ಎಸ್.ಎಸ್.ಎಲ್.ಸಿ & ಪಿಯುಸಿ ವಿದ್ಯಾರ್ಥಿನಿಯರಿಗೆ `ಭವಿಷ್ಯದ ದಾರಿ’ ವೃತ್ತಿ ಮಾರ್ಗದರ್ಶನ

H.Mallikarjun
H.Mallikarjun - Kalyanasiri
2 Min Read

Path to the Future' Career Guidance for SSLC and PUC Female Students

ಎಸ್.ಎಸ್.ಎಲ್.ಸಿ & ಪಿಯುಸಿ ವಿದ್ಯಾರ್ಥಿನಿಯರಿಗೆ `ಭವಿಷ್ಯದ ದಾರಿ’ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಜಾಹೀರಾತು

ಕೊಪ್ಪಳ ಆಗಸ್ಟ್ 07 (ಕರ್ನಾಟಕ ವಾರ್ತೆ): ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿನಿಯರಿಗಾಗಿ “ಭವಿಷ್ಯದ ದಾರಿ” ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವು ಕೊಪ್ಪಳ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ (ಆ. 6ರಂದು) ಯಶಸ್ವಿಯಾಗಿ ನಡೆಯಿತು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಅಡಿವೇಶ ಗಿರಪ್ಪ ಇಟಗಿ ಅವರು ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಮಕ್ಕಳ ರಕ್ಷಣೆ, ಹಕ್ಕುಗಳು ಹಾಗೂ ಸುರಕ್ಷಿತ ಮತ್ತು ಅಸುರಕ್ಷಿತ ವಾತಾವರಣದ ಕುರಿತು ಪ್ರತಿಯೊಬ್ಬರೂ ಜಾಗೃತರಾಗಿರಬೇಕು. 0 ಯಿಂದ 18 ವರ್ಷದ ಮಕ್ಕಳಿಗೆ ಮೊಬೈಲ್ ಬ್ಯಾನ್ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ವಿದ್ಯಾರ್ಥಿನಿಯರು ಕೇವಲ ಅಂಕಗಳಿಗೆ ಆದ್ಯತೆ ನೀಡದೆ, ದೈಹಿಕವಾಗಿ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

*ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ:* ಹರೀಶ್ ಜೋಗಿ ಅವರು, ಬಾಲ್ಯ ವಿವಾಹ ತಡೆ, ಪೋಕ್ಸೋ ಕಾಯ್ದೆ, ಮಕ್ಕಳ ಸುರಕ್ಷತೆ, ಮೊಬೈಲ್ ಫೋನಿನ ದುರ್ಬಳಕೆ ಹಾಗೂ ಸೈಬರ್ ಅಪರಾಧಗಳ ಕುರಿತು ವಿದ್ಯಾರ್ಥಿನಿಯರಿಗೆ ವಿಸ್ತೃತ ಮಾಹಿತಿ ನೀಡಿದರು.

ಸಿದ್ದಪ್ಪ ಕುರಿ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬರೀ ಸರ್ಕಾರಿ ಉದ್ಯೋಗಕ್ಕೆ ಅಂಟಿಕೊಳ್ಳದೆ, ಖಾಸಗಿ ವಲಯದಲ್ಲೂ ಅವಕಾಶಗಳನ್ನು ಹುಡುಕಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಬಂಡವಾಳ ಸಹಿತ ಅಥವಾ ರಹಿತವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೈಗೊಳ್ಳಬಹುದಾದ ಉದ್ಯೋಗಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕಡಗದ ಅವರು ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಸಬಲೀಕರಣದ ಕುರಿತು ಮಾತನಾಡಿ, “ಯಾವುದೇ ದುರಭ್ಯಾಸ ಅಥವಾ ವ್ಯಸನಗಳಿಗೆ ಒಳಗಾಗದೆ ಶಿಕ್ಷಣವನ್ನು ಪೂರ್ಣಗೊಳಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು,” ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅಮರೇಶ್ ಹಾವಿನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ವಿದ್ಯಾರ್ಥಿ ದೆಸೆಯಲ್ಲಿ ಗಮನ ಬೇರೆಡೆಗೆ ಹರಿಯದಂತೆ, ಪ್ರೀತಿ-ಪ್ರೇಮದಂತಹ ವಿಷಯಗಳಿಂದ ದೂರವಿದ್ದು, ದೃಢ ಸಂಕಲ್ಪದೊಂದಿಗೆ ಗುರಿ ಸಾಧಿಸಬೇಕು. ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

*ಸನ್ಮಾನ:* ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದಅಡಿವೇಶ ಗಿರಪ್ಪ ಇಟಗಿ ಹಾಗೂ ಯೋಜನಾಧಿಕಾರಿಗಳಾದ ವಿರೂಪಾಕ್ಷಿಗೌಡ ವಿ. ಪಾಟೀಲ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಅನ್ನಪೂರ್ಣ ಕುಬಕಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ್, ಬಾಲ ವಿಕಾಸ ಅಕಾಡೆಮಿ ಸದಸ್ಯರಾದ ಹರ್ಷವರ್ಧನ್, ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿಗಳಾದ ಶ್ರೀದೇವಿ, ಫಾತಿಮಾ, ಶೃತಿ, ಪುನೀತ್, ಪ್ರಮೋದ ಕುಮಾರ, ಅಕ್ಕಪಡೆಯ ಸಿಬ್ಬಂದಿಗಳು, ಕಾಲೇಜಿನ ಬೋಧಕ ವೃಂದ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Total Views: 0
Share This Article