
Government school alumni help school for mentally retarded children

ಬುದ್ದಿಮಾಂಧ್ಯ ಮಕ್ಕಳ ಶಾಲೆಗೆ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳ ನೆರವು
ಗಂಗಾವತಿ: ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1997–98ನೇ ಸಾಲಿನಲ್ಲಿ ಏಳನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ನಗರದ ಲಯನ್ಸ್ ಚಾರಿಟಬಲ್ ಟ್ರಸ್ಟ್‌ನ ಲಯನ್ಸ್ ಮನೋವಿಕಲಚೇತನ ಮಕ್ಕಳ ವಸತಿ ನಿಲಯದ ಶಾಲೆಗೆ ಭಾನುವಾರ ಅಡುಗೆ ಪದಾರ್ಥಗಳ ನೆರವು ನೀಡಿದರು.

ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಸ್ವಂತ ಹಣ ಹಾಕಿ ಇದೇ ವರ್ಷದ ಜನವರಿಯಲ್ಲಿ ಶಾಲೆಯ ಆವರಣದಲ್ಲಿ ಗುರುವಂದನೆ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ಮಾಡಿದ್ದರು. ಕಾರ್ಯಕ್ರಮದ ಬಳಿಕ ಉಳಿದ ಹಣವನ್ನು ವ್ಯರ್ಥ ಮಾಡದೆ ವಸತಿ ನಿಲಯದ ಮಕ್ಕಳಿಗೆ ದಿನಸಿ ಕೊಡಿಸಿದರು.
ಶಿಕ್ಷಕ ಹಾಗೂ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿ ದೇವಣ್ಣ ಮಾತನಾಡಿ ‘ಬುದ್ಧಿಮಾಂಧ್ಯರು ಎಂದರೆ ದೇವರ ಮಕ್ಕಳಿದ್ದಂತೆ. ಗುರುವಂದನೆ ಸಮಯದಲ್ಲಿ ಶಾಲೆಗೆ ಉಡುಗೊರೆ ನೀಡಿದ್ದೆವು. ಈಗ ಉಳಿದಿದ್ದ ₹10 ಸಾವಿರ ಮೊತ್ತದಲ್ಲಿ ಲಯನ್ಸ್ ಶಾಲೆ ಮಕ್ಕಳಿಗೆ ಆಹಾರ ಪದಾರ್ಥಗಳನ್ನು ನೀಡಿದೆವು’ ಎಂದರು.
ಇನ್ನೊಬ್ಬ ಹಳೆ ವಿದ್ಯಾರ್ಥಿನಿ ಜ್ಯೋತಿ ಹಿರೇಮಠ ಮಾತನಾಡಿ ‘ಶಾಲೆಯ ಕಾರ್ಯಕ್ರಮ ಮುಗಿಸಿ ಬುದ್ಧಿಮಾಂಧ್ಯ ಮಕ್ಕಳಿಗೆ ನೆರವು ನೀಡಿದ್ದಕ್ಕೆ ಖುಷಿಯಾಗಿದೆ. ಎಲ್ಲರ ಸಹಕಾರದಿಂದ ಈ ಕೆಲಸ ಸಾಧ್ಯವಾಯಿತು’ ಎಂದು ಹೇಳಿದರು.
ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳ ಕಾರ್ಯಕ್ಕೆ ಲಯನ್ಸ್ ಕ್ಲಬ್ ವಸತಿ ಶಾಲೆಯ ಪ್ರಾಚಾರ್ಯ ಪ್ರಭು ಹಿರೇಮಠ ಹರ್ಷ ವ್ಯಕ್ತಪಡಿಸಿದರು. ಕ್ಲಬ್‌ನ ಸಿಬ್ಬಂದಿ ಮಹಮ್ಮದ್ ಹಾಗೂ ವಡ್ಡರಹಟ್ಟಿ ಕ್ಯಾಂಪ್ ಶಾಲೆಯ ವಿದ್ಯಾರ್ಥಿಗಳು ಇದ್ದರು.
