
Garbage disposal problem in Mehboob Nagar: Public outrage against the Municipal Council
ಮೆಹಬೂಬ್ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ: ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಗಂಗಾವತಿ ನಗರದ 7ನೇ ವಾರ್ಡ್ ವ್ಯಾಪ್ತಿಯ ಮೆಹಬೂಬ್ ನಗರ ಪ್ರದೇಶದಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ಕಸ ವಿಲೇವಾರಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ನಗರಸಭೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸ್ಥಳೀಯ ಮಹಿಳೆಯೊಬ್ಬರು, “ಸುಮಾರು ಒಂದು ವರ್ಷದ ಬಳಿಕ ನಗರಸಭೆಯವರು ಕಸವನ್ನು ತೆರವುಗೊಳಿಸಿದ್ದಾರೆ. ಆದರೆ ತೆಗೆದಿರುವ ಕಸವನ್ನು ರಸ್ತೆಯ ಪಕ್ಕದಲ್ಲೇ ಬಿಟ್ಟು ಹೋಗಿದ್ದು, ಅದನ್ನು ಸಂಪೂರ್ಣವಾಗಿ ಸಾಗಿಸದೇ ಈಗಾಗಲೇ 12 ದಿನಗಳು ಕಳೆದಿವೆ. ಇದರಿಂದ ದುರ್ವಾಸನೆ ಉಂಟಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ, ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ನಗರಸಭೆ ಪೌರಾಯುಕ್ತ ಅಧಿಕಾರಿ ಆರ್. ವಿರೂಪಾಕ್ಷ ಮೂರ್ತಿ ಅವರು ಸಾರ್ವಜನಿಕರು ಕಸವನ್ನು ಸರಿಯಾಗಿ ವಿಂಗಡಿಸದಿದ್ದರೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೆ ನಗರಸಭೆಯವರೇ ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
“ಸಾಮಾನ್ಯ ಜನರ ಮೇಲೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತರುವ ಮೊದಲು ನಗರಸಭೆಯವರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನಗರಸಭೆಯವರ ನಿರ್ಲಕ್ಷ್ಯಕ್ಕೆ ಯಾವ ಕ್ರಮ ತೆಗೆದುಕೊಳ್ಳಬೇಕು?” ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮೆಹಬೂಬ್ ನಗರ ಪ್ರದೇಶದ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
