
ನಮ್ಮೂರ ಶಾಲೆ ನಮ್ಮ ಹಕ್ಕು, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೈಬಿಡುವಂತೆ ತಾಲ್ಲೂಕಿನ ರಾಜ ರಾಮ್ ಪೇಟೆ ಗ್ರಾಮಸ್ಥರ ಆಗ್ರಹ
Our school is our right, demand of villagers of Raja Rampet in the taluk to abandon the KPS magnet project

ಕೊಪ್ಪಳ: ಹಳ್ಳಿಯ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಡಲು ಆಗ್ರಹಿಸಿ ತಾಲೂಕಿನ ರಾಜ ರಾಮ ಪೇಟೆ ಸರ್ಕಾರಿ ಶಾಲೆ ಉಳಿಸಲು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪೋಷಕರ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಒ ರಾಜ್ಯ ಸಮಿತಿ ಸದಸ್ಯೆ ಸಿಂಧು ಕೌದಿ ಅವರು ಮಾತನಾಡಿ, ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಆದೇಶದ ಪ್ರಕಾರ ರಾಜ್ಯಾದಂತ 5900 ಗ್ರಾಮ ಪಂಚಾಯಿತಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರವು ನಿರ್ಧರಿಸಿದೆ. ಈ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮಿಟರ್ ವ್ಯಾಪ್ತಿಯಲ್ಲಿ ಬರುವ ಉಳಿದ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ ಎಂದರು.
ಈಗಾಗಲೇ ಕಳೆದ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾ ರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ರಾಜ್ಯದ ಲಕ್ಷಾಂತರ ರೈತ-ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಈ ಯೋಜನೆಯ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಈ ಭಾಗಕ್ಕೆ ಸಣ್ಣ ಬೆಲೆ ಇಲ್ಲದಂತಾಗಿದೆ. ಜನಗಳ ಅನುಕೂಲಕ್ಕೆ ಇರುವಂತ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ನಿಗಮದ ನಿಧಿಯನ್ನು ಶಾಲೆಗಳನ್ನು ಮುಚ್ಚಲು ಬಳಸಿಕೊಳ್ಳುತ್ತಿರುವುದು ಅತ್ಯಂತ ಜನ ವಿರೋಧಿ ನೀತಿಯಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು. ರೈತರು-ಕಾರ್ಮಿಕರು-ದಿನಗೂಲಿ ಮಾಡುವವರು ತಮ್ಮ ಮಕ್ಕಳನ್ನು ಕೂಲಿ ಕೆಲಸ ಮಾಡಿ ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಶಾಲೆ ಮುಚ್ಚಿದರೆ ಅವರ ಮಕ್ಕಳ ಗತಿ ಏನು?”
ರಾಜರಾಮ್ ಪೇಟೆ ಸರ್ಕಾರಿ ಶಾಲೆಯಲ್ಲಿ 50 ಕ್ಕೂ ಹೆಚ್ಚು ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿಂದ ಹೊಸಬಂಡಿ ಹರ್ಲಾಪುರ ಕೆಪಿಎಸ್ ಶಾಲೆಗೆ ವೀಲಿನಗೊಂಡು, ಶಾಲೆ ಮುಚ್ಚುದರೆ ಇಲ್ಲಿನ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವುದು ಕೈ ಬಿಡಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಓ ರಾಜ್ಯ ಸಮಿತಿ ಸದಸ್ಯರಾದ ತುಳಜರಾಮ್ ಏನ್.ಕೆ ಹಾಗೂ ಊರಿನ ಮುಖಂಡರಾದ ಮಂಜುನಾಥ, ಅಶೋಕ, ಸಂಜೀವ ಪೋಷಕರಾದ ಲಕ್ಷ್ಮಿ,ಶ್ರೀನಿವಾಸ್ ವೆಂಕಟೇಶ್,ಸಂಜು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.




