ಡಿ.ದೇವರಾಜ ಅರಸು ರವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ

H.Mallikarjun
H.Mallikarjun - Kalyanasiri
6 Min Read

MLA K. Raghavendra Hitnal at the 111th birth anniversary program of D. Devaraj Arasu

ಡಿ.ದೇವರಾಜ ಅರಸು ರವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ


ಶೋಷಿತರ, ದೀನದಲಿತರ, ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಭದ್ರ ಬುನಾದಿ ಹಾಕಿದ ಧೀಮಂತ ನಾಯಕ ಡಿ.ದೇವರಾಜ ಅರಸು
ಕೊಪ್ಪಳ ಆಗಸ್ಟ್ 20 (ಕರ್ನಾಟಕ ವಾರ್ತೆ): ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ರವರು, ರಾಜ್ಯದ ಶೋಷಿತರ, ದೀನದಲಿತರ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಭದ್ರ ಬುನಾದಿ ಹಾಕಿದ ಧೀಮಂತ ನಾಯಕರಾಗಿದ್ದಾರೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 20 ರಂದು ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುನ್ಯಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸು ರವರ 111ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸುದೀರ್ಘ ವರ್ಷಗಳ ಕಾಲ ಆಡಳಿತ ನಡೆಸಿದ ಅರಸು ರವರು ಐತಿಹಾಸಿಕ ಸುಧಾರಣೆಗಳನ್ನು ತಂದರು. ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಶಕ್ತಿಯನ್ನು ತುಂಬಿದರು. `ಉಳುವವನೇ ಭೂಮಿಯ ಒಡೆಯ’ ಕಾಯ್ದೆಯ ಮೂಲಕ ಸುಮಾರು 21 ಲಕ್ಷಕ್ಕೂ ಹೆಚ್ಚು ಎಕರೆ ಭೂಮಿಯನ್ನು ಬಡವರಿಗೆ ಹಂಚಿದ ಕೀರ್ತಿ ಅವರದ್ದಾಗಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯಗಳನ್ನು ಪ್ರಾರಂಭಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ರಾಜ್ಯದ ಅನೇಕ ಯುವ ನಾಯಕರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವಲ್ಲಿ ಅರಸು ರವರು ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯ ಹಾಗೂ ಅರಸು ರವರ `ಸರ್ವರಿಗೂ ಸಮಪಾಲು, ಸಮಬಾಳು’ ತತ್ವದಂತೆ ನಮ್ಮ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅವುಗಳ ಲಾಭವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುತ್ತಿದೆ. ಮುಖ್ಯ ಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರ ನೇತೃತ್ವದ ನಮ್ಮ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ್ ಬಸ್ ಪಾಸ್ ಸೌಲಭ್ಯವನ್ನು ಜಾರಿಗೊಳಿಸಿದೆ. ಇದಲ್ಲದೇ ಯುವಜನತೆಗಾಗಿ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆಯಾದ ‘ಭಾರತ್ ಜೋಡೋ ಯುವಕ ಸಂಘ’ಕ್ಕೆ 16 ರಿಂದ 35 ವರ್ಷದೊಳಗಿನ ಎಲ್ಲಾ ಯುವಕ-ಯುವತಿಯರು ಕಡ್ಡಾಯವಾಗಿ ಸೇರ್ಪಡೆಗೊಳ್ಳಬೇಕು. ಇದರಿಂದ ಯುವಜನತೆಯಲ್ಲಿ ನಾಯಕತ್ವ ಗುಣಗಳು, ವೃತ್ತಿಪರ ಕೌಶಲ್ಯಗಳು ಹಾಗೂ ವ್ಯಕ್ತಿತ್ವ ವಿಕಸನಗೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಸೌಲಭ್ಯ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕ ಹಾಗೂ ಸಾಧನೆಯೊಂದಿಗೆ ತಮ್ಮ ವೃತ್ತಿಜೀವನ ರೂಪಿಸಿಕೊಳ್ಳುವ ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರ ದಿವಂಗತ ಡಿ. ದೇವರಾಜ ಅರಸು ಅವರಿಗೆ ಗೌರವ ಸಲ್ಲಿಸಬೇಕು. ಹಾಸ್ಟೆಲ್ ಸೌಲಭ್ಯ ಪಡೆದ ವಿದ್ಯಾರ್ಥಿಗಳು ಕೇವಲ ಉತ್ತೀರ್ಣರಾಗುವುದಷ್ಟೇ ಅಲ್ಲದೆ ಸರಾಸರಿಗಿಂತ ಹೆಚ್ಚಿನ ಸಾಧನೆ ಮಾಡಬೇಕು. ಸೌಲಭ್ಯಗಳನ್ನು ಬಳಸಿಕೊಂಡು ಸರಿಯಾಗಿ ಓದದೆ ಹೋದರೆ ಅದು ತಮಗೆ, ಕುಟುಂಬಕ್ಕೆ ಹಾಗೂ ಇಲಾಖೆಗೆ ಮಾಡುವ ಅನ್ಯಾಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರವು ಜಾರಿಗೆ ತಂದ ‘ಭಾರತ್ ಜೋಡೋ ಯುವಕ ಸಂಘ’ಕ್ಕೆ 16 ರಿಂದ 35 ವರ್ಷದೊಳಗಿನ ಎಲ್ಲಾ ಯುವಕ-ಯುವತಿಯರು ಕಡ್ಡಾಯವಾಗಿ ಸೇರ್ಪಡೆಗೊಳ್ಳಬೇಕು. ಕೇವಲ 10 ರೂಪಾಯಿ ನೋಂದಣಿ ಶುಲ್ಕ ಹಾಗೂ ಆಧಾರ್ ಕಾರ್ಡ್ ವಿವರಗಳನ್ನು ನೀಡಿ ಮೊಬೈಲ್ ಆ್ಯಪ್ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. ಹಾಸ್ಟೆಲ್ ವಾರ್ಡನ್‌ಗಳ ಮೂಲಕ ಎಲ್ಲರೂ ತಪ್ಪದೇ ನೋಂದಣಿ ಮಾಡಿಸಿಕೊಳ್ಳುವಂತೆ ಮತ್ತು ತಮ್ಮ ಸ್ನೇಹಿತರು ಹಾಗೂ ಕುಟುಂಬದ ಯುವಕರನ್ನೂ ಪ್ರೇರೇಪಿಸುವಂತೆ ತಿಳಿಸಿದರು.
ಯಲಬುರ್ಗಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಂಕ್ರಯ್ಯ ಅಬ್ಬಿಗೇರಿಮಠ ಅವರು ಡಿ. ದೇವರಾಜ ಅರಸು ರವರ ಕುರಿತು ವಿಶೇಷ ಉಪನ್ಯಾಸ ನೀಡಿ, ರಾಜ್ಯದ ದೀನದಲಿತರು, ಹಿಂದುಳಿದ ವರ್ಗಗಳು ಹಾಗೂ ಶೋಷಿತರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಚಿಂತನೆಗಳು ಸದಾ ಪ್ರಸ್ತುತವಾಗಿವೆ. ಅವರು 1974ರಲ್ಲಿ ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯ ಮೂಲಕ ‘ಉಳುವವನೇ ಭೂಮಿಯ ಒಡೆಯ’ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಲಕ್ಷಾಂತರ ಕೃಷಿ ಕಾರ್ಮಿಕರು ಹಾಗೂ ಗೇಣಿದಾರರಿಗೆ ಭೂಮಿಯ ಹಕ್ಕು ಕೊಡಿಸಿದ್ದರು. ರಾಜ್ಯದಲ್ಲಿ ಜೀತ ಪದ್ಧತಿ ನಿಷೇಧ, ಮಲ ಹೊರುವ ಅನಿಷ್ಟ ಪದ್ಧತಿ ರದ್ಧತಿ, ಬಡವರ ಸಾಲಮನ್ನಾ (ಋಣಮುಕ್ತ ಕಾಯ್ದೆ) ಹಾಗೂ ಬಡ ಕುಟುಂಬಗಳಿಗೆ ‘ಭಾಗ್ಯಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ನೀಡುವ ಐತಿಹಾಸಿಕ ಕಾರ್ಯಕ್ರಮಗಳನ್ನು ಅರಸು ರವರು ಜಾರಿಗೆ ತಂದರು ಎಂದರು.
