ಮಾನವ ಕಳ್ಳಸಾಗಾಣಿಕೆ ತಡೆಗೆ ಜಾಗೃತಿ ಅಗತ್ಯ: ಯಮುನಾ ಬೆಸ್ತರ್

H.Mallikarjun
H.Mallikarjun - Kalyanasiri
2 Min Read
Awareness needed to prevent human trafficking: Yamuna Bestar

ಮಾನವ ಕಳ್ಳಸಾಗಾಣಿಕೆ ತಡೆಗೆ ಜಾಗೃತಿ ಅಗತ್ಯ: ಯಮುನಾ ಬೆಸ್ತರ್

ಜಾಹೀರಾತು

ಕೊಪ್ಪಳ, ಜು. 31: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್, ಮಹಿಳಾ ಸಬಲೀಕರಣ ಯೋಜನೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ರುಡ್‌ಸೆಟ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಿಟ್ನಾಳ ಗ್ರಾಮದ ಸಂಜೀವಿನಿ ವರ್ಕ್ ಶೆಡ್‌ನಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ಕುರಿತು ಕಾನೂನು ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಶ್ರೀಮತಿ ಯಮುನಾ ಬೆಸ್ತರ್ ಮಾತನಾಡಿ, ಮಕ್ಕಳ ಮತ್ತು ಮಹಿಳೆಯರ ಕಳ್ಳಸಾಗಾಣಿಕೆ (Human Trafficking) ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅತ್ಯಂತ ಕ್ರೂರ ಹಾಗೂ ಅಮಾನವೀಯ ಸಾಮಾಜಿಕ ಪಿಡುಗಾಗಿದೆ. ಬಡತನ, ಅಜ್ಞಾನ ಹಾಗೂ ಉದ್ಯೋಗದ ಆಮಿಷಗಳನ್ನು ದುರುಪಯೋಗಪಡಿಸಿಕೊಂಡು ಅಪರಾಧಿ ಜಾಲಗಳು ಮಹಿಳೆಯರು ಮತ್ತು ಮಕ್ಕಳನ್ನು ಲೈಂಗಿಕ ಶೋಷಣೆ, ಬಲವಂತದ ಮದುವೆ, ಭಿಕ್ಷಾಟನೆ, ಅಪರಾಧ ಕೃತ್ಯಗಳು, ಅಂಗಾಂಗ ಮಾರಾಟ ಹಾಗೂ ನವಜಾತ ಶಿಶುಗಳನ್ನು ಕಾನೂನುಬಾಹಿರವಾಗಿ ದತ್ತು ನೀಡುವಂತಹ ಕೃತ್ಯಗಳಿಗೆ ಬಲಿಪಶುಗಳನ್ನಾಗಿ ಮಾಡುತ್ತಿವೆ ಎಂದು ಹೇಳಿದರು.

ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿ 1098, ಮಹಿಳಾ ಸಹಾಯವಾಣಿ 181 ಹಾಗೂ ತುರ್ತು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು. ಯಾವುದೇ ಆಸೆ-ಆಮಿಷಗಳಿಗೆ ಮರುಳಾಗದೆ ಜಾಗೃತರಾಗಬೇಕು ಹಾಗೂ ಅಗತ್ಯವಿದ್ದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್‌ನ ಸೇವೆ ಮತ್ತು ಸಹಾಯವನ್ನು ಪಡೆಯಬಹುದೆಂದು ತಿಳಿಸಿದರು.

ಮಹಿಳಾ ಸಬಲೀಕರಣ ಘಟಕದ ಶ್ರೀಮತಿ ಫಾತಿಮಾ ಮಾತನಾಡಿ, ಮಹಿಳಾ ಸಹಾಯವಾಣಿ 181, ಮಹಿಳೆಯರನ್ನು ಕೌಟುಂಬಿಕ ಹಿಂಸೆಯಿಂದ ಸಂರಕ್ಷಿಸುವ ಕಾಯ್ದೆ–2005 ಮತ್ತು ನಿಯಮಾವಳಿ–2006ರ ಪರಿಣಾಮಕಾರಿ ಅನುಷ್ಠಾನ, ಅಪ್ರಾಪ್ತ ವಯಸ್ಸಿನ ಮಕ್ಕಳ ಸುರಕ್ಷತೆ, ಭದ್ರತೆ ಹಾಗೂ ಶಿಕ್ಷಣದ ಮಹತ್ವದ ಕುರಿತು ಮಾಹಿತಿ ನೀಡಿದರು. ಸಂಕಷ್ಟದಲ್ಲಿರುವ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಸಖಿ ಒನ್ ಸ್ಟಾಪ್ ಸೆಂಟರ್‌ನಿಂದ ಅಗತ್ಯ ನೆರವು, ಸಮಾಲೋಚನೆ ಹಾಗೂ ಬೆಂಬಲ ದೊರೆಯಲಿದೆ ಎಂದರು.

ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಆರ್ಥಿಕ ಭದ್ರತೆ, ಕೌಶಲ್ಯಾಧಾರಿತ ತರಬೇತಿ, ಮಾರ್ಗದರ್ಶನ ಮತ್ತು ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಇಲಾಖೆಯ ಮೂಲಕ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಗೀತಾ, ಸಂಜೀವಿನಿ ಘಟಕದ ರೇಣುಕಾ ಹಾಗೂ ಈರಮ್ಮ, ಸಖಿ ಒನ್ ಸ್ಟಾಪ್ ಸೆಂಟರ್‌ನ ಸಾಮಾಜಿಕ ಕಾರ್ಯಕರ್ತೆ ನಿರ್ಮಲ, ತರಬೇತಿ ಸಂಪನ್ಮೂಲ ವ್ಯಕ್ತಿ ಅನ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Total Views: 0
Share This Article