ದೊಡ್ಡ ಬಂಡವಾಳಗಾರರಿಗೆ ಲಕ್ಷಾಂತರ ಕೋಟಿ ರೂಪಾಯಿ ರೈಟ್‌ಆಫ್, ಬಡವರ ಪಿಂಚಣಿಗೆ ನೂರೆಂಟು ನಿಯಮ: ರಾಮಾಂಜನಪ್ಪ ಆಲ್ದಳ್ಳಿ.

H.Mallikarjun
H.Mallikarjun - Kalyanasiri
4 Min Read

Billions of rupees are being written off for big capitalists, while there are 108 rules for the pension of the poor: Ramanganappa Aldalli.

ಪಿಂಚಣಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಸೆಪ್ಟೆಂಬರ್ 2ರಂದು ಎಸ್‌ಯುಸಿಐ(ಕಮ್ಯುನಿಸ್ಟ್) ಬೃಹತ್ ಪ್ರತಿಭಟನೆ.

ದೊಡ್ಡ ಬಂಡವಾಳಗಾರರಿಗೆ ಲಕ್ಷಾಂತರ ಕೋಟಿ ರೂಪಾಯಿ ರೈಟ್‌ಆಫ್, ಬಡವರ ಪಿಂಚಣಿಗೆ ನೂರೆಂಟು ನಿಯಮ: ರಾಮಾಂಜನಪ್ಪ ಆಲ್ದಳ್ಳಿ.

