AIMSS District Organizing Committee condemns the incident of assault and rape of a 17-year-old girl

ಕೊಪ್ಪಳ:ಕುಷ್ಟಗಿ ತಾಲೂಕಿನ ಮಾಟೂರು ಗ್ರಾಮದ ಬೀರಪ್ಪ ಇಲಕಲ್ ಎಂಬಾತ 17 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸೆಗಿರುವ ಘಟನೆಯನ್ನು ಎ ಐ ಎಂ ಎಸ್ ಎಸ್ (ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ) ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿಯು ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿಶಾರದಾ ಗಡ್ಡಿಯವರು ಹೇಳಿದರು.
ಮುಂದು ಮಾತನಾಡಿ ದೋಟಿಹಾಳ ಗ್ರಾಮ ಪಂಚಾಯತಿಯಲ್ಲಿ ಕರವಸೂಲಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ಹತ್ತಿ ಬಿಡಿಸುವ ಕೆಲಸಕ್ಕೆ ಹೋಗಿ ಬಾಲಕಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಆಕೆಯನ್ನು ಬಲವಂತವಾಗಿ ಎಳೆದೊಯ್ದು, ಆಕೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಿಗಿದ್ದಾನೆ. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಆದರೆ ಇದು ಇಷ್ಟಕ್ಕೆ ಸೀಮಿತಗೊಳ್ಳದೆ ಶೀಘ್ರಗತಿಯಲ್ಲಿ ತನಿಖೆಯನ್ನು ನಡೆಸಿ ಆರೋಪಿಗೆ ಅತ್ಯುಗ್ರ ಶಿಕ್ಷೆಯನ್ನು ವಿಧಿಸಬೇಕು, ಸಂತ್ರಸ್ತ ಬಾಲಕಿಗೆ ನ್ಯಾಯ ಒದಗಿಸಬೇಕೆಂದು
ಎ ಐ ಎಂ ಎಸ್ ಎಸ್ ಆಗ್ರಹಿಸುತ್ತದೆ.
ಹೆಣ್ಣನ್ನು ತನ್ನ ಆಸ್ತಿ ಎಂದೇ ಪರಿಗಣಿಸುವ ಪುರುಷ ಪ್ರಧಾನ ಮನೋಧೋರಣೆ, ಜಾತಿ ವೈಶಮ್ಯ, ಇಂದಿನ ಸಾಮಾಜಿಕ ಮಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುವ ಅಶ್ಲೀಲ ಸಿನಿಮಾ -ಸಾಹಿತ್ಯ, ಪೋರ್ನ್ ವೆಬ್ಸೈಟ್ ಗಳು, ಮದ್ಯ – ಮಾದಕ ವಸ್ತುಗಳು, ಇಂತಹ ಹಲವಾರು ಕಾರಣಗಳು ಎಷ್ಟೋ ಹೆಣ್ಣು ಜೀವಗಳನ್ನು ಪ್ರತಿ ಕ್ಷಣವು ಬಲಿ ತೆಗೆದುಕೊಳ್ಳುತ್ತಿವೆ. ಪ್ರಕರಣಗಳ ತನಿಖೆ, ಶಿಕ್ಷೆ ನೀಡುವಲ್ಲಿನ ವಿಳಂಬ ಹಾಗೂ ಸುಲಭವಾಗಿ ಸಿಗುವ ಜಾಮೀನು, ಅಪರಾಧಿಗಳಿಗೆ ಮತ್ತಷ್ಟು ಬಲ ತುಂಬುತ್ತಿವೆ. ಇತ್ತೀಚಿಗೆ ಮೈಸೂರಿನ ದಸರಾ ಸಂದರ್ಭದಲ್ಲಿ ಬಲೂನು ಮಾರಲು ಬಂದಿದ್ದ ಬಾಲಕಿಯ ಮೇಲಿನ ಅತ್ಯಾಚಾರ, ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ವಿದ್ಯಾರ್ಥಿನಿಯ ಹಾಗೂ ಮುದ್ದೇಬಿಹಾಳದ ಬನೋಶಿ ಗ್ರಾಮದಲ್ಲಿ 17 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರಗಳೇ ಇದಕ್ಕೆ ಸಾಕ್ಷಿ. ಈ ಪಟ್ಟಿ ಹೀಗೆ ಬೆಳೆಯುತ್ತಾ ಹೋಗುತ್ತಿದ್ದರು ಸರ್ಕಾರಗಳ ದಿವ್ಯ ನಿರ್ಲಕ್ಷ್ಯ ಮಾತ್ರ ಅತ್ಯಂತ ಖಂಡನೀಯ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನತೆ ಒಗ್ಗಟ್ಟಾಗಿ ಹೋರಾಟಗಳನ್ನು ಕಟ್ಟಬೇಕು, ಮೂಕ ಪ್ರೇಕ್ಷಕರಾಗಿರುವ ಸರ್ಕಾರಗಳಿಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸುವ ಜರೂರು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಜನತೆ ಮುಂದೆ ಬರಬೇಕು ಎಂದು ಎ ಐ ಎಂ ಎಸ್ ಎಸ್ ಕರೆ ನೀಡುತ್ತದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ ಐ ಎಂ ಎಸ್ ಎಸ್) ಜಿಲ್ಲಾ ಕಾರ್ಯದರ್ಶಿ ಶಾರದಾ ಗಡ್ಡಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ ಐ ಎಂ ಎಸ್ ಎಸ್) ಜಿಲ್ಲಾ ಕಾರ್ಯದರ್ಶಿ ಶಾರದಾ ಗಡ್ಡಿ