
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ದೇಶದ ಕೋಟ್ಯಾಂತರ ದುಡಿಯುವವರ ಒಕ್ಕೂರಿಲಿನ ಧ್ವನಿಯಾಗಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ
All India General Strike: Massive protest in Koppal as a united voice of crores of workers of the country

ಕೊಪ್ಪಳ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ, ಕಾರ್ಮಿಕ–ರೈತ ವಿರೋಧಿ ನೀತಿಗಳ ವಿರುದ್ಧ ದೇಶವ್ಯಾಪಿ ಕೋಟ್ಯಾಂತರ ಜನರ ಒಕ್ಕೂರಿಲಿನ ಧ್ವನಿಯಾಗಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಕೊಪ್ಪಳದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಹಿನ್ನೆಲೆಯಲ್ಲಿ ಕಾರ್ಮಿಕರು, ರೈತರು, ಯುವಜನರು, ಮಹಿಳೆಯರು ಸೇರಿದಂತೆ ವಿವಿಧ ದುಡಿಯುವ ವರ್ಗಗಳ ಸಾವಿರಾರು ಮಂದಿ ಭಾಗವಹಿಸಿ ಶಕ್ತಿಶಾಲಿ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಮುಷ್ಕರದ ಅಂಗವಾಗಿ ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಿಂದ ಅಶೋಕ ವೃತ್ತದವರೆಗೆ ರಸ್ತೆ ಬಂದ್ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗುತ್ತ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ಉದ್ದೇಶಿಸಿದ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಾಗೂ ಜಾರಿಗೊಳಿಸಲು ಮುಂದಾಗಿರುವ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳು (ಲೇಬರ್ ಕೋಡ್‌ಗಳು) ದುಡಿಯುವ ವರ್ಗ ದಶಕಗಳ ಹೋರಾಟದ ಮೂಲಕ ಗಳಿಸಿಕೊಂಡ ಹಕ್ಕುಗಳನ್ನು ಸಂಪೂರ್ಣವಾಗಿ ಕಿತ್ತುಕೊಳ್ಳುವಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಷ್ಕರದ ಹಕ್ಕು, ಸಾಮೂಹಿಕ ಚೌಕಾಸಿ, ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಸುರಕ್ಷತೆ ಹಕ್ಕುಗಳಿಗೆ ಧಕ್ಕೆ ಉಂಟಾಗಿದ್ದು, ದಿನಕ್ಕೆ 12 ಗಂಟೆಗಳ ದುಡಿಮೆ, ಗುತ್ತಿಗೆ ಹಾಗೂ ನಿಗದಿತ ಅವಧಿಯ ಉದ್ಯೋಗಗಳ ವಿಸ್ತರಣೆ, ಮಹಿಳೆಯರನ್ನು ರಾತ್ರಿ ಪಾಳಿಯಲ್ಲೂ ದುಡಿಸಿಕೊಳ್ಳುವ ನೀತಿಗಳು ಕಾರ್ಮಿಕರ ಬದುಕನ್ನು ಭಾರೀ ಅನಿಶ್ಚಿತತೆಗೆ ತಳ್ಳಿವೆ ಎಂದು ಹೇಳಿದರು.
ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ಸೇವೆಗಳಾದ ರೈಲ್ವೆ, ಬಂದರು, ಬ್ಯಾಂಕ್, ವಿಮೆ, ವಿದ್ಯುತ್, ಸಾರಿಗೆ, ದೂರಸಂಪರ್ಕ, ರಕ್ಷಣಾ ಉತ್ಪಾದನೆ, ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿ ದೇಶದ ಸಂಪತ್ತನ್ನು ದೊಡ್ಡ ಕಾರ್ಪೊರೇಟ್ ಮನೆತನಗಳಿಗೆ ಹಸ್ತಾಂತರಿಸಲಾಗುತ್ತಿದೆ. ಇದರ ಪರಿಣಾಮವಾಗಿ ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಅಸಮಾನತೆ ದಿನೇ ದಿನೇ ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಖಾಸಗೀಕರಣದಿಂದ ಜನಸಾಮಾನ್ಯರಿಗೆ ಮೂಲಭೂತ ಸೇವೆಗಳು ಅಸಾಧ್ಯವಾಗುತ್ತಿವೆ. ನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ಗ್ರಾಮೀಣ ಜನರ ಜೀವನಾಧಾರಕ್ಕೆ ಭಾರೀ ಹೊಡೆತ ನೀಡುತ್ತಿವೆ. ವಿದ್ಯುತ್ ತಿದ್ದುಪಡಿ ಕಾಯ್ದೆಯ ಮೂಲಕ ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ಜನರ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಬೀಳಲಿದೆ ಎಂದು ಎಚ್ಚರಿಸಿದರು.
