Tragic incident in Gangavathi: Three members of the same family commit suicide in their old, seized house, driven to despair by debt.
ಗಂಗಾವತಿಯಲ್ಲಿ ದಾರುಣ ಘಟನೆ: ಸಾಲಬಾಧೆಗೆ ನೊಂದು ಸೀಜ್ ಆಗಿದ್ದ ಹಳೇ ಮನೆಯಲ್ಲೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ!

ಗಂಗಾವತಿ: ಸಾಲಬಾಧೆಯ ಕರಾಳತೆಗೆ ಒಂದೇ ಕುಟುಂಬದ ಮೂವರು ಜೀವ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಪ್ರಶಾಂತನಗರದಲ್ಲಿ ನಡೆದಿದೆ. ಜ್ಯುವೆಲ್ಲರಿ ಉದ್ಯಮಿ ಪ್ರಕಾಶ್ ರಾಯ್ಕರ್ (54), ಪತ್ನಿ ಪ್ರಭಾ (46) ಹಾಗೂ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ಮಗ ಶಶಾಂಕ್ (21) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ.
ಸೀಜ್ ಆಗಿದ್ದ ಮನೆಯಲ್ಲೇ ಆತ್ಮಹತ್ಯೆ: ನಡೆದಿದ್ದೇನು?
ಮಾನ್ವಿಯ ಬ್ಯಾಂಕ್ ಒಂದರಲ್ಲಿ ಸಾಲ ಮಾಡಿಕೊಂಡಿದ್ದ ಪ್ರಕಾಶ್ ರಾಯ್ಕರ್, ಅದನ್ನು ತೀರಿಸಲು 2021 ರಲ್ಲಿ ತಮ್ಮ ಸ್ವಂತ ಮನೆಯನ್ನು ನಾಗರಾಜ್ ಎಂಬುವವರಿಗೆ ಮಾರಾಟ ಮಾಡಿದ್ದರು. ಆದರೆ ಮನೆ ಕೊಂಡ ನಾಗರಾಜ್ ಕೂಡ ಅದೇ ಬ್ಯಾಂಕ್‌ನಲ್ಲಿ ಸಾಲ ಪಡೆದು ಸುಸ್ತಿದಾರರಾಗಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಕಳೆದ ಫೆಬ್ರುವರಿಯಲ್ಲಿ ಆ ಮನೆಯನ್ನು ಸೀಜ್ ಮಾಡಿ ಬೀಗ ಹಾಕಿದ್ದರು. ಫೆಬ್ರುವರಿವರೆಗೂ ಅದೇ ಮನೆಯಲ್ಲಿದ್ದ ರಾಯ್ಕರ್ ಕುಟುಂಬ, ನಂತರ ಬಾಡಿಗೆ ಮನೆಗೆ ವಾಸ ಬದಲಿಸಿತ್ತು.
ಹಿಂಬಾಗಿಲು ಒಡೆದು ಒಳ ನುಗ್ಗಿದ ಕುಟುಂಬ:
ನಾಲ್ಕು ದಿನಗಳ ಹಿಂದಷ್ಟೇ ಮಗ ಶಶಾಂಕ್ ಬೆಂಗಳೂರಿನಿಂದ ಗಂಗಾವತಿಗೆ ಬಂದಿದ್ದನು. ನಿನ್ನೆ ಕಾರಿನಲ್ಲಿ ಬಂದ ಕುಟುಂಬಸ್ಥರು, ತಾವು ಈ ಹಿಂದೆ ವಾಸವಿದ್ದ, ಸೀಜ್ ಆಗಿದ್ದ ಮನೆಯ ಹಿಂಬದಿಯ ಬಾಗಿಲನ್ನು ಒಡೆದು ಒಳಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸ್ ಇಲಾಖೆ ಹೇಳಿಕೆ:
ಘಟನಾ ಸ್ಥಳಕ್ಕೆ ಗಂಗಾವತಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, “ಪ್ರಾಥಮಿಕ ತನಿಖೆಯ ಪ್ರಕಾರ ಸಾಲಬಾಧೆಯೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಪ್ರಕಾಶ್ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.


