
ಚಿಲುಕೂರಿ ನಾಗೇಶ್ವರ್ ರಾವ್ ಕಾಲೇಜ್ ನಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

He wished everyone in the country a happy birthday to Madiwala Machideva

ಗಂಗಾವತಿ: ದಿನಾಂಕ 01-02-2026 ರಂದು ತಾಲೂಕಿನ ಚಿಲುಕೂರಿ ನಾಗೇಶ್ವರ್ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪವಾಡಸದೃಶ ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರದ ಪ್ರೊ.ಕರಿಗೂಳಿಯವರು,
ಸಾಮಾಜಿಕ ಶೋಷಣೆಯು ಹೆಚ್ಚಿದ್ದ 12ನೇ ಶತಮಾನದ ಕಾಲದಲ್ಲಿ ಸಮಾನತೆಯ ಸಂದೇಶ ಸಾರಿದ ಬಸವಾದಿ ಶರಣರಲ್ಲಿ ಪ್ರಮುಖರಾದ ಮಡಿವಾಳ ಮಾಚಿದೇವರು ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯವರು ಬಸವ ಚಿಂತನೆಯ ಕಾಲಘಟ್ಟದಲ್ಲಿ ಅತ್ಯಂತ ಕಟುಪ್ರಶ್ನೆ ಕೇಳಲು ಹೆಸರಾಗಿದ್ದರು, ತನ್ನ ಮೇಲೆ ದಾಳಿ ಮಾಡಿಸಿದ ಬಿಜ್ಜಳರಾಜನ ಸೈನ್ಯವನ್ನು ಹಾಗೂ ಆನೆಯನ್ನು ಸೋಲಿಸಿ ಗೆದ್ದ ಮಹಾನ್ ಶಕ್ತಿಶಾಲಿ ಶರಣರು, ‘ಬೇಡುವ ಭಕ್ತರಿಲ್ಲದೆ ಬಡವನಾದೇನಯ್ಯ’ ಎಂಬ ಬಸವಣ್ಣರನ್ನೇ, ನೀವು ಮಾತ್ರ ದಾನಿಗಳು ನಾವೆಲ್ಲರೂ ದರಿದ್ರರೇ ಎಂದು ಪ್ರಶ್ನಿಸಿ ಭಕ್ತರು ಬಡವರಲ್ಲ ಎಂದು ಸಾಬೀತುಪಡಿಸಿದ ಇವರು ಅತ್ಯಂತ ಭಕ್ತಿಮಯ ಜ್ಞಾನಿಗಳಾಗಿದ್ದರು, ಇದಕ್ಕೆ ಮೂಲ ಕಾರಣ ಶೂದ್ರರಿಗೆ ವಿದ್ಯೆ ದೊರೆಯದ ಕಾಲದಲ್ಲೇ ಇವರಿಗೆ ವಿದ್ಯೆ ಕಲಿಸಿದ ಇವರ ಗುರುಗಳಾದ ಮಲ್ಲಿಕಾರ್ಜುನಯ್ಯ ಸ್ವಾಮಿಗಳು.
ಜ್ಞಾನ ಸಂಪಾದನೆಯಲ್ಲಿ ಹಾಗೂ ಭಕ್ತಿಪಥದಲ್ಲಿ ಗುರುವಿನ ಪಾತ್ರ ಹಿರಿದು ಎಂಬುದಕ್ಕೆ ಮಡಿವಾಳ ಮಾಚಿದೇವರ ಜೀವನವೇ ಸಾಕ್ಷಿ.
ಸಾಮಾಜಿಕವಾಗಿ ಅಸಮಾನತೆಯನ್ನು ಆಚರಿಸುತ್ತಿದ್ದ ಅಂದಿನ ಕಾಲದಲ್ಲೇ, ಭಕ್ತರಲ್ಲದವರು ನನ್ನನು ಮುಟ್ಟಬೇಡಿ ಎಂಬ ಮಾತಿನೊಂದಿಗೆ ಜಾತಿವಾದಿಗಳನ್ನು ಆತ್ಮವಿಮರ್ಶೆಗೆ ಹಚ್ಚಿದ ಮಹನೀಯರು ಮಾಚಿದೇವರು, ಇಂತಹ ಮಹಾನ್ ಶರಣರು ಹುಟ್ಟಿ ಬೆಳೆದು ಪವಿತ್ರ ಸಂದೇಶ ನೀಡಿಹೋದ ಈ ನಮ್ಮ ಕಲ್ಯಾಣ ಕರ್ನಾಟಕ ನಾಡು ಧನ್ಯ, ಈ ಮಣ್ಣಲಿ ಜನಿಸಿದ್ದು ನಮ್ಮೆಲ್ಲರ ಪುಣ್ಯ, ನಡೆಯಲ್ಲೊಂದು ನುಡಿಯಲ್ಲಿ ಇನ್ನೊಂದು ಆಚರಿಸಿದವರು ದೇವರೇ ಆಗಿದ್ದರು ಪ್ರಶ್ನಾರ್ಹರು ಎಂದು ಪ್ರತಿಪಾದಿಸಿದ ಶ್ರೇಷ್ಠ ಶರಣರು ಮಾಚಿದೇವರು ಎಂದು ಅಭಿಪ್ರಾಯಪಟ್ಟರು, ಇವರ ವಚನಗಳ ಮೂಲಕ ಹೊರಹೊಮ್ಮಿದ ಮಾನವೀಯ ಮೌಲ್ಯಗಳು ಇಂದಿಗೂ ಅನುಕರಣೀಯ ಎಂದರು.
ಈ ಸಂದರ್ಭದಲ್ಲಿ ಚಿನ್ನವರಪ್ರಸಾದ ಹಾಗೂ ದುರ್ಗಾಕೃಷ್ಣ ಇದ್ದರು.