ಹಿಂದುಳಿದ ವರ್ಗಗಳ ಆಯೋಗದ ಎಲ್.ಜಿ. ಹಾವನೂರು ವರದಿ ಮೂಲಕ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದ್ದು ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ ಡಿ. ದೇವರಾಜ ಅರಸು ರವರ ಶ್ರಮ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಭದ್ರ ಬುನಾದಿಯಾಯಿತು. 1973ರ ನವೆಂಬರ್ 1 ರಂದು ಅಂದಿನ ‘ಮೈಸೂರು ರಾಜ್ಯ’ಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡುವ ಮೂಲಕ ಕನ್ನಡಿಗರ ಅಸ್ಮಿತೆಯನ್ನು ಎತ್ತಿಹಿಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕೇವಲ ರಾಜಕೀಯ ಮುತ್ಸದ್ದಿಯಷ್ಟೇ ಅಲ್ಲದೆ, ಉತ್ತಮ ಸಂಗೀತಗಾರ, ಸಾಹಿತ್ಯಾಸಕ್ತ ಹಾಗೂ ದೃಢ ನಿಲುವಿನ ವ್ಯಕ್ತಿತ್ವ ಅರಸು ಅವರದ್ದಾಗಿತ್ತು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಾಗಮಣಿ ಹೊಸಮನಿ ಅವರು ಮಾತನಾಡಿ, ಡಿ.ದೇವರಾಜ ಅರಸು ರವರ 1977 ಹಿಂದುಳಿದ ವರ್ಗಗಳ ಹಾಗೂ ದೀನದಲಿತರ ಅಭಿವೃದ್ಧಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಿದ್ದು, ಇಂದು ಹೆಮ್ಮರವಾಗಿ ಬೆಳೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯವತಿಯಿಂದ 42 ಮೆಟ್ರಿಕ್ ಪೂರ್ವ ವಸತಿ ನಿಲಯಗಳು, 48 ಮೆಟ್ರಿಕ್ ನಂತರದ ವಸತಿ ನಿಲಯಗಳು, 01 ಅಲೆಮಾರಿ ಜನಾಂಗದ ಆಶ್ರಮಶಾಲೆ ಮತ್ತು 06 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 01 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಹಾಗೂ 01 ಅಲೆಮಾರಿ ಆಶ್ರಮ ಶಾಲೆಗಳು ಈ ರೀತಿಯಾಗಿ ಒಟ್ಟು 99 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳಲ್ಲಿ ಒಟ್ಟು 10,779 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಭಾರತೀಯ ಸೇನೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ, ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಲು ಇಲಾಖೆಯ ಸೇನಾ ಆಯ್ಕೆ ಪೂರ್ವ ತರಬೇತಿ ಕೇಂದ್ರವನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಪ್ರಾರಂಭಿಸಲಾಗಿದ್ದು, 2026-27ನೇ ಸಾಲಿನಲ್ಲಿ ಮೊದಲನೇ ಬ್ಯಾಚ್‌ನಲ್ಲಿ 100 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿರುತ್ತದೆ. ಎರಡನೇ ಬ್ಯಾಚ್‌ನ 100 ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ತರಬೇತಿಯನ್ನು ಪ್ರಾರಂಭಿಸಲಾಗುವುದು. 2025-26ನೇ ಸಾಲಿನಲ್ಲಿ ಅಲೆಮಾರಿ/ಅರೆಅಲೆಮಾರಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ರೂ. 