ವಿಬಿ ರಾಮ್ ಜಿ ಯೋಜನೆಯ ತಾಂತ್ರಿಕ ಸಮಸ್ಯೆ ಸರಿಪಡಿಸಿ

H.Mallikarjun
H.Mallikarjun - Kalyanasiri
3 Min Read





ವಿಬಿ ರಾಮ್ ಜಿ ಯೋಜನೆಯ ತಾಂತ್ರಿಕ ಸಮಸ್ಯೆ ಸರಿಪಡಿಸಿಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಕೊಪ್ಪಳ ಜಿಪಂ ಸಿಇಒಗೆ ಮನವಿ

Memorandum submitted to Koppal Zilla Panchayat CEO by the Panchayat Development Officers' Welfare Association.

ಕೊಪ್ಪಳ : ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)- ವಿಬಿ ಜಿ ರಾಮ್ ಜಿ ಯೋಜನೆಯು ಬೇಡಿಕೆ ಆಧಾರಿತ ಕಾರ್ಯಕ್ರಮವಾಗಿದ್ದು, ಆಧಾರಿತ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿ, ಪಿಡಿಒಗಳ ಮೇಲೆ ಮಾನವ ಗುರಿಗಳ ಗುರಿ, ಅನಗತ್ಯ ಒತ್ತಡ ಹಾಗೂ ದಂಡಾತ್ಮಕ ಕ್ರಮಗಳ ವಿಧಿಸದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಸುರೇಶ ಚಲವಾದಿ ನೇತೃತ್ವದಲ್ಲಿ ಜಿಪಂ ಕಚೇರಿಗೆ ಆಗಮಿಸಿದ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಪಂ ಸಿಇಒ ವರ್ಣಿತ ನೇಗಿ ಅವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಕೋರಿದರು.

ವಿಬಿ ಜಿ ರಾಮ್ ಜಿ ಯೋಜನೆಯ ಸಮಗ್ರ ಕಾರ್ಯವಿಧಾನ ಸಂಹಿತೆ (ಎಸ್ಒಪಿ), ತಾಂತ್ರಿಕ ಮತ್ತು ಆಡಳಿತಾತ್ಮಕ ಮಾರ್ಗಸೂಚಿಗಳು, ಮಾದರಿ ಅಂದಾಜುಗಳು, ಕಾಮಗಾರಿಗಳ ಗರಿಷ್ಠ ವೆಚ್ಚಮಿತಿ, 60:40 ಕೂಲಿ-ಸಾಮಗ್ರಿ ಅನುಪಾತ, ಯುಕ್ತಧಾರಾ ಪೋರ್ಟಲ್ ಕಾರ್ಯವಿಧಾನ ಹಾಗೂ ಜವಾಬ್ದಾರಿ ನಕ್ಷೆಯನ್ನು ಪ್ರಕಟಿಸುವವರೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಮಾನವ ದಿನಗಳ ಗುರಿ, ಅನಗತ್ಯ ಒತ್ತಡ ಹಾಗೂ ದಂಡಾತ್ಮಕ ಕ್ರಮಗಳನ್ನು ವಿಧಿಸಬಾರದು. ವಿಬಿ ಜಿ ರಾಮ್ ಜಿ ಯೋಜನೆಯು ಬೇಡಿಕೆ ಆಧಾರಿತ ಕಾರ್ಯಕ್ರಮವಾಗಿದ್ದು, ಗುರಿ ಆಧಾರಿತ ಕಾರ್ಯಕ್ರಮವಲ್ಲ ಎಂಬುದನ್ನು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳಿಗೆ ಸ್ಪಷ್ಟಪಡಿಸುವ ಅಧಿಕೃತ ಆದೇಶ ಹೊರಡಿಸಬೇಕು. ಉದ್ಯೋಗ ಬೇಡಿಕೆಗೆ ಅನುಗುಣವಾಗಿ ಮಾತ್ರ ಉದ್ಯೋಗ ಮತ್ತು ಕಾಮಗಾರಿ ಒದಗಿಸಬೇಕು. ಉದ್ಯೋಗ ಬೇಡಿಕೆಯೇ ಇಲ್ಲದ ಸಂದರ್ಭದಲ್ಲಿ ಪಿಡಿಒಗಳ ಮೇಲೆ ಕೃತಕವಾಗಿ ಮಾನವ ದಿನಗಳ ಸೃಜಿಸುವ ಆಥವಾ ಬೇಡಿಕೆ ಹೆಚ್ಚಿಸುವ ಒತ್ತಡ ಹೇರಬಾರದು ಎಂದು ಸಂಘದಿಂದ ಕೋರಲಾಯಿತು.

