
Request to the Prime Minister in Koppal to provide AIIMS to Raichur city

ರಾಯಚೂರು ಮಹಾನಗರಕ್ಕೆ ಏಮ್ಸ್ ಕೊಡಿ ಕೊಪ್ಪಳದಲ್ಲಿ ಪ್ರಧಾನಿಗೆ ಮನವಿ

ಕೊಪ್ಪಳ:1500ನೇ ದಿನ ಪೂರೈಸಿದ ರಾಯಚೂರು ಏಮ್ಸ್ ಸಂಸ್ಥೆ ಸ್ಥಾಪಿಸಬೇಕು ಎನ್ನುವ ಅನಿರ್ದಿಷ್ಟಾವಧಿ ಧರಣಿ ಹೋರಾಟ ಇಂದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಹೋರಾಟದ ಕರೆಗೆ ಬೆಂಬಲಿಸಿ ಕೊಪ್ಪಳದಲ್ಲಿ ಉಪ ತಹಶೀಲ್ದಾರ್ ಗವಿಸಿದ್ದಪ್ಪ ಮಣ್ಣೂರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ರವಾನಿಸಲಾಯಿತು.
ರಾಯಚೂರು ನಗರದಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎ.ಐ.ಐ.ಎಂ.ಎಸ್)(AIIMS) ಸ್ಥಾಪನೆ ಮಾಡಬೇಕೆಂದು ಆರಂಭ ಮಾಡಿದ ಹೋರಾಟ ಇವತ್ತು 1500ನೇ ದಿನ ತಲುಪಿದೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಎಲ್ಲಾ 7 ಜಿಲ್ಲೆಗಳಲ್ಲಿ ಈ ಅವಿರತ ಹೋರಾಟಕ್ಕೆ ಅಲ್ಲಿನ ಜನರು ಬೆಂಬಲ ಘೋಷಿಸಿದ್ದಾರೆ.
ರಾಯಚೂರು ಹಾಗೂ ಸುತ್ತಲಿನ ಜಿಲ್ಲೆಗಳ ಜನರ ಆರೋಗ್ಯ ಕಾಪಾಡಿಕೊಳ್ಳವ ಏಕೈಕ ಸನ್ಮಾರ್ಗ ಅಂದರೆ ಏಮ್ಸ್ ಸಂಸ್ಥೆಯ ಸ್ಥಾಪನೆಯಾಗಬೇಕಿದೆ. ಇಲ್ಲಿ ಭತ್ತ ಬೆಳೆಯುವ ತುಂಗಭದ್ರಾ ನೀರಾವರಿ ಅಚ್ಚುಕಟ್ಟು ಪ್ರದೇಶದ ಜನರಿಗೆ ಗಂಭೀರ, ಭಯಾನಕ ರೋಗವಾದ ಕ್ಯಾನ್ಸರ್, ಅಪೌಷ್ಟಿಕತೆ, ಗಂರ್ಭಿಣಿಯರ ಸಾವು, ಶಿಶು ಮರಣ ಇನ್ನೂ ಅನೇಕ ದೀರ್ಘ ಕಾಲಿನ ಕಾಯಿಲೆಗಳು ಇಲ್ಲಿ ಭಾಧಿಸುತ್ತಿವೆ. ಈ ಜನರ ಜೀವ, ಆರೋಗ್ಯ ಉಳಿಯಲು ಕೇಂದ್ರ ಸರ್ಕಾರಿ ಸ್ವಾಯತ್ತ ಸಂಸ್ಥೆ ಏಮ್ಸ್ ಇಲ್ಲಿ ಸ್ಥಾಪನೆಯಾದರೆ ಅದರ ಬಹುದೊಡ್ಡ ಸೌಲಭ್ಯ ಎಲ್ಲಾ ವರ್ಗದ ಜನರಿಗೆ ಸೂಪರ್ ಸ್ಪೇಷಾಲಿಟಿ ಚಿಕಿತ್ಸೆ ರೂಪದಲ್ಲಿ ಉಚಿತವಾಗಿ ಸಿಗುತ್ತದೆ. ಕೊಪ್ಪಳ ಜನರು ಸಹಿತ ಭವಿಷ್ಯದಲ್ಲಿ ನೇರ ಫಲಾನುಭವಿಯಾಗಿ ಸೌಲಭ್ಯ ಪಡೆದುಕೊಳ್ಳಬಹುದು.
ಕೊಪ್ಪಳ ನಗರದಲ್ಲಿ ಕಾರ್ಖಾನೆ ಮಾಲಿನ್ಯ ವಿರೋಧಿ ಹೋರಾಟವು ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯ ಸಮಸ್ಯೆಯನ್ನು ತಡೆಯಬೇಕೆಂದು ಮತ್ತು ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಜನರ ಆರೋಗ್ಯ, ಜೀವ ಉಳಿಸಲು ಮಾಲಿನ್ಯ ಮಾಡುವ ಎಲ್ಲಾ ಕಾರ್ಖಾನೆಗಳನ್ನು ಮುಚ್ಚಿರಿ ಎಂದು ನಡೆದ ಹೋರಾಟವಾಗಿದೆ.
ಇದು ನೇರವಾಗಿ ಕೊಪ್ಪಳ ಹೋರಾಟಕ್ಕೆ ಸಂಬಂಧಪಟ್ಟ ಬೇಡಿಕೆಯಾಗಿದ್ದರಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಬೆಂಬಲದಲ್ಲಿ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಂಟಿ ಕ್ರಿಯಾ ವೇದಿಕೆಯಿಂದ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ವಕೀಲರಾದ ಬಿ.ಎಸ್. ವೀರಾಪುರ, ಶಿವಾನಂದಯ್ಯ ಬೀಳಗಿಮಠ, ರಾಜಶೇಖರ ಏಳುಭಾವಿ, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ನಾಗರತ್ನಾ ಮಾದಿನೂರು, ಶಿವಪ್ಪ ಹಲಗೇರಿ, ಶಿವಲಿಂಗು ವಿಭೂತಿ, ವಿಜಯಮಹಾಂತೇಶ ಹಟ್ಟಿ ಇದ್ದರು.