ಬಸವೇಶ್ವರ ವೃತ್ತದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಎಂ.ಬಿ. ನಾಡಗೌಡ್ ಮಾತನಾಡಿ, ಲೇಬರ್ ಕೋಡ್‌ಗಳು ಹಾಗೂ ಪಂಚಾಯತಿ ನೌಕರರ ಸಮಸ್ಯೆಗಳ ಕುರಿತು ವಿವರಿಸಿದರು. ಎಐಯುಟಿಯುಸಿ ಜಿಲ್ಲಾ ಮುಖಂಡ ಶರಣು ಗಡ್ಡಿ ಮಾತನಾಡಿ, ಕೇಂದ್ರ–ರಾಜ್ಯ ಸರ್ಕಾರಗಳು ಕಾರ್ಪೊರೇಟ್ ಬಂಡವಾಳಗಾರರ ಸೇವೆಯಲ್ಲಿ ತೊಡಗಿಕೊಂಡು ಕಾರ್ಮಿಕರು, ರೈತರು ಹಾಗೂ ದುಡಿಯುವ ಜನರ ವಿರುದ್ಧ ನೀತಿಗಳನ್ನು ಜಾರಿಗೊಳಿಸುತ್ತಿವೆ ಎಂದು ಆರೋಪಿಸಿದರು.
ಐಎಫ್‌ಟಿಯು ಮುಖಂಡ ಬಸವರಾಜ್ ಶಿಲುವಂತರ್ ಮಾತನಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮಹಿಳಾ ಕಾರ್ಮಿಕರನ್ನು ಕನಿಷ್ಠ ವೇತನ ನೀಡದೆ ಶೋಷಿಸಲಾಗುತ್ತಿದೆ ಎಂದು ಹೇಳಿದರು. ಎಐಯುಕೆಎಸ್ ರಾಜ್ಯ ಅಧ್ಯಕ್ಷ ಡಿ.ಎಚ್. ಪೂಜಾರ್ ರೈತ ವಿರೋಧಿ ಬೀಜ ಕಾಯ್ದೆ, ಭೂಸ್ವಾಧೀನ ಕಾಯ್ದೆಗಳ ವಿರುದ್ಧ ಹೋರಾಟ ಅನಿವಾರ್ಯ ಎಂದು ಹೇಳಿದರು. ಸಿಐಟಿಯು ಜಿಲ್ಲಾ ಮುಖಂಡ ಹನುಮೇಶ್ ಕಲ್ಮಂಗಿ, ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್, ಐಎಡಬ್ಲ್ಯೂಯು ಮುಖಂಡ ಸುಂಕಪ್ಪ ಗದಗ್ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು.
ಪ್ರತಿಭಟನೆಯಲ್ಲಿ ಆಶಾ, ಅಂಗನವಾಡಿ, ಬಿಸಿಯೂಟ, ಹಾಸ್ಟೆಲ್ ಅಡುಗೆ ಸಹಾಯಕ ಮಹಿಳಾ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ದೇವದಾಸಿ ಮಹಿಳೆಯರು, ಪಂಚಾಯತಿ ನೌಕರರು, ಕೈಗಾರಿಕಾ ಕಾರ್ಮಿಕರು ಸೇರಿದಂತೆ ಎಲ್ಲಾ ದುಡಿಯುವ ವರ್ಗಗಳ ಸಾವಿರಾರು ಮಂದಿ ಭಾಗವಹಿಸಿದ್ದರು.
ಪ್ರತಿಭಟನಾಕಾರರು ನಾಲ್ಕು ಲೇಬರ್ ಕೋಡ್‌ಗಳ ಸಂಪೂರ್ಣ ರದ್ದುಪಡಿಕೆ, ವಿಬಿ.ಜಿ. ರಾಮ್ ಜಿ ಯೋಜನೆ ಸೇರಿದಂತೆ ಕಾರ್ಮಿಕ ವಿರೋಧಿ ಯೋಜನೆಗಳ ಹಿಂಪಡೆದು, ವಿದ್ಯುತ್ ತಿದ್ದುಪಡಿ ಕಾಯ್ದೆ ರದ್ದು, ಬೀಜ ಹಾಗೂ ಭೂಸ್ವಾಧೀನ ಕಾಯ್ದೆಗಳ ಜನವಿರೋಧಿ ತಿದ್ದುಪಡಿ ಹಿಂಪಡೆದು, ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಭದ್ರತೆ, ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಕೆ, ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿದರು.
ಅಖಿಲ ಭಾರತ ಮುಷ್ಕರವು ದೇಶದ ಕೋಟ್ಯಾಂತರ ದುಡಿಯುವ ಜನರ ಒಕ್ಕೂರಿನ ಶಕ್ತಿಯನ್ನೂ, ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿರುವ ಸೂಚನೆಯನ್ನೂ ನೀಡಿತು