  ಕೊಪ್ಪಳ:   ವೃದ್ಧರು, ವಿಧವೆಯರು, ವಿಕಲಚೇತನರು, ಅವಿವಾಹಿತ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ನೀಡಲಾಗುತ್ತಿರುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಹಲವು ತಿಂಗಳುಗಳಿಂದ ಸ್ಥಗಿತಗೊಳಿಸಿರುವುದನ್ನು ಖಂಡಿಸಿ, ಅರ್ಹ ಫಲಾನುಭವಿಗಳಿಗೆ ಬಾಕಿ ಸಮೇತ ಕೂಡಲೇ ಪಿಂಚಣಿ ಪಾವತಿಸಬೇಕೆಂದು ಆಗ್ರಹಿಸಿ ಸೆಪ್ಟೆಂಬರ್ 2ರಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಾಮಾಂಜನಪ್ಪ ಆಲ್ದಳ್ಳಿ ತಿಳಿಸಿದರು.
ಕೊಪ್ಪಳದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಂಚಣಿ ಪಡೆಯುತ್ತಿರುವವರಲ್ಲಿ ಅನರ್ಹ ಫಲಾನುಭವಿಗಳಿದ್ದಾರೆ ಎಂಬ ನೆಪದಲ್ಲಿ ಅರ್ಹ ಫಲಾನುಭವಿಗಳಿಗೂ ಪಿಂಚಣಿ ಸ್ಥಗಿತಗೊಳಿಸಿರುವುದು ಅತ್ಯಂತ ಅಮಾನವೀಯ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುತೇಕ ವೃದ್ಧರು ತಮ್ಮ ಔಷಧಿ, ಆಸ್ಪತ್ರೆ ಹಾಗೂ ದಿನನಿತ್ಯದ ಅಗತ್ಯಗಳಿಗೆ ಪಿಂಚಣಿಯನ್ನೇ ಅವಲಂಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಐದು ತಿಂಗಳಿನಿಂದ ಪಿಂಚಣಿ ಸ್ಥಗಿತಗೊಂಡಿರುವುದರಿಂದ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಪ್ರದೇಶದ ಅನಕ್ಷರಸ್ಥರು ಮತ್ತು ವಯೋವೃದ್ಧರಿಗೆ ಅಗತ್ಯ ಮಾಹಿತಿಯನ್ನು ಸಮರ್ಪಕವಾಗಿ ನೀಡದೆ, ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಮಾಡಿರುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ಸುಮಾರು 18 ಲಕ್ಷ ಪಿಂಚಣಿ ಫಲಾನುಭವಿಗಳನ್ನು ಸಂಶಯಾಸ್ಪದ ಪಟ್ಟಿಗೆ ಸೇರಿಸಲಾಗಿದೆ ಎಂಬ ಮಾಹಿತಿ ಹೊರಬಂದಿದೆ. ನಿಗದಿತ ಅವಧಿಯಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸದಿದ್ದರೆ ಪಿಂಚಣಿ ಯೋಜನೆಯಿಂದ ಕೈಬಿಡುವುದಾಗಿ ತಿಳಿಸಿರುವುದು ನೈಜ ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ದಾಖಲೆ ಸಲ್ಲಿಸುವ ಅವಧಿಯನ್ನು ವಿಸ್ತರಿಸುವುದಾಗಿ ರಾಜ್ಯ ಮಟ್ಟದ ಅಧಿಕಾರಿಗಳು ಭರವಸೆ ನೀಡಿದ್ದು, ಅದನ್ನು ಜಿಲ್ಲಾಡಳಿತ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕುಟುಂಬದ ವಾರ್ಷಿಕ ಆದಾಯವನ್ನು ಕೇವಲ 32 ಸಾವಿರ ರೂಪಾಯಿಗಳಿಗೆ ಮಿತಿಗೊಳಿಸಿ ಹೊಸ ಆದಾಯ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿರುವುದು ಅವೈಜ್ಞಾನಿಕವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷಕ್ಕೆ 100 ದಿನ ಕೆಲಸ ಮಾಡುವ ಕೂಲಿ ಕಾರ್ಮಿಕನ ಆದಾಯವೂ ಈ ಮಿತಿಯನ್ನು ಮೀರುತ್ತದೆ. ಆದ್ದರಿಂದ ಈ ಅವಾಸ್ತವಿಕ ಆದಾಯ ಮಿತಿಯನ್ನು ರದ್ದುಪಡಿಸಿ, ಹಿಂದಿನಂತೆ ಬಿಪಿಎಲ್ ಪಡಿತರ ಚೀಟಿಯನ್ನು ಮಾನದಂಡವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಆದಾಯ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ವಯೋವೃದ್ಧರು ಬೆಳಗ್ಗಿನಿಂದಲೇ ತಾಲೂಕು ಮತ್ತು ನಾಡ ಕಚೇರಿಗಳ ಮುಂದೆ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವೇ ಹಿಂದೆ ಘೋಷಿಸಿದಂತೆ ಅಧಿಕಾರಿಗಳು ಫಲಾನುಭವಿಗಳ ಮನೆಗಳಿಗೆ ತೆರಳಿ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಬೇಕು. ಬಡವರು ತಮ್ಮ ದಿನದ ಕೂಲಿ ಕಳೆದುಕೊಂಡು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ದೊಡ್ಡ ಉದ್ಯಮಿಗಳು ಮತ್ತು ಸೇವಾ ವಲಯಕ್ಕೆ ನೀಡಲಾಗಿದ್ದ ಸುಮಾರು 9.95 ಲಕ್ಷ ಕೋಟಿ ರೂಪಾಯಿ ಸಾಲವನ್ನು ಕಳೆದ 12 ಹಣಕಾಸು ವರ್ಷಗಳಲ್ಲಿ ಬ್ಯಾಂಕ್‌ಗಳು ರೈಟ್‌ಆಫ್ ಮಾಡಿರುವುದಾಗಿ ಇತ್ತೀಚೆಗೆ ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ದೊಡ್ಡ ಬಂಡವಾಳಗಾರರ ಬೃಹತ್ ಸಾಲಗಳನ್ನು ರೈಟ್‌ಆಫ್ ಮಾಡುವ ವ್ಯವಸ್ಥೆ ನಡೆಯುತ್ತಿರುವ ಸಂದರ್ಭದಲ್ಲಿ, ಬಡವರು ಪಡೆಯುವ ಅಲ್ಪ ಮೊತ್ತದ ಸಾಮಾಜಿಕ ಭದ್ರತಾ ಪಿಂಚಣಿಗೂ ನೂರೆಂಟು ನಿಯಮಗಳನ್ನು ವಿಧಿಸಿ ತಿಂಗಳುಗಟ್ಟಲೆ ಹಣವನ್ನು ಸ್ಥಗಿತಗೊಳಿಸಿರುವುದು ಸರ್ಕಾರದ ಆದ್ಯತೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.
ದೊಡ್ಡ ಬಂಡವಾಳಗಾರರಿಗೆ ವಿವಿಧ ಉತ್ತೇಜಕಗಳು, ರಿಯಾಯಿತಿಗಳು ಹಾಗೂ ಹಣಕಾಸು ಸೌಲಭ್ಯಗಳನ್ನು ನೀಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವೃದ್ಧರು, ವಿಧವೆಯರು, ವಿಕಲಚೇತನರು ಸೇರಿದಂತೆ ಬಡವರಿಗೆ ನೀಡುವ ಅಲ್ಪ ಮೊತ್ತದ ಪಿಂಚಣಿಯ ವಿಚಾರದಲ್ಲಿ ಮಾತ್ರ ಕಠಿಣ ನಿಯಮಗಳನ್ನು ಹೇರುತ್ತಿವೆ. ಬಡವರ ಬದುಕಿಗೆ ಆಸರೆಯಾಗಿರುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಕಡಿತಗೊಳಿಸುವ ಅಥವಾ ಸ್ಥಗಿತಗೊಳಿಸುವ ಯಾವುದೇ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಪಿಂಚಣಿ ಮರುಪರಿಶೀಲನಾ ಕಾರ್ಯಕ್ಕೆ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ತಾಲೂಕು ಮತ್ತು ನಾಡ ಕಚೇರಿಗಳಲ್ಲೂ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಮರುಪರಿಶೀಲನೆ ಹಾಗೂ ದಾಖಲೆ ಸಲ್ಲಿಕೆ ಕುರಿತು ಪ್ರತಿಯೊಬ್ಬ ಫಲಾನುಭವಿಗೂ ಮಾಹಿತಿ ತಲುಪುವಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಅಧಿಕಾರಿಗಳು ಮನೆಮನೆಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಿ, ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಕೂಡಲೇ ಮರುಪ್ರಾರಂಭಿಸಿ, ಬಾಕಿ ಉಳಿದಿರುವ ಹಣವನ್ನು ಸಂಪೂರ್ಣವಾಗಿ ಪಾವತಿಸಬೇಕು ಎಂದು ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷ ಆಗ್ರಹಿಸಿದೆ.
ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 2ರಂದು ಬೆಳಗ್ಗೆ 11 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆ ಮುಂದೆ ಸೇರಿ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಡವರು, ವೃದ್ಧರು, ವಿಧವೆಯರು, ವಿಕಲಚೇತನರು ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಫಲಾನುಭವಿಗಳ ನ್ಯಾಯಯುತ ಹಕ್ಕುಗಳಿಗಾಗಿ ನಡೆಯಲಿರುವ ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಪಕ್ಷ ಮನವಿ ಮಾಡಿದೆ.
ಪತ್ರಿಕಾ ಗೋಷ್ಠಿಯಲ್ಲಿ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಮುಖಂಡರಾದ ಶರಣು ಗಡ್ಡಿ ಉಪಸ್ಥಿತರಿದ್ದರು
Total Views: 0
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Share This Article