Gandhi Gram Puraskar award for the second time in a row for Gudekote village
ಗುಡೇಕೋಟೆ: ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಗ್ರಾಮ ಪಂಚಾಯ್ತಿಗೆ ಸತತ ಎರಡನೇ ಬಾರಿಗೆ 2023-24 ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ.
ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿರುವ ಗಾಂಧಿ ಗ್ರಾಮ ಪುರಸ್ಕಾರದಲ್ಲಿ ಗುಡೇಕೋಟೆ ಗ್ರಾಮ ಪಂಚಾಯಿತಿ ಹೆಸರು ಎರಡನೇ ಬಾರಿ ಪ್ರಕಟಗೊಂಡಿರುವುದು ಪಂಚಾಯ್ತಿಯ ಚುನಾಯಿತರು, ಅಧಿಕಾರಿಗಳು ಮತ್ತು ಗ್ರಾಮಸ್ಥರಲ್ಲಿ ಹರ್ಷ ಮನೆ ಮಾಡಿದೆ.ಇದರೊಂದಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ, ಕೂಡ್ಲಿಗಿ ತಾಲೂಕಿನ ಗುಡೇಕೋಟೆ, ಕೊಟ್ಟೂರು ತಾಲೂಕಿನ ಕಂದಗಲ್ಲು, ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ,ಹಡಗಲಿ ತಾಲೂಕಿನ ಹಿರೇಮಲ್ಲನಕೆರೆ, ಹರಪನಹಳ್ಳಿ ತಾಲೂಕಿನ ಬೆಣ್ಣಿ ಹಳ್ಳಿ,ಗ್ರಾಮ ಪಂಚಾಯ್ತಿಗಳೂ ಈ ಪುರಸ್ಕಾರಕ್ಕೆ ಆಯ್ಕೆಯಾಗಿವೆ.ಈ ಗ್ರಾಮಗಳಿಗೆ ತಲಾ ₹5ಲಕ್ಷ ವಿಶೇಷ ಅನುದಾನ ಸಿಗಲಿದೆ.
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪ್ರಶಸ್ತಿಗಾಗಿ 150 ಅಂಕಗಳ ಪ್ರಶ್ನಾವಳಿಗಳಿಗೆ ಉತ್ತರ ನೀಡಲು ಪಂಚತಂತ್ರ ತಂತ್ರಾಂಶದ ಮೂಲಕ ಅವಕಾಶಕಲ್ಪಿಸಲಾಗಿತ್ತು. ಈ ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚು ಅಂಕಗಳಿಸಿರುವ ತಾಲ್ಲೂಕಿಗೆ ಐದು ಗ್ರಾಮ ಪಂಚಾಯ್ತಿಗಳನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಕಳುಹಿಸಲಾಗಿತ್ತು.
ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದ ತಂಡವು ಮಾರ್ಗಸೂಚಿ ಅನುಸಾರ ಸ್ಥಳ ಪರಿಶೀಲನೆ ನಡೆಸಿ, ಸಿಇಒ ನೇತೃತ್ವದ ಸಮಿತಿಗೆ ವರದಿ ಸಲ್ಲಿಸಿತ್ತು. ಇದನ್ನು ಆಧರಿಸಿ ತಾಲ್ಲೂಕಿಗೆ ಒಂದು ಗ್ರಾಮ ಪಂಚಾಯ್ತಿಯನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅಂತಿಮವಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಘೋಷಣೆಯಾದ ಗ್ರಾಮ ಪಂಚಾಯ್ತಿಗಳಿಗೆ ಅ.2ರಂದು ಬೆಂಗಳೂರಿನ ವಿಧಾನಸೌಧದಲ್ಲಿರುವ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅದರಂತೆಯೇ ಜಿಲ್ಲೆಯಿಂದ ಆಯ್ಕೆಯಾದ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಪುರಸ್ಕಾರದ ಸಾಧನೆಗೆ ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗ,ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಶ್ರಮ, ಗ್ರಾಮಸ್ಥರ ಸರ್ವ ಸಹಕಾರದಿಂದ ಇವೆಲ್ಲ ಸಾಧ್ಯವಾಗಿದೆ. ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ ಹೇಗೋ ಹಾಗೆ ಎಲ್ಲಾ ಕಾರ್ಯಗಳು ಒಬ್ಬರಿಂದ ನಿರ್ವಹಿಸಲು ಸಾಧ್ಯವಿಲ್ಲ. ಸಂಘಟಿತರಾಗಿ ಮಾಡಿದ ಕಾರ್ಯ ಈ ಬಾರಿ ಎರಡನೇ ಬಾರಿ ಪ್ರಶಸ್ತಿ ತೆಗೆದುಕೊಳ್ಳುವ ಮಟ್ಟಿಗೆ ಫಲಭರಿತವಾಗಿದೆ. ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.*-ಎನ್.ಕೃಷ್ಣ,ಗ್ರಾ.ಪಂ. ಅಧ್ಯಕ್ಷ ಗುಡೇಕೋಟೆ*
ನಮ್ಮ ಗ್ರಾಮ ಪಂಚಾಯಿತಿಗೆ ಪುರಸ್ಕಾರ ಬಂತೆಂದರೆ ಎಲ್ಲರ ಸಹಕಾರದ ಫಲ. ಪ್ರಶಸ್ತಿ ಬಂದರೆ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದರ್ಥ. ಇನ್ನಷ್ಟು ಕಾರ್ಯ ಸಾಧನೆ ಮಾಡಲು ಉಮ್ಮಸ್ಸು ಇಮ್ಮಡಿಯಾಗುತ್ತದೆ. ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು.*-ಬಸಮ್ಮ,ಗ್ರಾ.ಪಂ.ಪಿಡಿಒ ಗುಡೇಕೋಟೆ.*
ಇಷ್ಟು ವರ್ಷ ಜನಪರ ಆಡಳಿತ ನೀಡಿದ್ದು ಜನರು, ಸದಸ್ಯರು, ಪಿಡಿಒ, ಸಿಬ್ಬಂದಿಯ ಒಟ್ಟು ಸಹಕಾರದಿಂದ ನಮ್ಮ ಪಂಚಾಯಿತಿಗೆ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಸಂತಸಕರ ವಿಚಾರವಾಗಿದ್ದು ಎಲ್ಲರಿಗೂ ವಂದನೆಗಳು.*ಲಲಿತಮ್ಮ ಗೋವಿಂದಪ್ಪ (ನಿಕಟ ಪೂರ್ವ ಅಧ್ಯಕ್ಷರು ಗುಡೇಕೋಟೆ)*