ಜನಗಣತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ- ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ

Mallikarjun
5 Min Read

All preparations by the district administration for the census program- District Collector Dr. Suresh




ಜನಗಣತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ- ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ


ಕೊಪ್ಪಳ ಮಾರ್ಚ್ 27 (ಕರ್ನಾಟಕ ವಾರ್ತೆ): 2026ರ ಏಪ್ರಿಲ್ 1 ರಿಂದ ಪ್ರಾರಂಭವಾಗಲಿರುವ ಜನಗಣತಿ- 2027 ಕಾರ್ಯವನ್ನು ಕೊಪ್ಪಳ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ “ಜನಗಣತಿ ಕಾರ್ಯ-2027 ಮತ್ತು ಪೆಟ್ರೋಲ್, ಡಿಸೇಲ್, ಗ್ಯಾಸ್‌ ಹಾಗೂ ಇತರೆ ವಿಷಯಗಳ” ಕುರಿತು ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಅಧಿಸೂಚನೆಯನ್ನು ಹೊರಡಿಸಿರುತ್ತದೆ. ಅದರನ್ವಯ ಮೊದಲ ಹಂತವಾದ ಸ್ವಯಂ ಗಣತಿ ಹಾಗೂ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವನ್ನು 2026ರ ಏಪ್ರಿಲ್ ಮತ್ತು ಮೇ 2026ರ ಮಾಹೆಗಳಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿರುತ್ತದೆ. ಜನಗಣತಿ ಕಾರ್ಯದ ಭಾಗವಾಗಿ ಸ್ವಯಂ ಗಣತಿ ಕಾರ್ಯವನ್ನು ಏಪ್ರಿಲ್ 1 ರಿಂದ ಏ. 15ರ ವರೆಗೆ ಹಾಗೂ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವನ್ನು ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಏಪ್ರಿಲ್ 16 ರಿಂದ ಮೇ 15ರವರೆಗೆ ನಿಗದಿಪಡಿಸಿ ರಾಜ್ಯ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿರುತ್ತದೆ. ಈ ಜನಗಣತಿಯನ್ನು ಜನಗಣತಿ ಕಾಯ್ದೆ-1948 ರನ್ವಯ ಮಾಡಲಾಗುತ್ತಿದೆ ಎಂದರು.
ಕಾಲ ವೆಬ್‌ ಪೋರ್ಟಲ್ ಜನಗಣತಿ-2027 ಸಂಪೂರ್ಣ ಡಿಜಿಟಲ್ ಜನಗಣತಿಯಾಗಿದ್ದು, ಮೊಬೈಲ್ ಆಪ್ ಮತ್ತು ವೆಬ್ ಪೋರ್ಟಲ್ ಮುಖಾಂತರ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಹೆಚ್ಎಲ್ಒ (Phase-I, House listing and Housing Census (HLO)) ರಲ್ಲಿ ಮೊದಲ 15 ದಿನಗಳ (https://se.census.gov.in) ಮೂಲಕ ಸ್ವಯಂ-ಗಣತಿ (ಎಸ್ಇ) ಗೆ ಅವಕಾಶವಿರುತ್ತದೆ. ಅದರಂತೆ ಮನೆಯ ಯಾವುದೇ ಸದಸ್ಯರು 15 ರಿಂದ 20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್ ಅಥವಾ ಇಮೇಲ್ ನಲ್ಲಿ ಸ್ವಯಂ-ಗಣತಿ ಐಡಿ (ಎಸ್ಇ ಐಡಿ)ಯನ್ನು ಪಡೆಯಬಹುದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ಧೃಢೀಕರಿಸಲು ಮತ್ತು ಸ್ವಯಂ-ಗಣತಿ ದತ್ತಾಂಶದ ಅಂತಿಮ ಸಲ್ಲಿಕೆಗಾಗಿ ಎಸ್ಇ ಐಡಿ ಯನ್ನು ಅವರೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ ಎಂದು ಹೇಳಿದರು.
