
ಕನಕಗಿರಿ: ಆಶಾ ಕಾರ್ಯಕರ್ತೆಯರಿಗೆ ಮಕ್ಕಳ ಹಕ್ಕುಗಳು,
ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ
Kanakagiri: Awareness program on child rights, laws and child safety for ASHA workers

ಕೊಪ್ಪಳ ಫೆಬ್ರುವರಿ 12 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ, ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಕನಕಗಿರಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ “ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ” ಆಯೋಜಿಸಲಾಗಿತ್ತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೊಬೇಷನ್ ಆಫೀಸರ ಶಿವಲೀಲಾ ವನ್ನೂರು ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಸರಕಾರವು ವಿವಿಧ ಕಾನೂನುಗಳನ್ನು ಜಾರಿಯಲ್ಲಿ ತಂದಿರುತ್ತದೆ. ಅವುಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ-2019 ಪ್ರಮುಖವಾದದ್ದು, ಈ ಕಾಯ್ದೆಯನ್ವಯ 18 ವರ್ಷದೊಳಗಿನ ಮಕ್ಕಳ ಮೇಲಿನ ಬೇಧಕ ಲೈಂಗಿಕ ಹಲ್ಲೆಗೆ ಕನಿಷ್ಠ 20 ವರ್ಷಗಳಿಂದ ಅಜೀವ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಲೈಂಗಿಕ ಕಿರುಕುಳ ಅಂದರೆ ಮಕ್ಕಳಿಗೆ ಶಾಬ್ಧಿಕ, ಅಂಗಿಕ, ಭಾಷಿಕ ಹಾಗೂ ಲಿಖಿತವಾಗಿ ಅವರ ಘನತೆಗೆ ಧಕ್ಕೆ ಉಂಟುಮಾಡಬಹುದಾದ ಯಾವುದೇ ಈ ರೀತಿಯ ಕೃತ್ಯಗಳಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಈ ರೀತಿಯ ಕೃತ್ಯಗಳಿಗೆ ಸಹಾಯ, ಪ್ರೋತ್ಸಾಹ ಮತ್ತು ಪ್ರಯತ್ನಪಟ್ಟವರಿಗೂ ಅಷ್ಟೇ ಪ್ರಮಾಣದ ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದರು.
ಇಂಟರ್‌ನೇಟ್ ಪ್ರಭಾವದಿಂದ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮಕ್ಕಳು ತಿಳಿದೊ, ತಿಳಿಯದೆಯೋ ಈ ಕಾಯ್ದೆಯಲ್ಲಿ ಸಿಲುಕುತ್ತಿದ್ದಾರೆ ಅಲ್ಲದೇ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆಯನ್ನು ಮಾಡಿದಂತವರು, ಭಾಗಿಯಾದವರು, ಪ್ರೋತ್ಸಾಹಿಸಿದವರು ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಈ ಕಾಯ್ದೆಯಲ್ಲಿ ಸಿಲುಕಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಗ್ರಾಮ ಮಟ್ಟದಲ್ಲಿ ವಿವಿಧ ರೀತಿಯಲ್ಲಿ ಜಾಗೃತಿಯನ್ನು ಮೂಡಿಸಲು ಗ್ರಾಮ ಮಟ್ಟದ “ಮಕ್ಕಳ ರಕ್ಷಣಾ ಸಮಿತಿ”ಯ ಸದಸ್ಯ ಕಾರ್ಯದರ್ಶಿಗಳಾದ ಆಶಾ ಕಾರ್ಯಕರ್ತೆಯರಿಗೆ “ಮಕ್ಕಳ ಹಕ್ಕುಗಳು, ಕಾನೂನುಗಳ ಮತ್ತು ಮಕ್ಕಳ ಸುರಕ್ಷತೆ ಕುರಿತು” ಸಾಮರ್ಥ್ಯವನ್ನುವೃದ್ಧಿಸಿ ಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿ, ತನ್ಮೂಲಕ ಮಕ್ಕಳ ಮೇಲಿನ ಲೈಂಗಿಕ ಹಲ್ಲೆ, ಬಾಲ್ಯವಿವಾಹಗಳನ್ನು ತಡೆದು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸುವಂತೆ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಅಸಾಂಸ್ಥಿಕ) ಪ್ರಶಾಂತ ರೆಡ್ಡಿ ಅವರು ಮಾತನಾಡಿ, ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರಡಿಯಲ್ಲಿ ಮಗು ಬೇಡವಾದಲ್ಲಿ ಅಂತಹ ಮಗುವನ್ನು ಎಲ್ಲೆಂದರಲ್ಲಿ ಬಿಸಾಡಿ ಮಗುವಿನ ಪ್ರಾಣಕ್ಕೆ ಎರವಾಗದೇ, ಅಂತಹ ಮಗುವನ್ನು 1098 ಮೂಲಕ ಅಥವಾ ನೇರವಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಬಹುದಾಗಿದೆ. ನಂತರ ಸಮಿತಿಯು ಮಗುವನ್ನು ಕುಟುಂಬದ ವಾತಾವರಣದಲ್ಲಿ ಬೆಳೆಸಲು ಅಗತ್ಯ ಪುನರವಸತಿಗಳನ್ನು ನಿಯಮಾನುಸಾರ ಕೈಗೊಳ್ಳುತ್ತದೆ. ಅಕ್ರಮ ದತ್ತು ಶಿಕ್ಷಾರ್ಹ ಅಪರಾಧವಾಗಿದೆ. ನಿಯಮಬಾಹಿರವಾಗಿ ದತ್ತು ಪಡೆದಲ್ಲಿ ಅಂತಹ ಪಾಲಕರು ಮತ್ತು ದತ್ತು ನೀಡಿದ ಪೋಷಕರಿಗೂ ಸಹ ಶಿಕ್ಷೆಯನ್ನು ವಿಧಿಸಬಹುದಾಗಿದ್ದು, ಈ ಕುರಿತು ಸಮುದಾಯಗಳಲ್ಲಿ ಆಶಾ ಕಾರ್ಯಕರ್ತೆರು ಜಾಗೃತಿಯನ್ನು ಮೂಡಿಸಿ ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಕಾನೂನುಬದ್ಧ ದತ್ತು ಪ್ರಕ್ರೀಯೆ ಮೂಲಕ ಮಕ್ಕಳನ್ನು ಹೊಂದಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಸಹಕರಿಸಿ ಎಂದು ತಿಳಿಸಿದರು.
ಪ್ರತಿಭಾ ಕಾಶಿಮಠ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016ರ ಕುರಿತು ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮವನ್ನು ರವಿಕುಮಾರ ಪವಾರ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕನಕಗಿರಿ ತಾಲೂಕಿನ ಎಲ್ಲಾ ಆಶಾಕಾರ್ಯಕರ್ತೆಯರು ಭಾಗವಹಿಸಿದ್ದರು.




