
Baldota Hatao Koppal Bachao Dharani enters 185th day

185ನೇ ದಿನದಲ್ಲಿ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ ಧರಣಿ

ಕೊಪ್ಪಳ: ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನಡೆಸುತ್ತಿರುವ ಬಲ್ಡೋಟ ತೊಲಗಲಿ ಕೊಪ್ಪಳ ಉಳಿಯಲಿ ಹೋರಾಟ 185ನೇ ದಿನ ಪೂರೈಸಿತು.
ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಮಾಲಿನ್ಯಕಾರಿ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆಯ ಶಿಫಾರಸ್ಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು, ಹೈಕೋರ್ಟ್ ಪ್ರಕರಣ ರಿ.ಪಿ. ನಂ: 5713/2009ರ ಆದೇಶದಂತೆ ಬಲ್ಡೋಟ ಅತಿಕ್ರಮಿಸಿರುವ ಬಸಾಪುರ ಕೆರೆಯನ್ನು ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಬೇಕು, ಕೊಪ್ಪಳ ಅರ್ಧ ಭಾಗ ಮಾಲಿನ್ಯ ಮಾಡಿದ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕವನ್ನು ಮುಚ್ಚಿ ನಗರ ಜನರ ಆರೋಗ್ಯ ಕಾಪಾಡಬೇಕು. ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಎಐಐಎಂಎಸ್ ಸಂಸ್ಥೆಯಿಂದ ಆರೋಗ್ಯ ಸಮೀಕ್ಷೆ ಮಾಡಬೇಕು, ಐಐಎಸ್ಸಿ ಸಂಸ್ಥೆಯಿಂದ ಬಾಧಿತ ಪ್ರದೇಶ ಮತ್ತು ತುಂಗಭದ್ರಾ ನೀರಿನ ಮಾಲಿನ್ಯದ ಸಮೀಕ್ಷೆ ಮಾಡಬೇಕು ಎಂದು ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ. 200ನೇ ದಿನದ ಧರಣಿಯನ್ನು ವಿಶೇಷವಾಗಿ ನಡೆಸಲು ವೇದಿಕೆ ತೀರ್ಮಾನಿಸಿದೆ. ಆ ದಿನದ ಹೋರಾಟ ಬೆಂಬಲಿಸಲು ಆರ್ಥಿಕ ತಜ್ಞ, ನಿವೃತ್ತ ಹಂಪಿ ವಿ.ವಿ. ಪ್ರಾಧ್ಯಾಪಕ ಟಿ. ಆರ್. ಚಂದ್ರಶೇಖರ ಅವರನ್ನು ಆಹ್ವಾನಿಸಲಾಗಿದೆ. ಅವರು ಕಾರ್ಖಾನೆ ಮಾಲಿನ್ಯದಿಂದ ಸಂತ್ರಸ್ತರಾದ ಬಾಧಿತ ಹಳ್ಳಿಗಳ ಜನರನ್ನು ಭೇಟಿ ಮಾಡಿ, ಅವರ ಸಮಸ್ಯೆ ಆಲಿಸಿಕೊಂಡು ಬಂದು ಹೋರಾಟದ ವೇದಿಕೆಯಲ್ಲಿ ಮಾತನಾಡುತ್ತಾರೆ ಎಂದು ವೇದಿಕೆಯ ಸಂಘಟಕರು ಹೇಳಿದ್ದಾರೆ.
ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಡು, ಶಿವಪ್ಪ ಹಲಗೇರಿ, ನಾಗರಾಜ ಕುಷ್ಟಗಿ, ವಿಜಯಮಹಾಂತೇಶ ಹಟ್ಟಿ, ಕೆ.ಮಂಜುನಾಥ ಗಂಗಾವತಿ, ಗಂಗಮ್ಮ ಕುರುಗೋಡು, ರಾಮಲಿಗಯ್ಯ ಶಾಸ್ತ್ರಿ, ದುರುಗಪ್ಪ ಕನಕಮನಿ, ಭೀಮಪ್ಪ ಯಲಬುರ್ಗಾ ಭಾಗವಹಿಸಿದ್ದರು.