ಗಣತಿದಾರರು ಏಪ್ರಿಲ್ 16 ರಿಂದ ಮೇ 15ರ ವರೆಗೆ ತಮಗೆ ಹಂಚಿಕೆ ಮಾಡಲಾದ ಬ್ಲಾಕ್‌ಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ನಿಗದಿತ ನಮೂನೆಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಜನಗಣತಿ ಕಾರ್ಯ 2027ರ ನಿರ್ವಹಣೆಗಾಗಿ ವಿವಿಧ ಅಧಿಕಾರಿಗಳನ್ನು ನೇಮಿಸಲಾಗಿರುತ್ತದ್ದು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅಪರ ಪ್ರಧಾನ ಜನಗಣತಿ ಅಧಿಕಾರಿಯಾಗಿ, ಅಪರ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಜನಗಣತಿ ಅಧಿಕಾರಿಯಾಗಿ, ಉಪವಿಭಾಗಾಧಿಕಾರಿಗಳನ್ನು ಉಪವಿಭಾಗೀಯ ಜನಗಣತಿ ಅಧಿಕಾರಿಯಾಗಿ, ತಾಲ್ಲೂಕಿನ ಎಲ್ಲ ತಹಶೀಲ್ದಾರರನ್ನು ಆಯಾ ತಾಲ್ಲೂಕುಗಳ ಗ್ರಾಮೀಣ ಭಾಗಗಳಿಗೆ ಚಾರ್ಜ ಜನಗಣತಿ ಅಧಿಕಾರಿಗಳನ್ನಾಗಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳನ್ನು ಆಯಾ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಗೆ ಚಾರ್ಜ ಜನಗಣತಿ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಗಂಗಾವತಿ ಗ್ರಾಮಾಂತರ, ಗಂಗಾವತಿ ನಗರ, ಕನಕಗಿರಿ ಗ್ರಾಮಾಂತರ, ಕನಕಗಿರಿ ನಗರ, ಕಾರಟಗಿ ಗ್ರಾಮೀಣ, ಕಾರಟಗಿ ನಗರ, ಕೊಪ್ಪಳ ಗ್ರಾಮಾಂತರ, ಕೊಪ್ಪಳ ನಗರ, ಭಾಗ್ಯ ನಗರ, ಕುಷ್ಟಗಿ ಗ್ರಾಮೀಣ, ಕುಷ್ಟಗಿ ನಗರ, ತಾವರಗೇರಾ ನಗರ, ಹನಮಸಾಗರ ನಗರ, ಕುಕನೂರು ಗ್ರಾಮಾಂತರ, ಕುಕನೂರು ನಗರ, ಯಲಬುರ್ಗಾ ಗ್ರಾಮಾಂತರ, ಯಲಬುರ್ಗಾ ನಗರ ಸೇರಿದ ಜಿಲ್ಲೆಯಲ್ಲಿ ಒಟ್ಟು 2523 ಒಟ್ಟು ಹೆಚ್ಎಲ್.ಬಿ.ಗಳು, 2783 ಎಣಿಕೆದಾರರು, 470 ಮೇಲ್ವಿಚಾರಕರು ಸೇರಿ ಒಟ್ಟು 3253 ಜನರನ್ನು ಜನಗಣತಿ ಕಾರ್ಯಕ್ರಮಕ್ಕೆ ನೇಮಕ ಮಾಡಲಾಗಿದೆ. 