ವಚನ ಸಾಹಿತ್ಯದ ಸಂರಕ್ಷಕ, ಧರ್ಮದ ಆಚಾರ ಸಂಹಿತೆಯ ಪ್ರತಿಪಾದಕ, ಶರಣ ಪರಂಪರೆಯ ಮಹಾನ್ ಗುರು  ಚೆನ್ನಬಸವಣ್ಣನವರು

H.Mallikarjun
H.Mallikarjun - Kalyanasiri
12 Min Read
ಜಾಹೀರಾತು

cennabasavaṇṇanavaru
Chennabasavanna—the preserver of Vachana literature, the proponent of the religious code of conduct, and a great master within the Sharan tradition.


ಲಿಂಗಾಯತ ಧರ್ಮದ ಸಂವಿಧಾನ ರೂಪಿಸುವಲ್ಲಿ ಗುರು ಚೆನ್ನಬಸವಣ್ಣನವರ ಅನನ್ಯ ಕೊಡುಗೆ

ಜಾಹೀರಾತು
ಜಾಹೀರಾತು


ವಚನ ಸಾಹಿತ್ಯದ ಸಂರಕ್ಷಕ, ಧರ್ಮದ ಆಚಾರ ಸಂಹಿತೆಯ ಪ್ರತಿಪಾದಕ, ಶರಣ ಪರಂಪರೆಯ ಮಹಾನ್ ಗುರು


ಲೇಖನ: ಸಚ್ಚಿದಾನಂದ ಪ್ರಭು ಚಟ್ನಳ್ಳಿ


ಹನ್ನೆರಡನೇ ಶತಮಾನದ ಬಸವಯುಗವು ಭಾರತದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಿದ ಮಹತ್ವದ ಕಾಲಘಟ್ಟ. ಜಾತಿ, ವರ್ಣ, ವರ್ಗ, ಮೇಲು-ಕೀಳು ಎಂಬ ಭೇದಭಾವಗಳಿಂದ ಸಮಾಜ ಬಳಲುತ್ತಿದ್ದ ಸಂದರ್ಭದಲ್ಲಿ ಸಮಾನತೆ, ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಮಾನವೀಯತೆ ಮತ್ತು ವೈಚಾರಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ಹೊಸ ಧಾರ್ಮಿಕ ಹಾಗೂ ಸಾಮಾಜಿಕ ಚಳವಳಿಗೆ ಗುರು ಬಸವಣ್ಣನವರು ಚಾಲನೆ ನೀಡಿದರು.
ಈ ಮಹಾನ್ ಕ್ರಾಂತಿಕಾರಿ ಚಳವಳಿಯನ್ನು ಸಂಘಟಿಸಿ, ಅದರ ತಾತ್ವಿಕ ನೆಲೆಗಳನ್ನು ಗಟ್ಟಿಗೊಳಿಸಿ, ಲಿಂಗಾಯತ ಧರ್ಮದ ಆಚಾರ-ವಿಚಾರಗಳಿಗೆ ಸ್ಪಷ್ಟ ಸ್ವರೂಪ ನೀಡುವಲ್ಲಿ ಗುರು ಚೆನ್ನಬಸವಣ್ಣನವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಗುರು ಚೆನ್ನಬಸವಣ್ಣನವರ ಜಯಂತಿ ಕಾರ್ತಿಕ ಮಾಸದ ಪಾಡ್ಯದಂದು ಆಚರಿಸಲಾಗುತ್ತದೆ. ಅವರ ಜೀವನ, ಸಾಧನೆ, ವಚನಗಳ ಸಂದೇಶ ಹಾಗೂ ಲಿಂಗಾಯತ ಧರ್ಮಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವುದು ಪ್ರತಿಯೊಬ್ಬ ಶರಣ ಬಂಧುವಿನ ಕರ್ತವ್ಯವಾಗಿದೆ.


