ತುಂಗಭದ್ರಾ ಆಣೆಕಟ್ಟಿನ 33 ನೂತನ ಕ್ರಸ್ಟ ಗೇಟ್‌ಗಳ ಉದ್ಘಾಟನೆ ಶೀಘ್ರ:  ಡಿ.ಕೆ.ಶಿವಕುಮಾರ್

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

33 new crust gates of Tungabhadra Dam to be inaugurated soon: D.K. Shivakumar

ಉಪ ಮುಖ್ಯಮಂತ್ರಿಗಳಿಂದ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟಗೇಟ್‌ಗಳ ಅಳವಡಿಕೆ ಕಾಮಗಾರಿ ಪರಿವೀಕ್ಷಣೆ

ಜಾಹೀರಾತು

ತುಂಗಭದ್ರಾ ಆಣೆಕಟ್ಟಿನ 33 ನೂತನ ಕ್ರಸ್ಟ ಗೇಟ್‌ಗಳ ಉದ್ಘಾಟನೆ ಶೀಘ್ರ:  ಡಿ.ಕೆ.ಶಿವಕುಮಾರ್



ಕೊಪ್ಪಳ ಮೇ 03 (ಕರ್ನಾಟಕ ವಾರ್ತೆ): ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಮೇ 3ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಬಹುತೇಕ ಅಂತಿಮ ಹಂತ ತಲುಪಿದ ಗೇಟ್ ಅಳವಡಿಕೆ ಕಾರ್ಯವನ್ನು ಖುದ್ದು ಪರಿಶೀಲಿಸಿದರು.
ಈ ವೇಳೆ,  ಮಾಧ್ಯಮದವರೊಂದಿಗೆ ಅವರು ಮಾತನಾಡಿ, ತುಂಗಭದ್ರಾ ಜಲಾಶಯವು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಲಕ್ಷಾಂತರ ರೈತರ ಜೀವನಾಡಿಯಾಗಿದೆ. ಹೊಸಪೇಟೆ, ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಸಿಂಧನೂರ, ಮಸ್ಕಿ, ಮಾನವಿ, ಸಿರವಾರ, ರಾಯಚೂರು, ಬಳ್ಳಾರಿ ಸೇರಿದಂತೆ ಈ ಭಾಗದ ಲಕ್ಷಾಂತರ ಸಂಖ್ಯೆಯ ರೈತರ ಬದುಕಿಗೆ ಆಸರೆಯಾಗಿದೆ. ತುಂಗಭದ್ರಾ ಜಲಾಶಯದ ಎಲ್ಲಾ 33 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯವು ನಿಗದಿತ ಸಮಯದಲ್ಲಿ ಮುಗಿದಿದ್ದು, ಸಣ್ಣ ಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಈ ಎಲ್ಲಾ ಕಾರ್ಯಗಳು ಶೀಘ್ರ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದು, ಶೀಘ್ರ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಲಾಶಯದ ಕ್ರಸ್ಟ ಗೇಟ್‌ಗಳ ಬದಲಾವಣೆಯ ಮಹತ್ವದ ಕಾರ್ಯಕ್ಕೆ ನಾವು ತೆಗೆದುಕೊಂಡು ತೀರ್ಮಾನಕ್ಕೆ ಫಲ ನೀಡುವಂತಹ ಕೆಲಸವನ್ನು ಎಲ್ಲಾ ಅಧಿಕಾರಿಗಳು ಮಾಡಿದ್ದಾರೆ ಎಂದರು‌.
ಸದ್ಯ ಜಲಾಶಯದಲ್ಲಿ10.5 ಟಿಎಂಸಿ ನೀರಿದ್ದು, ಈಗ ಮಳೆ ಪ್ರಾರಂಭವಾದರೆ, ಎರಡು ತಿಂಗಳಲ್ಲಿ ಸುಮಾರು 44 ಟಿಎಂಸಿ ನೀರು ಸಂಗ್ರಹವಾಗಲಿದೆ.
ಕ್ರಸ್ಟ ಗೇಟ್‌ಗಳ ಅಳವಡಿಕೆಯು ಇಡೀ ದೇಶಕ್ಕೆ ದೊಡ್ಡ ಸವಾಲಾಗಿದ್ದು, ಈ ಕಾರ್ಯವನ್ನು ಯಶಸ್ವಿಯಾಗಿ ಹಮ್ಮಿಕೊಂಡು ನಾವು ದೇಶಕ್ಕೆ ಮಾದರಿಯಾಗಿದ್ದೇವೆ. ಇದರಿಂದ ಇಂದು ದೇಶವೇ ನಮ್ಮ ರಾಜ್ಯದತ್ತ ತಿರುಗಿ ನೋಡುತ್ತಿದೆ ಎಂದರು.