2027ರ ಭಾರತ ಜನಗಣತಿ ಮೊದಲ ಹಂತವಾದ ಮನೆಗಳ ಪಟ್ಟೆ ಮತ್ತು ಮನೆ ಗಣತಿ (ಹೆಚ್ಎಲ್ಒ) ಯ ಪ್ರಕ್ರಿಯೆಯನ್ನು ತ್ವರಿತಗೊಳಿಸಲು (https://se.census.gov.in) ವೆಬ್ ಪೋರ್ಟಲ್‌ನ ಮೂಲಕ ಸ್ವಯಂ-ಗಣತಿ (Self Enumeration) ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಮತ್ತು ಮನೆ ಮನೆಗಳಿಗೆ ಗಣತಿದಾರರ ಭೇಟಿ ನೀಡಿದಾಗ ಅಗತ್ಯ ಮಾಹಿತಿ ನೀಡುವ ಮೂಲಕ ಸಹಕರಿಸಿ ರಾಜ್ಯದಲ್ಲಿ ನಡೆಯಲಿರುವ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಹಾಗೂ ಸ್ವಯಂ-ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
*ಜಿಲ್ಲೆಯಲ್ಲಿ ಯಾವುದೇ ರೀತಿಯ ಪೆಟ್ರೋಲ್ & ಡಿಸೇಲ್ ಕೊರತೆಯಿಲ್ಲ:* ಜಿಲ್ಲೆಯಲ್ಲಿ ಐಒಸಿಎಲ್ 70, ಬಿಪಿಸಿಎಲ್ 46, ಹೆಚ್‌ಪಿಸಿಎಲ್ 34 ಹಾಗೂ ಜಿಯೋ ಬಿಪಿ 6 ಮತ್ತು ನಯಾರ 11 ಸೇರಿ ಒಟ್ಟು 167 ಪೆಟ್ರೋಲ್ ಬಂಕ್‌ಗಳಿವೆ. ಜಿಲ್ಲೆಯಲ್ಲಿ ಒಂದು ದಿನಕ್ಕೆ 159 ಕಿಲೋ ಲೀಟರ್ ಪೆಟ್ರೋಲ್ ಮತ್ತು 470 ಕಿಲೋ ಲೀಟರ್ ಡಿಸೇಲ್ ಸೇರಿ 630 ಕಿಲೋ ಲೀಟರ್ ಇಂಧನದ ಅವಶ್ಯಕತೆಯಿದ್ದು, ಒಂದು ತಿಂಗಳಲ್ಲಿ ಒಟ್ಟು 4936 ಕಿಲೋ ಲೀಟರ್ ಪೆಟ್ರೋಲ್ ಹಾಗೂ 14,113 ಕಿಲೋ ಲೀಟರ್ ಡಿಸೇಲ್ ಬೇಕಾಗುತ್ತದೆ. ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನಿರಂತರ ಸರಬರಾಜು ಆಗುತ್ತಿದೆ.
 ಕೆಲವು ಗ್ರಾಮೀಣ ಭಾಗಗಳಲ್ಲಿ ಜನರು ಆತಂಕಕ್ಕೆ ಒಳಗಾಗಿ ಪೆಟ್ರೋಲ್ & ಡಿಸೇಲ್ ಶೇಖರಣೆ ಮಾಡಿಕೊಳ್ಳುತ್ತಿರುವುದು ಕೇಳಿಬರುತ್ತಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಪೆಟ್ರೋಲ್ & ಡಿಸೇಲ್ ಅಭಾವ ಇರುವುದಿಲ್ಲ. ಸಾಕಷ್ಟು ತೈಲ ಸಂಗ್ರಹ ಎಲ್ಲಾ ಬಂಕ್‌ಗಳಲ್ಲಿಯೂ ಲಭ್ಯವಿರುತ್ತದೆ. ಕಾರಣ ಸಾರ್ವಜನಿಕರು ಆತಂಕ ಪಡಬೇಕಾಗಿರುವುದಿಲ್ಲ. ನಾಗರಿಕರು ಭಯಭೀತರಾಗಿ ಇವುಗಳ ಖರೀದಿಯಲ್ಲಿ ತೊಡಗಬಾರದು. ಇಂತಹ ಕಾರ್ಯದಲ್ಲಿ ತೊಡಗುವುದು ಅನಗತ್ಯ, ಅನಾನುಕೂಲತೆಯನ್ನು ಉಂಟುಮಾಡಬಹುದು ಮತ್ತು ಸಾಮಾನ್ಯ ಪೂರೈಕೆ ಕಾರ್ಯವಿಧಾನಗಳನ್ನು ಅಡ್ಡಿಪಡಿಸಬಹುದು. ದೇಶದಲ್ಲಿ ಸದ್ಯ ಎರಡು ತಿಂಗಳಿಗೆ ಆಗುವಷ್ಟು ಇಂಧನ ಲಭ್ಯವಿದೆ ಎಂದು ಮಿನಿಸ್ಟಿç ಆಫ್ ಪೆಟ್ರೋಲಿಯಂ ಮತ್ತು ನ್ಯಾಷ್ನಲ್ ಗ್ಯಾಸಿಂಗ್ ನವರು ಸ್ಪಷ್ಠೀಕರಣ ನೀಡಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದರು.
