ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆಗಾಗಿ ಆಗ್ರಹಿಸಿ ಎಐಎಂಎಸ್ಎಸ್ ನಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಪತ್ರವನ್ನು ಸಲ್ಲಿಕೆ

H.Mallikarjun
H.Mallikarjun - Kalyanasiri
2 Min Read

AIMSS submits a memorandum to the Prime Minister through the Deputy Commissioner, demanding the severest punishment for rapists.

ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆಗಾಗಿ ಆಗ್ರಹಿಸಿ ಎಐಎಂಎಸ್ಎಸ್ ನಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಪತ್ರವನ್ನು ಸಲ್ಲಿಕೆ

ಜಾಹೀರಾತು

 ಕೊಪ್ಪಳ:  ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ಅಪ್ರಾಪ್ತೆಯರ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಅತ್ಯುಗ್ರ ಶಿಕ್ಷೆಗಾಗಿ ಆಗ್ರಹಿಸಿ ಇಂದು ಎಐಎಂಎಸ್ಎಸ್ ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಎಐಎಂಎಸ್ಎಸ್ ನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಜುಳಾ ಮಜ್ಜಿಗಿ ಅವರು ಮಾತನಾಡುತ್ತಾ “ಪಶ್ಚಿಮ ಬಂಗಾಳದ ಬಾರುಪುರ್ ಮತ್ತು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಪ್ರಪಂಚವನ್ನೇ ಅರಿಯದ 13 ವರ್ಷದ ಒಬ್ಬ ಅಪ್ರಾಪ್ತ ಹೆಣ್ಣು ಮಗಳ ಮೇಲೆ 30 ಜನ ನರರಾಕ್ಷಸರು ಎರಗುತ್ತಾರೆಂದರೆ ಇದೆಂಥ ಸಮಾಜ? ಇಂತಹ ನೀಚ ಘಟನೆಗಳಲ್ಲಿ ಸರ್ಕಾರದ ಯಾವುದೇ ಕಣ್ಣೊರೆಸುವ ತನಿಖೆಯನ್ನಾಗಲಿ ಅಥವಾ ನಿಧಾನಗತಿಯ ಶಿಕ್ಷೆಯನ್ನಾಗಲಿ ಜನರು ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ಈ ಎರಡು ಘಟನೆಗಳಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳಿಗೆ ಅತ್ಯುಗ್ರ ಶಿಕ್ಷೆಯನ್ನು ಖಾತ್ರಿಪಡಿಸಬೇಕೆಂದು ಎಐಎಂಎಸ್ಎಸ್ ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿಯು ಒತ್ತಾಯಿಸುತ್ತದೆ.

ಇನ್ನು ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ 14 ವರ್ಷದ ಅಪ್ರಾಪ್ತ ಬಾಲಕ ಅಶ್ಲೀಲ ಸಿನಿಮಾ ಮತ್ತು ಮದ್ಯ-ಮಾದಕ ವಸ್ತುಗಳಿಗೆ ಬಲಿಯಾಗಿ 9 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತಿದೆ. ಇಂತಹ ಘಟನೆಗಳು ವರದಿಯಾಗದ ದಿನಗಳೇ ಇಲ್ಲ. ಇಂದು ಮತ್ತೆ ಮತ್ತೆ ಸಾಬೀತಾಗುತ್ತಿರುವ ವಿಷಯವೆಂದರೆ ಇಂತಹ ಪೈಶಾಚಿಕ ಘಟನೆಗಳಿಗೆ ಕಾರಣ ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಅಶ್ಲೀಲ ಸಿನಿಮಾ-ಸಾಹಿತ್ಯ ಜೊತೆಗೆ ಮದ್ಯ-ಮಾದಕ ವಸ್ತುಗಳು. ಇವುಗಳನ್ನು ಕೂಡಲೇ ನಿಷೇಧಿಸಲು ಹಾಗೂ ದೇಶದಾದ್ಯಂತ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಎಐಎಂಎಸ್ಎಸ್ ಸರ್ಕಾರವನ್ನು ಒತ್ತಾಯಿಸುತ್ತದೆ. ಜೊತೆಗೆ ಇಂತಹ ವಿಕೃತತೆಗಳ ವಿರುದ್ಧ ಪ್ರಜ್ಞಾವಂತ ಜನತೆಯು ಸೇರಿದಂತೆ ಇಡೀ ಮಹಿಳಾ ಸಮುದಾಯ ಬಲಿಷ್ಠವಾದ ಹೋರಾಟಗಳನ್ನು ಕಟ್ಟಲು ಮುಂದೆ ಬರಬೇಕೆಂದು ಎಐಎಂಎಸ್ಎಸ್ ಕರೆ ನೀಡುತ್ತದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯಾದ ಶಾರದಾ ಗಡ್ಡಿ, ಸದಸ್ಯರಾದ ಪ್ರಭಾವತಿ ಉಪಸ್ಥಿತರಿದ್ದರು.

Total Views: 0
Share This Article