ಕೊಪ್ಪಳದಲ್ಲಿ ಕಟ್ಟಡ ಕಾರ್ಮಿಕರ ಬೃಹತ್ ಪ್ರತಿಭಟನೆ: ಕಾರ್ಮಿಕರ ಕಲ್ಯಾಣ ನಿಧಿಯನ್ನು ಕಾರ್ಮಿಕರಿಗೇ ಬಳಸಬೇಕು – ಎ. ದೇವದಾಸ್

H.Mallikarjun
H.Mallikarjun - Kalyanasiri
2 Min Read

ಕೊಪ್ಪಳದಲ್ಲಿ ಕಟ್ಟಡ ಕಾರ್ಮಿಕರ ಬೃಹತ್ ಪ್ರತಿಭಟನೆ: ಕಾರ್ಮಿಕರ ಕಲ್ಯಾಣ ನಿಧಿಯನ್ನು ಕಾರ್ಮಿಕರಿಗೇ ಬಳಸಬೇಕು – ಎ. ದೇವದಾಸ್

ಜಾಹೀರಾತು
Massive protest by construction workers in Koppal: Workers' welfare fund must be used for the workers themselves – A. Devadas

ಕೊಪ್ಪಳ, ಜುಲೈ 7: ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (ಎಐಯುಟಿಯುಸಿ) ನೇತೃತ್ವದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕೊಪ್ಪಳ ಜಿಲ್ಲಾ ಆಸ್ಪತ್ರೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎ. ದೇವದಾಸ್, ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿರುವ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ನಿಧಿಯನ್ನು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿ ಬಳಸುತ್ತಿರುವುದು ಖಂಡನೀಯ ಎಂದು ಹೇಳಿದರು. ಕಲ್ಯಾಣ ಮಂಡಳಿಯ ನಿಧಿಯು ಕಟ್ಟಡ ಕಾರ್ಮಿಕರ ಸ್ವತ್ತಾಗಿದ್ದು, ಅದನ್ನು ಕಾರ್ಮಿಕರ ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ ಹಾಗೂ ನಿವೃತ್ತಿ ಜೀವನದ ರಕ್ಷಣೆಗಾಗಿ ಮಾತ್ರ ಬಳಸಬೇಕು ಎಂದು ಆಗ್ರಹಿಸಿದರು.
ಮೇಸನ್ ಕಿಟ್, ಸೇಫ್ಟಿ ಕಿಟ್, ಶೈಕ್ಷಣಿಕ ಕಿಟ್ ಸೇರಿದಂತೆ ವಿವಿಧ ಹೆಸರಿನಲ್ಲಿ ಕಿಟ್‌ಗಳನ್ನು ವಿತರಿಸುವ ಬದಲು ಆ ಹಣವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. 2021ರ ಆದೇಶದಂತೆ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು. ನೋಂದಾಯಿತ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ರಾಜ್ಯಾದ್ಯಂತ ಗುಣಮಟ್ಟದ ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು. 60 ವರ್ಷ ತುಂಬಿದ ನಂತರ ಪಿಂಚಣಿಗೆ ಅರ್ಜಿ ಸಲ್ಲಿಸುವ ಅವಧಿಗೆ ವಿಧಿಸಿರುವ ನಿರ್ಬಂಧಗಳನ್ನು ರದ್ದುಪಡಿಸಿ ಎಲ್ಲ ಅರ್ಹ ಕಾರ್ಮಿಕರಿಗೆ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ, ಕಳೆದ ಹಲವು ತಿಂಗಳುಗಳಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಟ್ಟಡ ಕಾರ್ಮಿಕರ ಸಭೆಗಳನ್ನು ನಡೆಸಿ ಅವರ ಸಮಸ್ಯೆಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಈಗಾಗಲೇ ಮಂಜೂರಾದ ವಿವಿಧ ಯೋಜನೆಗಳ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಬಾಕಿ ಉಳಿದಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ಘೋಷಿಸಿರುವ ಎಲ್ಲಾ ಕಲ್ಯಾಣ ಯೋಜನೆಗಳು ಪ್ರತಿಯೊಬ್ಬ ಅರ್ಹ ಕಾರ್ಮಿಕನಿಗೂ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ, ಧರಣಿ, ಪ್ರತಿಭಟನೆ ಹಾಗೂ ಮುತ್ತಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ಬಳಿಕ ಕೊಪ್ಪಳ ತಾಲೂಕ ಕಾರ್ಮಿಕ ಅಧಿಕಾರಿಗಳಾದ ಮಂಜುಳಾ ಅವರ ಮೂಲಕ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕರ್ನಾಟಕ ರಾಜ್ಯ ಕಟ್ಟಡ ಇತರ ನಿರ್ಮಾಣ ಕಾರ್ಮಿಕ ಮಂಡಳಿ ಅಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ಸುರೇಶ ದಳಪತಿ, ಕುಮಾರ್ ಡಿ., ನಾಗರಾಜ್ ಹುಲಗಿ, ಶಬ್ಬೀರ್ ಕುಲುಮಿ, ಚಂದ್ರಶೇಖರ, ಮೊದಿನ್, ಯಲ್ಲನಗೌಡ, ಯಮನೂರ, ಮುರ್ತೆಪ್ಪ, ಬಾಬು, ಶರಣಪ್ಪ, ಯಲ್ಲಪ್ಪ, ಶರೀಫ್, ಕಟ್ಟೆಪ್ಪ, ಅಂಬಣ್ಣ, ಮುಬೀನ್, ಶಂಕರ, ಗಂಗಮ್ಮ, ಹನುಮವ್ವ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ನೂರಾರು ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.

Total Views: 0
Share This Article