 ಜಿಲ್ಲೆಯಲ್ಲಿ ಗೃಹಬಳಕೆದಾರರಿಗೆ ಸಿಲಿಂಡರ್‌ಗಳ ಕೊರತೆ ಇರುವುದಿಲ್ಲ ಹಾಗೂ ಕಲ್ಯಾಣ ಇಲಾಖೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ನಿಲಯಗಳು, ಆಸ್ಪತ್ರೆಗಳು, ಅಕ್ಷರ ದಾಸೋಹ ಯೋಜನೆಯಡಿಯಲ್ಲಿನ ಶಾಲೆಗಳಿಗೆ ಮತ್ತು ಇಂದಿರಾ ಕ್ಯಾಂಟಿನ್ ಗಳಿಗೆ ಆದ್ಯತೆಯ ಮೇಲೆ ಸಿಲಿಂಡರ್ ವಿತರಿಸಲು ಕ್ರಮವಹಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಬಿಪಿಸಿ 11, ಐಒಸಿ 6 ಮತ್ತು ಹೆಚ್.ಪಿ.ಸಿ 7 ಸೇರಿದಂತೆ ಒಟ್ಟು 24 ಗ್ಯಾಸ್ ಏಜೆನ್ಸಿಗಳುವೆ. ಸಿಂಗಲ್ ಸಿಲಿಂಡರ್ ಗಳ ಗ್ರಾಹಕರಿಗೆ ಬುಕ್ಕಿಂಗ್ ಅವಧಿ 25 ದಿನ, ಡಬಲ್ ಸಿಲಿಂಡರ್ ಗಳ ಗ್ರಾಹಕರಿಗೆ ಬುಕ್ಕಿಂಗ್ ಅವಧಿ 35 ದಿನ, ಗ್ರಾಮೀಣ ಪ್ರದೇಶದ ಉಜ್ವಲ ಯೋಜನೆಯಲ್ಲಿ ಗ್ರಾಹಕರಿಗೆ ಬುಕ್ಕಿಂಗ್ ಅವಧಿ 45 ದಿನಗಳು. ಗೃಹಬಳಕೆ ಸಿಲಿಂಡರ್ ಗಳ ಸಂಪರ್ಕ ಹೊಂದಿದವರ ವಿವರದಂತೆ ಜಿಲ್ಲೆಯಲ್ಲಿ 2,24,877 ಸಿಂಗಲ್, 1,52,138 ಡಬಲ್ ಸೇರಿ ಒಟ್ಟು 3,77,015 ಗೃಹಬಳಕೆ ಸಂಪರ್ಕಗಳಲ್ಲಿ ವಿನಾಯಿತಿ ಹೊಂದಿದ 2824 ಸಂಪರ್ಕಗಳು ಸೇರಿ ಒಟ್ಟು 3,79,839 ಗೃಹಬಳಕೆ ಸಿಲಿಂಡರ್‌ಗಳ ಸಂಪರ್ಕ ಹೊಂದಿವೆ. 4229 ವಾಣಿಜ್ಯ ಬಳಕೆ ಸಂಪರ್ಕ ಹೊಂದಿವೆ. ಗೃಹಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಬಳಸುತ್ತಿರುವದನ್ನು ಪತ್ತೆಹಚ್ಚಿ 45 ಸಿಲಿಂಡರ್‌ಗಳನ್ನು ಜಿಪ್ತಿ ಮಾಡಲಾಗಿದೆ ಎಂದು ಹೇಳಿದರು.
 ಈ ಬಗ್ಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಸಾರ್ವಜನಿಕರಿಗೆ ಅನಾನುಕೂಲವಾದಲ್ಲಿ ದೂರವಾಣಿ ಸಂಖ್ಯೆ: 08539-221515 ಗೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
 ಈ ಸಂದರ್ಭದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ವಿಶ್ವನಾಥಗೌಡ ಎಂ.ಎನ್., ಕೇಂದ್ರ ಸರ್ಕಾರದ ಆಯಿಲ್, ಪೆಟ್ರೋಲ್ ಕಂಪನಿಯ ಮತ್ತು ಜಿಲ್ಲಾಧಿಕಾರಿಗಳಿ ಕಚೇರಿಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment