Decision to release water to Tungabhadra left bank main canal to fill lakes in Koppal and Raichur districts

ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲು ನಿರ್ಧಾರ
ಕೊಪ್ಪಳ ಮಾರ್ಚ್ 31 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಲ್ಲಿ 2025-26ನೇ ಜಲವರ್ಷದಲ್ಲಿ ನೀರಿನ ಲಭ್ಯತೆ ಆಧರಿಸಿ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರ ಆದೇಶದ ಮೇರೆಗೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಲಯ ಕಲಬುರಗಿ ರವರು ನಿಗದಿ ಪಡಿಸಿದ ವೇಳಾಪಟ್ಟಿಯಂತೆ ನೀರಿನ್ನು ಹರಿಸಲು ನಿರ್ಧಾರಿಸಲಾಗಿದೆ.
ಅದರಂತೆ ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಯಲ್ಲಿನ ತೂಬುಗಳ ಗೇಟ್‌ಗಳ ಮುಖಾಂತರ ಕೆರೆಕಟ್ಟೆಗಳಲ್ಲಿ ಕುಡಿಯುವ ಸಲುವಾಗಿ ನೀರು ಶೇಖರಣೆ ಮಾಡಲು ಹಾಗೂ ನಿಗದಿತ ಪ್ರಮಾಣದ ನೀರನ್ನು 104 ಮೈಲ್ ವರೆಗೆ ಹರಿಸಿ ಮತ್ತು ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಸಮರ್ಪಕ ನೀರು ನಿರ್ವಹಣೆ ಮಾಡಬೇಕು.
ನಿಗದಿತ ವೇಳಾಪಟ್ಟಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ (0 ರಿಂದ 104 ಮೈಲ್ ವರೆಗೆ) ಗೆ ಕುಡಿಯುವ ನೀರಿಗಾಗಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ಮಾರ್ಚ್ 31 (ಬೆಳಗ್ಗೆ 8 ಗಂಟೆ) ರಿಂದ ಏಪ್ರಿಲ್ 15ರ (ಬುಧವಾರ ಬೆಳಗ್ಗೆ 8 ಗಂಟೆ) ವರೆಗೆ 1500 ಕ್ಯೂಸೆಕ್ಸ್ ನಂತೆ ಕುಡಿಯುವ ನೀರು ಹರಿಸಲಾಗುವುದು.
ಅದರಂತೆ, ಯರಮರಸ್ ವಿಭಾಗ ಏಪ್ರಿಲ್ 2 ರಿಂದ ಏ. 6ರ ವರೆಗೆ, ಸಿರವಾರ ವಿಭಾಗ ಏ. 7 ರಿಂದ ಏ. 9 ರವರೆಗೆ, ಸಿಂದನೂರು ವಿಭಾಗ ಏ. 10 ರಿಂದ ಏ. 12ರ ವರೆಗೆ ಹಾಗೂ ವಡ್ಡರಹಟ್ಟಿ ವಿಭಾಗದ ಏ. 13 ರಿಂದ ಏ. 15ರ ವರೆಗೆ ನೀರು ಹರಿಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ರೈತ ಭಾಂದವರಲ್ಲಿ ಮನವಿ: ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಸಾರ್ವಜನಿಕ ಹಿತ ದೃಷ್ಟಿಯಿಂದ ಎಲ್ಲಾ ಜನಸಾಮಾನ್ಯರಿಗೂ ಹಾಗೂ ರೈತ ಭಾಂದವರಿಗೆ ಈ ಪ್ರಕಟಣೆಯ ಮೂಲಕ ವಿನಂತಿಸುವುದೆನೇಂದರೆ, ಕಾಲುವೆಯಲ್ಲಿ ಮತ್ತು ಕಾಲುವೆಯ ಅಂಚಿನಲ್ಲಿ ಓಡಾಡುವುದು, ಕಾಲುವೆಯಿಂದ ನೀರನ್ನು ಜನಸಾಮಾನ್ಯರು ಅಥವಾ ರೈತರು ಬಳಸುವುದನ್ನು ಮತ್ತು ಎತ್ತಿಕೊಳ್ಳುವುದನ್ನು ನಿಷೇಧಗೊಳಿಸಲಾಗಿರುತ್ತದೆ. ಕಾರಣ ತಾವುಗಳು ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸುವಂತೆ ಕನೀನಿನಿ, ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎಸ್.ಬಿ ಮಲ್ಲಿಗವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