ಅಕ್ಕನಾಗಮ್ಮನವರ ಉದರದಲ್ಲಿ ಜನಿಸಿದ ಜ್ಞಾನಜ್ಯೋತಿ


ವೀರಮಾತೆ, ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮನವರ ಪುತ್ರರಾಗಿ ಜನಿಸಿದ ಗುರು ಚೆನ್ನಬಸವಣ್ಣನವರು, ಗುರು ಬಸವಣ್ಣನವರ ಮಾರ್ಗದರ್ಶನದಲ್ಲಿ ಬೆಳೆದ ಅಪರೂಪದ ಜ್ಞಾನಚೇತನ. ಬಾಲ್ಯದಿಂದಲೇ ಧಾರ್ಮಿಕ ಚಿಂತನೆ, ಆಧ್ಯಾತ್ಮಿಕ ಅನುಭಾವ ಮತ್ತು ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿದ್ದರು.
ಹನ್ನೆರಡನೇ ಶತಮಾನದ ಶರಣ ಪರಂಪರೆಯಲ್ಲಿ ಲಿಂಗಾಯತ ಧರ್ಮದ ತಾತ್ವಿಕ ಪರಿಸರದಲ್ಲಿಯೇ ಜನಿಸಿ ಬೆಳೆದ ಪ್ರಮುಖ ಶರಣರಲ್ಲಿ ಚೆನ್ನಬಸವಣ್ಣನವರು ವಿಶಿಷ್ಟ ಸ್ಥಾನ ಹೊಂದಿದ್ದಾರೆ.
ಗುರು ಬಸವಣ್ಣನವರ ನಂತರ ಲಿಂಗಾಯತ ಧರ್ಮದ ತತ್ವಗಳನ್ನು ವಿವರಿಸಿ, ಅದರ ಆಚರಣೆಗಳಿಗೆ ನಿರ್ದಿಷ್ಟ ಸ್ವರೂಪ ನೀಡುವಲ್ಲಿ ಅವರು ಮಹತ್ತರ ಕೊಡುಗೆ ಸಲ್ಲಿಸಿದ್ದಾರೆ. ಈ ಕಾರಣದಿಂದಲೇ ಬಸವಣ್ಣನವರ ನಂತರ ಧರ್ಮದ ಬೆಳವಣಿಗೆಗೆ ಎರಡನೇ ಪ್ರಮುಖ ತಾತ್ವಿಕ ಶಕ್ತಿಯಾಗಿ ಚೆನ್ನಬಸವಣ್ಣನವರನ್ನು ಪರಿಗಣಿಸಲಾಗುತ್ತದೆ.
ಗುರು ಬಸವಣ್ಣನವರ ಆಶಯವನ್ನು ಮುಂದುವರಿಸುವುದಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಅವರು, ಧರ್ಮದ ತತ್ವಗಳನ್ನು ಕೇವಲ ಬೋಧಿಸಲಿಲ್ಲ; ತಮ್ಮ ನಡೆ-ನುಡಿಗಳ ಮೂಲಕ ಬದುಕಿ ತೋರಿಸಿದರು.


