
Revoke the four labor codes and establish an 8-hour workday.

ನಾಲ್ಕು ಲೇಬರ್ ಕೋಡ್ ಹಿಂಪಡೆಯಿರಿ 8 ಗಂಟೆ ದುಡಿಮೆ ಅವಧಿ ನಿಗದಿ ಮಾಡಿ.

ಕೊಪ್ಪಳ:. ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ
ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕ ದಿನವನ್ನು ಸೋಮವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶರಣು ಗಡ್ಡಿ ಅವರು, ಕಾರ್ಮಿಕರ ದೀರ್ಘಕಾಲದ ಹೋರಾಟದ ಫಲವಾಗಿ ಮೇ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ಮೇ ದಿನಕ್ಕೆ ಐತಿಹಾಸಿಕ ಹೋರಾಟದ ಹಿನ್ನೆಲೆ ಇದೆ. ಅಮೆರಿಕದ ಚಿಕಾಗೋ ನಗರದಲ್ಲಿ 1886ರ ಮೇ 4ರಂದು ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದಾಗ, ಪೊಲೀಸ್ ದೌರ್ಜನ್ಯದಿಂದ ಆ ಹೋರಾಟವನ್ನು ಹತ್ತಿಕ್ಕಲಾಯಿತು ಎಂದು ವಿವರಿಸಿದರು.
ಆ ಸಮಯದಲ್ಲಿ ಕಾರ್ಮಿಕರನ್ನು ದಿನಕ್ಕೆ 12 ರಿಂದ 16 ಗಂಟೆಗಳವರೆಗೆ ದುಡಿಸಿಕೊಳ್ಳಲಾಗುತ್ತಿತ್ತು. ಈ ಶೋಷಣೆಗೆ ವಿರೋಧವಾಗಿ ನಡೆದ ರಕ್ತಸಿಕ್ತ ಹೋರಾಟದ ಫಲವಾಗಿ ಮೇ ದಿನ ಹುಟ್ಟಿಕೊಂಡಿದೆ. ದಿನಕ್ಕೆ 8 ಗಂಟೆಗಳ ಕೆಲಸದ ಅವಧಿ, ನ್ಯಾಯವಾದ ವೇತನ, ಕಾರ್ಮಿಕರ ಹಕ್ಕುಗಳು ಹಾಗೂ ಸಂಘಟನೆಗಳ ಸ್ಥಾಪನೆಗಾಗಿ ಕಾರ್ಮಿಕರು ಹೋರಾಟ ನಡೆಸಿದ್ದು, ಇಂದಿಗೂ ಆ ಹೋರಾಟದ ಸ್ಪೂರ್ತಿಯೇ ಮೇ ದಿನವಾಗಿದೆ ಎಂದು ಹೇಳಿದರು.
ಇದೇ ವೇಳೆ, ಪ್ರಸ್ತುತ ಸರ್ಕಾರವು 8 ಗಂಟೆಗಳ ಕೆಲಸದ ಅವಧಿಯನ್ನು ದುರ್ಬಲಗೊಳಿಸಿ 12 ಗಂಟೆಗಳ ದುಡಿಮೆಯನ್ನು ಜಾರಿಗೆ ತರಲು ನಾಲ್ಕು ಲೇಬರ್ ಕೋಡ್‌ಗಳನ್ನು ಮಾಲೀಕರ ಪರವಾಗಿ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ, ಎಲ್ಲಾ ಕಾರ್ಮಿಕ ವರ್ಗವು ಮತ್ತೊಂದು ಐತಿಹಾಸಿಕ ಚಳುವಳಿಗೆ ಒಂದಾಗಬೇಕೆಂದು ಕರೆ ನೀಡಿದರು.
ಈ ಸಭೆಯಲ್ಲಿ ಸಂಘದ ಜಿಲ್ಲಾ ಮುಖಂಡರಾದ ನಾಗರಾಜ್, ಕುಮಾರ್, ಶಬ್ಬೀರ್ ಕುಲುಮಿ, ಬರಮಪ್ಪ ದೊಡ್ಮನಿ, ಕಟ್ಟೆಪ್ಪ, ಬಾಬುಸಾಬ್, ಹುಸೇನ್ ಬಾಷಾ, ಶ್ರೀನಿವಾಸ್, ಮೌನೇಶ್ ಮೇಗಳಮನಿ, ಮಲ್ಲಪ್ಪ, ತಿರುಪತಿ, ಲಕ್ಷ್ಮಣ ಸೇರಿದಂತೆ ಹಲವಾರು ಕಾರ್ಮಿಕರು ಭಾಗವಹಿಸಿದ್ದರು.
