವರು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯದ ಹಿತವನ್ನು ಕಾಪಾಡುವುದು ಅಗತ್ಯವಾಗಿದೆ. ಅವರಿಗೆ ಸೂಕ್ತವಾದ ಪರ್ಯಾಯ ಸ್ಥಳದಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸುವುದು ನಗರಸಭೆಯ ಜವಾಬ್ದಾರಿಯಾಗಿದೆ. ಆದರೆ ಸಾರ್ವಜನಿಕರ ವಿಶ್ರಾಂತಿ ಹಾಗೂ ಪರಿಸರ ಸಂರಕ್ಷಣೆಗೆ ಮೀಸಲಾಗಿರುವ ಉದ್ಯಾನವನದ ಜಾಗವನ್ನು ಇತರ ವಾಣಿಜ್ಯ ಚಟುವಟಿಕೆಗಳಿಗೆ ಬಳಸುವುದು ಸಮಂಜಸವಲ್ಲ ಎಂದು ಮ್ಯಾಗಳಮನಿ ಅಭಿಪ್ರಾಯಪಟ್ಟರು.
ಉದ್ಯಾನವನಗಳ ಸಂರಕ್ಷಣೆ ಮತ್ತು ಅವುಗಳ ಜಾಗವನ್ನು ಮೂಲ ಉದ್ದೇಶಕ್ಕೆ ಹೊರತಾದ ಚಟುವಟಿಕೆಗಳಿಗೆ ಬಳಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನಗಳ ಹಿನ್ನೆಲೆಯಲ್ಲಿ ನಗರಸಭೆ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಗಂಗಾವತಿಯ ಸಮದ್ ಸಾಬ್ ಲೇಔಟ್‌ನ ಉದ್ಯಾನವನದ ಜಾಗದಲ್ಲಿ ಹಲವು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಬಡ ಕುಟುಂಬಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಡಳಿತ ತೆರವುಗೊಳಿಸಿತ್ತು. ಅದೇ ಮಾದರಿಯಲ್ಲಿ ನೆಹರು ಉದ್ಯಾನವನದ ಜಾಗವನ್ನು ಕೂಡ ಅದರ ಮೂಲ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಅವರು ಆಗ್ರಹಿಸಿದರು.
ಪ್ರಸ್ತುತ ನೆಹರು ಉದ್ಯಾನವನದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ, ಉದ್ಯಾನವನದ ಸ್ವರೂಪಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಹೋರಾಟ ಸಮಿತಿಯಿಂದ ಕಾನೂನು ಹೋರಾಟ ನಡೆಸಲಾಗುವುದು ಎಂದು ಬಸವರಾಜ ಮ್ಯಾಗಳಮನಿ ಎಚ್ಚರಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಮಣ್ಣ ರುದ್ರಾಕ್ಷಿ, ಪಂಪಾಪತಿ ಕುರಿ, ಬೋಗೇಶ್ ಆನೆಗುಂದಿ, ಸೋಮು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


