
141st International Workers' Day: CITU expresses outrage over anti-labor policies
141ನೇ ವಿಶ್ವ ಕಾರ್ಮಿಕ ದಿನಾಚರಣೆ: ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಿಐಟಿಯು ಆಕ್ರೋಶ

ಗಂಗಾವತಿ, ಮೇ 1:ಬದುಕಲು ಯೋಗ್ಯ ಕೂಲಿ ನೀಡಬೇಕು, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಬೇಕು” ಎಂಬ ಘೋಷಣೆಗಳೊಂದಿಗೆ ಸಿಐಟಿಯು ನೇತೃತ್ವದಲ್ಲಿ 141ನೇ ವಿಶ್ವ ಕಾರ್ಮಿಕ ದಿನಾಚರಣೆ ನಗರದಲ್ಲಿ ಹಮ್ಮಿಕೊಳ್ಳಲಾಯಿತು.
ಗಂಗಾವತಿ ಗಾಂಧಿ ವೃತ್ತದಿಂದ ಬೃಹತ್ ಮೆರವಣಿಗೆ ನಡೆಸಿದ ಕಾರ್ಮಿಕರು, ಡಾ. ಬಾಬು ಜಗಜೀವನ್ ರಾಮ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ನಿರುಪಾದಿ ಬೆಣಕಲ್, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಹೊಸ ಕಾರ್ಮಿಕ ಕಾನೂನುಗಳ ಮೂಲಕ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿ ನಡೆದುಕೊಳ್ಳುತ್ತಿವೆ” ಎಂದು ಆರೋಪಿಸಿದರು.
ರೈತರು, ಕೃಷಿ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಶ್ರಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಕಾರ್ಮಿಕರಿಗೆ ಕೆಲಸಕ್ಕೆ ತಕ್ಕಂತೆ ವೇತನ ನೀಡುವುದರ ಜೊತೆಗೆ ಕನಿಷ್ಠ ವೇತನವನ್ನು ಪ್ರತಿ ತಿಂಗಳ ಐದನೇ ತಾರೀಖಿನೊಳಗೆ ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಭೆಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಎಂ.ಬಿ. ನಾಡಗೌಡ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಡಗ್ಗಿ, ಜಿಲ್ಲಾ ಖಜಾಂಚಿ ಲಕ್ಷ್ಮೀದೇವಿ, ಜಿಲ್ಲಾ ಉಪಾಧ್ಯಕ್ಷೆ ಗಿರಿಜಾ ದರೋಜಿ, ಮುಖಂಡರಾದ ಅನಂತ ಲಕ್ಷ್ಮಿ, ಕೃಷ್ಣಪ್ಪ, ಎ. ರಮೇಶ್, ಮುತ್ತಣ್ಣ ಹಾಗೂ ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.
