ಆನೆಗೊಂದಿ ಗ್ರಾಮಗಳನ್ನು ಕೋರ್ ಜೋನ್‌ನಿಂದ ಹೊರಗಿಡುವಂತೆ ಒತ್ತಾಯ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Demand to keep Anegondi villages out of the core zone




ಆನೆಗೊಂದಿ ಗ್ರಾಮಗಳನ್ನು ಕೋರ್ ಜೋನ್‌ನಿಂದ ಹೊರಗಿಡುವಂತೆ ಒತ್ತಾಯ

ಜಾಹೀರಾತು

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ಏಕಪಕ್ಷೀಯ ಹಾಗೂ ಅವೈಜ್ಞಾನಿಕ ನಿಯಮಗಳನ್ನು ಖಂಡಿಸಿ, ಆನೆಗೊಂದಿ ಭಾಗದ 15 ಗ್ರಾಮಗಳ ನಿವಾಸಿಗಳು ಬಾಗಿಲು ಶ್ರೀರಂಗದೇವರಾಯಲು ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹಂಪಿ ಅಭಿವೃದ್ಧಿ ಪ್ರಾಧಿಕಾರವು ಹಂಪಿ ಪ್ರದೇಶದ ಸಂರಕ್ಷಣೆಯ ಹೊಣೆ ಹೊತ್ತಿದ್ದರೂ, ಸ್ಥಳೀಯರ ಅಭಿಪ್ರಾಯವನ್ನು ಪರಿಗಣಿಸದೇ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರಾಧಿಕಾರ ಸ್ಥಾಪನೆಯಾಗುವಾಗ ಪ್ರತಿ 10 ವರ್ಷಕ್ಕೊಮ್ಮೆ ಮಾಸ್ಟರ್ ಪ್ಲಾನ್ ಪರಿಷ್ಕರಣೆ ಹಾಗೂ ಸ್ಥಳೀಯರೊಂದಿಗೆ ಚರ್ಚೆ ನಡೆಸುವ ಭರವಸೆ ನೀಡಲಾಗಿದ್ದರೂ, ಅದು ಅನುಷ್ಠಾನವಾಗಿಲ್ಲವೆಂದರು.
ಪ್ರಾಧಿಕಾರದ ನಿಯಮಗಳಿಂದಾಗಿ ಆನೆಗೊಂದಿ ಭಾಗದ 15 ಗ್ರಾಮಗಳ ಅಭಿವೃದ್ಧಿಗೆ ಅಡ್ಡಿಯಾಗಿದೆ. ಮನೆಗಳ ಪುನರ್‌ನಿರ್ಮಾಣ, ಹೊಸ ಲೇಔಟ್‌ಗಳ ನಿರ್ಮಾಣ, ಕುಡಿಯುವ ನೀರು, ಶಾಲೆ ಹಾಗೂ ಆಸ್ಪತ್ರೆಗಳಂತಹ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೂ ಅಡೆತಡೆ ಉಂಟಾಗಿದೆ. ಯಾವುದೇ ಯೋಜನೆ ಕೈಗೊಳ್ಳಲು ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿದ್ದು, ಗ್ರಾಮ ಪಂಚಾಯಿತಿಗಳ ಅಧಿಕಾರ ಕುಂಠಿತವಾಗಿದೆ ಎಂದು ದೂರಿದರು.
ಇನ್ನೂ, ಕೋರ್ ಜೋನ್ ಘೋಷಣೆಯಲ್ಲಿ ಅಸಮಾನತೆ ಕಂಡುಬಂದಿದ್ದು, ಆನೆಗೊಂದಿ ಹಾಗೂ ವಿರೂಪಾಪೂರಗಡ್ಡಿಯನ್ನು ಶೇ.100 ಕೋರ್ ಜೋನ್‌ನಲ್ಲಿ ಸೇರಿಸಿದರೆ, ಸ್ಮಾರಕಗಳಿರುವ ಕಮಲಾಪೂರವನ್ನು ಶೇ.40ಕ್ಕೆ ಇಳಿಸಲಾಗಿದೆ ಎಂದು ಆರೋಪಿಸಿದರು.
ಕಾರಿಗನೂರನ್ನು ಗಣಿ ಉದ್ಯಮದ ಉದ್ದೇಶದಿಂದ ಪ್ರಾಧಿಕಾರದಿಂದ ಹೊರಗಿಡಲಾಗಿದೆ ಎಂದು ಹೇಳಿ, ಅದೇ ರೀತಿಯಲ್ಲಿ ಆನೆಗೊಂದಿಯ 15 ಗ್ರಾಮಗಳನ್ನೂ ಪ್ರಾಧಿಕಾರದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಆನೆಗೊಂದಿ ಸೇರಿದಂತೆ ಕಿಷ್ಕಿಂಧಾ–ಅಂಜನಾದ್ರಿ ಪ್ರಾಧಿಕಾರವನ್ನು ರಚಿಸಬೇಕು, ಕೋರ್ ಜೋನ್ ನಿಯಮಗಳನ್ನು ಸರಳೀಕರಿಸಬೇಕು, ಪ್ರತೀ ಗ್ರಾಮಕ್ಕೆ ಗಾಂವಠಾಣಾ ಗುರುತಿಸಬೇಕು ಹಾಗೂ ಅರಣ್ಯ ಪ್ರದೇಶದಲ್ಲಿರುವ ವಸತಿಗಳನ್ನು ಗುರುತಿಸಿ ಸೂಕ್ತ ಭೂಮಿ ವ್ಯವಸ್ಥೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Total Views: 0
Share This Article