ವಿಶಿಷ್ಟ ಕೊಪ್ಪಳ ಜಾನುವಾರು ಜರ್ಮ್ಪ್ಲಾಸಂನ ವೈಜ್ಞಾನಿಕ ದಾಖಲೀಕರಣಕ್ಕಾಗಿ ಜಿಲ್ಲೆಗೆ ಆಗಮಿಸಿದ ವಿಜ್ಞಾನಿಗಳ ತಂಡ
A team of scientists arrived in the district for the scientific documentation of the unique Koppal livestock germplasm.
ಕೊಪ್ಪಳ ಜುಲೈ 23, (ಕರ್ನಾಟಕ ವಾರ್ತೆ): ಕೊಪ್ಪಳ ಪ್ರದೇಶದ ಪಶುಪಾಲಕ ಸಮುದಾಯಗಳು ಪಾರಂಪರಿಕವಾಗಿ ಸಾಕುತ್ತಿರುವ ವಿಶಿಷ್ಟ ಸ್ಥಳೀಯ ಜಾನುವಾರು ಜರ್ಮ್ಪ್ಲಾಸಂನ ವೈಶಿಷ್ಟö್ಯಗಳನ್ನು ವೈಜ್ಞಾನಿಕವಾಗಿ ದಾಖಲಿಸಲು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (KVAFSU) , ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ (AHVS) , ಕೊಪ್ಪಳ ಇವರ ವಿಜ್ಞಾನಿಗಳ ತಂಡವು ಜಿಲ್ಲೆಗೆ ಆಗಮಿಸಿದೆ.
ಡಾ. ಕೊಟ್ರೇಶ್ ಪ್ರಸಾದ್, ಡಾ. ಬಸವರಾಜ ಇನಾಮದಾರ, ಡಾ. ಮಹಾಂತೇಶ್ ಹಾಗೂ ಡಾ. ಬಿ. ಕೆ. ರಮೇಶ್ ಅವರನ್ನು ಒಳಗೊಂಡ ವಿಜ್ಞಾನಿಗಳ ತಂಡವು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಕಳೆದ ಐದು ವರ್ಷಗಳಿಂದ ಈ ಜಾನುವಾರುಗಳ ವಿಶಿಷ್ಟ ಲಕ್ಷಣಗಳು, ನಿರ್ವಹಣಾ ಪದ್ಧತಿಗಳು, ವಿಸ್ತರಣಾ ಪ್ರದೇಶ ಹಾಗೂ ಆನುವಂಶಿಕ ಮಹತ್ವವನ್ನು ದಾಖಲಿಸುವ ಕಾರ್ಯದಲ್ಲಿ ತೊಡಗಿದೆ. ಈ ಅವಧಿಯಲ್ಲಿ ತಂಡವು ವ್ಯಾಪಕ ಕ್ಷೇತ್ರ ಭೇಟಿ, ವೈಜ್ಞಾನಿಕ ಅಧ್ಯಯನ ಹಾಗೂ ಪಶುಪಾಲಕ ಸಮುದಾಯಗಳ ಸಾಂಪ್ರದಾಯಿಕ ಸಾಕಾಣಿಕೆ ವ್ಯವಸ್ಥೆಯ ಸಮಗ್ರ ದಾಖಲಾತಿಯನ್ನು ಕೈಗೊಂಡಿದೆ.
ವೈಜ್ಞಾನಿಕ ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ ICAR –ರಾಷ್ಟಿçÃಯ ಪ್ರಾಣಿ ಆನುವಂಶಿಕ ಸಂಪನ್ಮೂಲಗಳ ಬ್ಯೂರೋ (ICAR-NBAGR) , ಕರ್ನಾಲ್ ಹಾಗೂ ICAR –ಕೇAದ್ರ ಜಾನುವಾರು ಸಂಶೋಧನಾ ಸಂಸ್ಥೆ (CIRC) , ಮೀರತ್ ಸಂಸ್ಥೆಗಳ ವಿಜ್ಞಾನಿಗಳ ತಂಡವು ಈ ಪ್ರದೇಶಕ್ಕೆ ಭೇಟಿ ನೀಡಿ ಈ ಜಾನುವಾರು ಜರ್ಮ್ಪ್ಲಾಸಂನ ವಿಶಿಷ್ಟತೆಯನ್ನು ಅಧ್ಯಯನ ಮಾಡಿ ಪರಿಶೀಲಿಸಿದೆ. ವ್ಯಾಪಕ ವೈಜ್ಞಾನಿಕ ದಾಖಲೀಕರಣ ಮತ್ತು ಅಧ್ಯಯನಗಳ ಆಧಾರದ ಮೇಲೆ, ಈ ವಿಶಿಷ್ಟ ಜಾನುವಾರು ಆನುವಂಶಿಕ ಸಂಪನ್ಮೂಲಕ್ಕೆ ಸೂಕ್ತ ಮಾನ್ಯತೆ ಮತ್ತು ಸಂರಕ್ಷಣೆ ದೊರಕಿಸುವ ಉದ್ದೇಶದಿಂದ ವಿಜ್ಞಾನಿಗಳ ತಂಡವು ಅರ್ಜಿ ಸಲ್ಲಿಸಿದೆ.
ವಿಜ್ಞಾನಿಗಳ ತಂಡವು ಕೊಪ್ಪಳ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ಈ ವಿಶಿಷ್ಟ ಜಾನುವಾರು ಜರ್ಮ್ಪ್ಲಾಸಂನ ಸಂರಕ್ಷಣೆಯ ಮಹತ್ವ ಹಾಗೂ ಪಶುಪಾಲಕ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳ ಕುರಿತು, ವಿಶೇಷವಾಗಿ ಮೇವು ಪ್ರದೇಶಗಳ ಲಭ್ಯತೆ ಮತ್ತು ಪಶು ಆರೋಗ್ಯ ಸೇವೆಗಳ ಅಗತ್ಯತೆಯ ಬಗ್ಗೆ ವಿವರಿಸಿತು.
ಈ ಜಾನುವಾರುಗಳ ಮಹತ್ವ ಹಾಗೂ ಪಾರಂಪರಿಕ ಪಶುಪಾಲನಾ ವ್ಯವಸ್ಥೆಯನ್ನು ಪರಿಗಣಿಸಿ, ಜಿಲ್ಲಾಧಿಕಾರಿಯವರು ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಉಪನಿರ್ದೇಶಕರಿಗೆ ಈ ವಿಶಿಷ್ಟ ಜಾನುವಾರು ಆನುವಂಶಿಕ ಸಂಪನ್ಮೂಲಕ್ಕೆ ಸಮರ್ಪಕ ಪಶುವೈದ್ಯಕೀಯ ಆರೋಗ್ಯ ಸೇವೆ ಮತ್ತು ಪಶುಪಾಲನಾ ಸೇವೆಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
KVAFSU ಯ ಪ್ರಾಣಿ ಆನುವಂಶಿಕ ಸಂಪನ್ಮೂಲಗಳ ನೆಟ್‌ವರ್ಕ್ ಯೋಜನೆಯ ಪ್ರಧಾನ ತನಿಖಾಧಿಕಾರಿಗಳಾದ ಡಾ. ಬಸವರಾಜ ಹಾಗೂ ಡಾ. ಕೊಟ್ರೇಶ್ ಪ್ರಸಾದ್ ಅವರು ಮಾತನಾಡಿ, ಕೊಪ್ಪಳ ಜಾನುವಾರುಗಳು ಸ್ಥಳೀಯ ಹವಾಮಾನ ಮತ್ತು ಕೃಷಿ–ಪರಿಸರ ಪರಿಸ್ಥಿತಿಗಳಿಗೆ ಹೊಂದಿಕೊAಡಿರುವ ಅಮೂಲ್ಯ ಸ್ಥಳೀಯ ಆನುವಂಶಿಕ ಸಂಪನ್ಮೂಲವಾಗಿದ್ದು, ವಿಶಿಷ್ಟ ಅಲೆಮಾರಿ ಪಶುಪಾಲನಾ ವ್ಯವಸ್ಥೆಯ ಮೂಲಕ ತಲೆತಲಾಂತರಗಳಿAದ ಸಂರಕ್ಷಿಸಲ್ಪಟ್ಟಿವೆ ಎಂದು ತಿಳಿಸಿದರು. ಈ ಅಮೂಲ್ಯ ಜರ್ಮ್ಪ್ಲಾಸಂ ಅನ್ನು ಮುಂದಿನ ಪೀಳಿಗೆಗಳಿಗಾಗಿ ಸಂರಕ್ಷಿಸಲು ವೈಜ್ಞಾನಿಕ ದಾಖಲೀಕರಣ, ಅಧಿಕೃತ ಮಾನ್ಯತೆ ಹಾಗೂ ಸಮುದಾಯ ಆಧಾರಿತ ಸಂರಕ್ಷಣೆ ಅತ್ಯಂತ ಅಗತ್ಯವೆಂದು ಅವರು ಒತ್ತಿ ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಅಧಿಕಾರಿಗಳಾದ ಉಪನಿರ್ದೇಶಕ ಡಾ. ಮಲ್ಲಯ್ಯ, ಡಾ. ವಿನೋದ್ ಮತ್ತು ಡಾ. ಪ್ರಕಾಶ್ ಚೂರಿ ಉಪಸ್ಥಿತರಿದ್ದರು.
ಜಿಲ್ಲೆಯ ಜಾನುವಾರುಗಳು ತಮ್ಮ ವಿಶಿಷ್ಟ ಸಾಂಪ್ರದಾಯಿಕ ನಿರ್ವಹಣಾ ಪದ್ಧತಿಯಿಂದ ಗುರುತಿಸಲ್ಪಟ್ಟಿದ್ದು, ಪಶುಪಾಲಕ ಸಮುದಾಯಗಳು ಸಾಮಾನ್ಯವಾಗಿ 100 ರಿಂದ 800 ಜಾನುವಾರುಗಳವರೆಗೆ ದೊಡ್ಡ ಹಿಂಡುಗಳಲ್ಲಿ ಸಾಕಾಣಿಕೆ ಮಾಡುತ್ತಿವೆ. ಸಂಪೂರ್ಣವಾಗಿ ವಿಸ್ತೃತ ಹಾಗೂ ಅಲೆಮಾರಿ ಮೇಯಿಸುವ ಪದ್ಧತಿಯಲ್ಲಿ ಸಾಕಲಾಗುತ್ತಿರುವ ಈ ಜಾನುವಾರುಗಳ ಮೂಲಕ ಪಶುಪಾಲಕ ಸಮುದಾಯಗಳು ತಲೆತಲಾಂತರಗಳಿAದ ಈ ಅಮೂಲ್ಯ ಸ್ಥಳೀಯ ಜಾನುವಾರು ಆನುವಂಶಿಕ ಸಂಪನ್ಮೂಲವನ್ನು ಸಂರಕ್ಷಿಸಿಕೊAಡು ಬರುತ್ತಿವೆ.
ಮೇವು ಲಭ್ಯತೆಯ ಆಧಾರದ ಮೇಲೆ ಪಶುಪಾಲಕರು ಸಾಂಪ್ರದಾಯಿಕವಾಗಿ ಕೊಪ್ಪಳ, ಗದಗ ಮತ್ತು ವಿಜಯನಗರ ಜಿಲ್ಲೆಗಳಾದ್ಯಂತ ವಲಸೆ ಹೋಗುತ್ತಾ ಜಾನುವಾರುಗಳನ್ನು ಮೇಯಿಸುತ್ತಾರೆ. ತುಂಗಭದ್ರಾ ನದಿ ಮತ್ತು ಅದರ ಜಲಾನಯನ ಪ್ರದೇಶ ಈ ಜಾನುವಾರುಗಳಿಗೆ ನೀರು ಹಾಗೂ ಮೇವು ಲಭ್ಯವಾಗುವ ಪ್ರಮುಖ ಸಂಪನ್ಮೂಲವಾಗಿದೆ. ಜಾನುವಾರು ಸಾಕಾಣಿಕೆಯ ಜೊತೆಗೆ, ಪಶುಪಾಲಕ ಸಮುದಾಯಗಳು ಜಾನುವಾರುಗಳ ಗೊಬ್ಬರವನ್ನು ಕೃಷಿ ಭೂಮಿಗಳ ಫಲವತ್ತತೆ ಹೆಚ್ಚಿಸಲು ಬಳಸುವುದರಿಂದ ಆದಾಯವನ್ನು ಗಳಿಸುತ್ತಿದ್ದು, ಸುಸ್ಥಿರ ಬೆಳೆ–ಪಶುಸಂಗೋಪನಾ ವ್ಯವಸ್ಥೆಗೆ ಕೊಡುಗೆ ನೀಡುತ್ತಿವೆ. ಕೊಪ್ಪಳ ಪ್ರದೇಶದ ಈ ವಿಶಿಷ್ಟ ಸ್ಥಳೀಯ ಜಾನುವಾರು ಆನುವಂಶಿಕ ಸಂಪನ್ಮೂಲದ ವೈಜ್ಞಾನಿಕ ಮಾನ್ಯತೆ, ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಈ ಪ್ರಯತ್ನವು ಮಹತ್ವದ ಹೆಜ್ಜೆಯಾಗಿದೆ.
Total Views:
0

