
Campaign by the Basava Awareness and Research Centre to propagate Basava philosophy across the Mysuru district.
ಮೈಸೂರು ಜಿಲ್ಲೆಯಾದ್ಯಂತ ಬಸವತತ್ವ ಪ್ರಸಾರಕ್ಕೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಭಿಯಾನ


“ಬಸವತತ್ವ ಜಗದತತ್ವ” ಘೋಷವಾಕ್ಯದೊಂದಿಗೆ ರಾಜ್ಯ ಘಟಕದಿಂದ ಹೊಸ ಹೆಜ್ಜೆ
ಮೈಸೂರು: ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ಮೈಸೂರು ಜಿಲ್ಲೆಯಾದ್ಯಂತ ಪ್ರಸಾರ ಮಾಡಲು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆಯ ಕರ್ನಾಟಕ ರಾಜ್ಯ ಘಟಕ ಮುಂದಾಗಿದೆ.
12ನೇ ಶತಮಾನದ ಮಹಾನ್ ಮಾನವತಾವಾದಿ ಹಾಗೂ ಸಮಾಜ ಸುಧಾರಕ ಬಸವಣ್ಣನವರ ತತ್ವಗಳು ಯಾವುದೇ ಒಂದು ಜಾತಿ, ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ.
ಅವು ಇಡೀ ಜಗತ್ತಿಗೆ ಅನ್ವಯಿಸುವ ಸಾರ್ವತ್ರಿಕ ಮಾನವೀಯ ಮೌಲ್ಯಗಳಾಗಿವೆ. ಇಂದಿನ ಆಧುನಿಕ ಸಮಾಜ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ನೈತಿಕ ಸಮಸ್ಯೆಗಳಿಗೆ ಬಸವಣ್ಣನವರ ವಿಚಾರಧಾರೆಗಳಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರಗಳಿವೆ ಎಂಬ ಆಶಯದೊಂದಿಗೆ
“ಬಸವತತ್ವ ಜಗದತತ್ವ” ಎಂಬ ಪರಿಕಲ್ಪನೆಯನ್ನು ಮುನ್ನೆಲೆಗೆ ತರಲಾಗಿದೆ.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ ವತಿಯಿಂದ ಇತ್ತೀಚೆಗೆ ಅಕ್ಟೋಬರ್ 24ರಂದು ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಯಶಸ್ವಿಯಾಗಿ ಜರುಗಿದೆ.
ಇದೇ ಸಂದರ್ಭದಲ್ಲಿ ಕೇಂದ್ರದ ಕರ್ನಾಟಕ ರಾಜ್ಯ ಘಟಕವನ್ನೂ ಉದ್ಘಾಟಿಸಲಾಗಿದ್ದು, ಬಸವತತ್ವದ ಅಧ್ಯಯನ, ಸಂಶೋಧನೆ ಹಾಗೂ ಪ್ರಸಾರ ಕಾರ್ಯಗಳಿಗೆ ಹೊಸ ಚೈತನ್ಯ ದೊರೆತಿದೆ.
ಇದರ ಮುಂದುವರಿದ ಭಾಗವಾಗಿ ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳು, ಹೋಬಳಿಗಳು, ನಗರಗಳು ಹಾಗೂ ಬಡಾವಣೆಗಳಲ್ಲಿ ಬಸವತತ್ವದ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ಯೋಜಿಸಲಾಗಿದೆ.
ಬಸವಣ್ಣನವರ ವಚನ ಸಾಹಿತ್ಯ, ಸಾಮಾಜಿಕ ಚಿಂತನೆ, ಕಾಯಕ ಮತ್ತು ದಾಸೋಹದ ಮೌಲ್ಯಗಳು ಹಾಗೂ ವಿಶ್ವಮಾನವ ಸಂದೇಶವನ್ನು ಜನರಿಗೆ ಪರಿಚಯಿಸುವ ಈ ಕಾರ್ಯದಲ್ಲಿ ಆಸಕ್ತ ಬಸವಾಭಿಮಾನಿಗಳು, ಚಿಂತಕರು ಹಾಗೂ ಬಸವತತ್ವದ ಅನುಯಾಯಿಗಳು ಕೈಜೋಡಿಸಬೇಕೆಂದು ಕೇಂದ್ರದ ವತಿಯಿಂದ ಮನವಿ ಮಾಡಲಾಗಿದೆ.
ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಬಸವಾಭಿಮಾನಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
ಶ್ರೀ ವಿಜಯಕುಮಾರ ಹೆಚ್. – 7760458537
ಶ್ರೀ ವಿಜಯಕುಮಾರ ಹೆಚ್. ಮಹಾಪ್ರಧಾನ ಕಾರ್ಯದರ್ಶಿಗಳು, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ – ಕರ್ನಾಟಕ ರಾಜ್ಯ ಘಟಕ.