52.11 ಲಕ್ಷಗಳನ್ನು 1219 ವಿದ್ಯಾರ್ಥಿಗಳಿಗೆ ನೇರವಾಗಿ ಡಿ.ಬಿ.ಟಿ. ಮುಖಾಂತರ ಹಣ ಪಾವತಿಸಲಾಗಿದೆ. ಮೆಟ್ರಿಕ್ ನಂತರ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಕಾರ್ಯಕ್ರಮಕ್ಕೆ ರೂ. 718.24 ಲಕ್ಷಗಳನ್ನು 6953 ವಿದ್ಯಾರ್ಥಿಗಳಿಗೆ ನೇರವಾಗಿ ಡಿ.ಬಿ.ಟಿ. ಮುಖಾಂತರ ಹಣ ಪಾವತಿಸಲಾಗಿದೆ. ಕಾನೂನು ಪದವೀಧರರಿಗೆ ಇಲಾಖೆಯಿಂದ ಪ್ರತಿ ವರ್ಷ 10 ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಪ್ರತಿ ಮಾಹೆ ರೂ. 4000 ರಂತೆ 4 ವರ್ಷಗಳ ವರೆಗೆ ತರಬೇತಿ ಭತ್ಯೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
*ಸಾಧಕರಿಗೆ ಸನ್ಮಾನ:* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ ಸೌಲಭ್ಯ ಪಡೆದು ವಿದ್ಯಾಭ್ಯಾಸ ಮಾಡಿ, ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ ಹಾಗೂ ಪದವಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಇಲಾಖೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ, ಉತ್ತಮವಾಗಿ ಕಾರ್ಯನಿರ್ವಹಿಸಿದ ವಸತಿ ಶಾಲೆಗಳ/ ವಸತಿ ನಿಲಯಗಳ ಮೇಲ್ವಿಚಾರಕರಿಗೆ ಮತ್ತು ಅಡುಗೆ ಸಿಬ್ಬಂದಿಗಳಿಗೆ ಹಾಗೂ ಡಿ.ದೇವರಾಜ ಅರಸು ರವರ 111ನೇ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮತ್ತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷರಾದ ಅಮಜದ್ ಪಟೇಲ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಎಸ್.ಎಂ ಕಾಂಬ್ಳೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜಪ್ಪ ಸೊಗಲದ, ತಾ.ಪಂ ಇಓ ದುಂಡಪ್ಪ ತುರಾದಿ, ಬಿಇಓ ಹೊರಪೇಟಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಹೆಚ್ ಭೋವಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕಾಧಿಕಾರಿಗಳಾದ ನಾಗರತ್ನ ಹಾಗೂ ಶಿವಶಂಕರ ಕರಡಕಲ್, ತಾಲ್ಲೂಕು ವಿಸ್ತರಣಾಧಿಕಾರಿ ಅಮರೇಶ ಹುಬ್ಬಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಕಛೇರಿಯ ಮೇಲ್ವಿಚಾರಕಿ ಸುಧಾ ಮುದುಕಣ್ಣನವರ್, ಪತ್ರಾಂಕಿತ ವ್ಯವಸ್ಥಾಪಕಿ ಉಷಾ ಮುಜುಮದಾರ, ಲೆಕ್ಕ ಅಧೀಕ್ಷಕ ರೋಹಿತ್ ಪಾಟೀಲ್, ಪ್ರ.ದ.ಸ ಮನೋಜ್ ಕುಮಾರ್ ಮತ್ತು ವಿರೂಪನಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಹಾಸ್ಟೆಲ್ ವಾರ್ಡನ್‌ಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
****
Total Views: 0
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Share This Article