ಪ್ರತಿ ಗ್ರಾಪಂಗೆ ಪೂರ್ವ ನಿಗದಿತ ಮಾನವ ದಿನಗಳು, ಕಾಮಗಾರಿಗಳ ಸಂಖ್ಯೆ ಅಥವಾ ವೆಚ್ಚದ ಗುರಿ ನಿಗದಿಪಡಿಸುವುದನ್ನು ನಿಲ್ಲಿಸಬೇಕು. ಉದ್ಯೋಗ ಬೇಡಿಕೆಯ ಕೊರತೆಯಿಂದ ಮಾನವ ದಿನಗಳು ಸೃಜನೆಯಾಗದಿದ್ದಲ್ಲಿ ಅದನ್ನು ಪಿಡಿಒಗಳ ಕರ್ತವ್ಯಲೋಪ ಎಂದು ಪರಿಗಣಿಸಬಾರದು. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಮಗ್ರ (ಎಸ್ಒಪಿ) ಮತ್ತು ಕಾರ್ಯಚರಣಾ ಕೈಪಿಡಿ ತಕ್ಷಣ ಪ್ರಕಟಿಸಬೇಕು ಎಂದರು.

318 ಅನುಮತಿಸಬಹುದಾದ ಕಾಮಗಾರಿಗಳಿಗೆ ಮಾದರಿ ಅಂದಾಜು, ವಿನ್ಯಾಸ, ಬಿಒಕ್ಯೂ ದರಪಟ್ಟಿ, ಗುಣಮಟ್ಟದ ಮಾನದಂಡ ಹಾಗೂ ತಾಂತ್ರಿಕ ಟಿಪ್ಪಣಿಗಳನ್ನು ಒದಗಿಸಬೇಕು. ಹಿಂದಿನ ಮನರೇಗಾ ಆದೇಶಗಳಲ್ಲಿ ಮುಂದುವರಿಯುವ ಮತ್ತು ರದ್ದಾಗಿರುವ ಆದೇಶಗಳ ಸಂಯೋಜಿತ ಪಟ್ಟಿ ಪ್ರಕಟಿಸಬೇಕು. ಟೆಂಡರ್ ಕೊಟೇಷನ್, 15 ಲಕ್ಷದೊಳಗಿನ ಕಾಮಗಾರಿಗಳು, ತುರ್ತು ಕಾಮಗಾರಿಗಳು ಹಾಗೂ ಯಂತ್ರೋಪಕರಣ ಬಳಕೆಗೆ ಸಂಬಂಧಿಸಿದ ಸ್ಪಷ್ಟ ಹಣಕಾಸು ಮತ್ತು ಖರೀದಿ ಮಾರ್ಗಸೂಚಿಗಳ ಹೊರಡಿಸಬೇಕು. ಪಿಡಿಒಗಳು, ಇಂಜಿನಿಯರ್ಗಳು, ಲೆಕ್ಕಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಮಗ್ರ ತರಬೇತಿ ನೀಡಬೇಕು. ಯೋಜನೆಯ ಅನುಷ್ಠಾನದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಮಟ್ಟದ ಸಹಾಯವಾಣಿ, ತಾಂತ್ರಿಕ ಸಹಾಯ ಕೇಂದ್ರ ಮತ್ತು ಸಮಯಬದ್ಧ ಟಿಕೆಟ್ ವ್ಯವಸ್ಥೆಯನ್ನು ಸ್ಥಾಪಿಸಬೇಕು ಸೇರಿದಂತೆ 25 ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಈ ವೇಳೆ, ಜಿ.ಪಂ. ಡಿ.ಎಸ್ . ಟಿ.ಕೃಷ್ಣಮೂರ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಖಜಾಂಚಿ ನಿಂಗಪ್ಪ ಮೂಲಿಮನಿ, ಜಿಲ್ಲಾ ಉಪಾಧ್ಯಕ್ಷರಾದ ಸೌಮ್ಯ ಕೆ., ಸಂಘಟನಾ ಕಾರ್ಯದರ್ಶಿಗಳಾದ ಜ್ಯೋತಿರೆಡ್ಡಿ, ರಾಜ್ಯ ಮಹಿಳಾ ಸಂಘದ ಖಜಾಂಚಿ ವಿದ್ಯಾವತಿ, ಪಿಡಿಓ ಚಂದಪ್ಪ ಗುಡಿಮನಿ ಇದ್ದರು.

Total Views: 0
Share This Article