ಕಳೆದ ಎರಡು ವರ್ಷಗಳ ಹಿಂದೆ ತುಂಗಭದ್ರಾ ಜಲಾಶಯದ ಗೇಟ್ ಸಂಖ್ಯೆ-19 ಕೊಚ್ಚಿ ಹೋಗಿತ್ತು. ಈ ಬಗ್ಗೆ  ಸಚಿವರು, ಶಾಸಕರು ಮಾಹಿತಿ ನೀಡಿದ ಮರು ದಿನವೇ ನಾನು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಹಿರಿಯರಾದ ಕನ್ಹಯ್ಯನಾಯ್ಡು ಅವರೊಂದಿಗೆ ಚರ್ಚಿಸಿ ಗೇಟ್ ಅಳವಡಿಕೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದರು.
 ತಜ್ಞರ ವರದಿಯಂತೆ ಕ್ರೆಸ್ಟ್ ಗೇಟ್ ಅಳವಡಿಕೆ ಕಾರ್ಯದಿಂದಾಗಿ ಅಣೆಕಟ್ಟಿನ ಆಯಸ್ಸು ಮುಂದಿನ 50 ವರ್ಷಗಳವರೆಗೆ ವೃದ್ಧಿಸಲಿದೆ. ತಜ್ಞರ ವರದಿಯಂತೆ ಹೊಸ ಚೈನ್‌ಗಳನ್ನು ಅಳವಡಿಸಲು ನಿರ್ಧರಿಸಿದ್ದು, ಮೊದಲ ಸೆಟ್ ಹೊಸ ಚೈನ್‌ಗಳು ಮೇ 7 ರಂದು ಆಗಮಿಸಲಿದ್ದು, ಮೇ ಅಂತ್ಯದೊಳಗೆ ಚೈನ್ ಅಳವಡಿಕೆ ಕಾರ್ಯ ಸಂಪೂರ್ಣ ಮುಗಿಯಲಿದೆ ಎಂದರು.
ತುಂಗಭದ್ರಾ ಅಣೆಕಟ್ಟಿನ ಸುತ್ತಲಿನ ಕೈಗಾರಿಕೆಗಳಿಂದ ರಾಸಾಯನಿಕಯುಕ್ತ ನೀರು ಅಣೆಕಟ್ಟನ್ನು ಸೇರುತ್ತಿರುವ ಬಗ್ಗೆ ವರದಿಗಳು ಬಂದಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜನರ ಆರೋಗ್ಯ ಮತ್ತು ಬೆಳೆಗಳ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಈಶ್ವರ ಬಿ. ಖಂಡ್ರೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ, ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಬಳ್ಳಾರಿ ಸಂಸದರಾದ ಇ. ತುಕಾರಾಂ, ಶಾಸಕರಾದ ಎಚ್ ಆರ್ ಗವಿಯಪ್ಪ, ಎಂ.ಪಿ.ಲತಾ, ಡಾ.ಎನ್.ಟಿ.ಶ್ರೀನಿವಾಸ, ಅನ್ನಪೂರ್ಣ ತುಕಾರಾಂ,
ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ವಿಜಯನಗರ ಜಿಲ್ಲಾಧಿಕಾರಿಗಳಾದ ಕವಿತಾ ಮನ್ನಿಕೇರಿ, ಜಿ.ಪಂ.ಸಿಇಓ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ್ ಎಲ್. ಅರಸಿದ್ದಿ, ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿಗಳಾದ ಆರ್.‌ಹೇಮಂತ್ ಕುಮಾರ್, ಟಿಬಿ ಬೋರ್ಡ್ ಹಾಗೂ ಕೆ.ಎನ್.ಎನ್.ಎಲ್. ಅಧಿಕಾರಿಗಳಾದ ಟಿಬಿ ಬೋರ್ಡ್ ಕಾರ್ಯದರ್ಶಿಗಳಾದ ಒ.ಆರ್.ಕೆ ರೆಡ್ಡಿ, ಮುಖ್ಯ ಇಂಜಿನಿಯರ್ ಶ್ರೀನಿವಾಸ ಮಲ್ಲಿಗಿವಾಡ, ಎಸ್.ಇ ನಾರಾಯಣ ನಾಯ್ಕ, ಇಇ ನಾಗನಾಥ, ಎಇಇ ಧರ್ಮರಾಜ್ ಹಾಗೂ ಜ್ಞಾನೇಶ್ವರ,  ಎಇಇ ಜಾನಕಾರ, ಶಾಖಾ ಅಧಿಕಾರಿಗಳಾದ ಜಿ. ಕಿರಣ, ಪಂಪಾಪತಿ ಡಿ.ಕೆ. ಮತ್ತು ಹುಲಿರಾಜ್ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Total Views: 0
Share This Article