ವಚನ ಸಾಹಿತ್ಯದ ರಕ್ಷಣೆಗಾಗಿ ಖಡ್ಗ ಹಿಡಿದ ಮಹಾನ್ ಶರಣ


ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರ ಮೇಲೆ ಸಂಕಷ್ಟಗಳು ಎದುರಾದಾಗ ವಚನ ಸಾಹಿತ್ಯದ ಸಂರಕ್ಷಣೆ ದೊಡ್ಡ ಸವಾಲಾಗಿತ್ತು. ಶರಣರು ರಚಿಸಿದ ಅಪಾರ ವಚನ ಸಂಪತ್ತು ನಾಶವಾಗದಂತೆ ಕಾಪಾಡುವ ಜವಾಬ್ದಾರಿ ಚೆನ್ನಬಸವಣ್ಣನವರ ಮೇಲೂ ಬಿತ್ತು.
ವಚನಗಳನ್ನು ಬರೆದ ಕೈಯಲ್ಲಿ ಖಡ್ಗ ಹಿಡಿದು, ಶರಣರ ತತ್ವ ಮತ್ತು ಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ ಧೈರ್ಯಶಾಲಿ ಶರಣರಲ್ಲಿ ಅವರು ಪ್ರಮುಖರು.
ಕಲ್ಯಾಣದಿಂದ ಹೊರಟು ಮಲೆನಾಡಿನ ಕಡೆಗೆ ಸಾಗಿದ ಸಂದರ್ಭದಲ್ಲಿ ನಡೆದ ಸಂಘರ್ಷಗಳಲ್ಲಿ ಅವರು ಗಾಯಗೊಂಡರು. ಪ್ರಯಾಣ ಮುಂದುವರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಉಳಿದುಕೊಂಡ ಸ್ಥಳವೇ ಮುಂದೆ ಉಳಿವೆ ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು ಎಂಬುದು ಶರಣ ಪರಂಪರೆಯಲ್ಲಿ ಪ್ರಚಲಿತವಾಗಿರುವ ಐತಿಹ್ಯ.
ಯುದ್ಧದ ಗಾಯಗಳು, ಪ್ರಯಾಣದ ಆಯಾಸ ಮತ್ತು ಅಂದಿನ ಕಾಲದ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಅವರು ಹೆಚ್ಚು ಕಾಲ ಬದುಕಲು ಸಾಧ್ಯವಾಗಲಿಲ್ಲ ಎಂಬ ನಂಬಿಕೆ ಇದೆ.
ಆದರೆ ಅವರ ಅಲ್ಪಾವಧಿಯ ಬದುಕು ಮಾಡಿದ ಸಾಧನೆ ಅಪಾರ. ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಶರಣರ ತಾತ್ವಿಕ ಪರಂಪರೆಯ ಮುಂದುವರಿಕೆಗೆ ಅವರು ಸಲ್ಲಿಸಿದ ಸೇವೆ ಚಿರಸ್ಮರಣೀಯ.
ಲಿಂಗಾಯತ ಧರ್ಮಕ್ಕೆ ಆಚಾರ ಸಂಹಿತೆ ನೀಡಿದ ಮಹಾಗುರು

ಗುರು ಚೆನ್ನಬಸವಣ್ಣನವರ ಪ್ರಮುಖ ಕೊಡುಗೆ ಎಂದರೆ ಲಿಂಗಾಯತ ಧರ್ಮದ ಅನುಯಾಯಿಗಳು ಹೇಗೆ ಬದುಕಬೇಕು, ಅವರ ನಡೆ-ನುಡಿ ಹೇಗಿರಬೇಕು, ಧಾರ್ಮಿಕ ಆಚರಣೆಗಳು ಯಾವ ತತ್ವಗಳ ಆಧಾರದ ಮೇಲೆ ಇರಬೇಕು ಎಂಬುದನ್ನು ವಚನಗಳ ಮೂಲಕ ಸ್ಪಷ್ಟಪಡಿಸಿರುವುದು.
ಧರ್ಮವೆಂದರೆ ಕೇವಲ ಪೂಜೆ, ಪುನಸ್ಕಾರ, ಆಚರಣೆಗಳಲ್ಲ. ಅದು ವ್ಯಕ್ತಿಯ ಬದುಕಿನ ಶುದ್ಧತೆ, ಪ್ರಾಮಾಣಿಕತೆ, ಸಮಾನತೆ, ನೈತಿಕತೆ ಮತ್ತು ಮಾನವೀಯತೆಯ ಪ್ರತಿಬಿಂಬವಾಗಿರಬೇಕು ಎಂಬುದನ್ನು ಅವರು ಪ್ರತಿಪಾದಿಸಿದ್ದಾರೆ.
ಅವರ ವಚನಗಳು ಲಿಂಗಾಯತ ಧರ್ಮದ ಆಚಾರ-ವಿಚಾರಗಳ ಮಾರ್ಗದರ್ಶಕ ಸಂಹಿತೆಯಾಗಿ ಗುರುತಿಸಲ್ಪಟ್ಟಿವೆ.
ದೀಕ್ಷೆ ಪಡೆದ ಭಕ್ತರಲ್ಲಿ ಜಾತಿ ಭೇದಕ್ಕೆ ಅವಕಾಶವಿಲ್ಲ
ಗುರು ಚೆನ್ನಬಸವಣ್ಣನವರು ಗುರು ಮತ್ತು ಶಿಷ್ಯರ ನಡುವಿನ ಸಂಬಂಧವನ್ನು ಅತ್ಯಂತ ಪವಿತ್ರವಾಗಿ ವ್ಯಾಖ್ಯಾನಿಸಿದ್ದಾರೆ. ದೀಕ್ಷೆ ನೀಡಿದ ನಂತರವೂ ಶಿಷ್ಯನ ಮನೆಯನ್ನು ಪ್ರವೇಶಿಸಲು ಹಿಂಜರಿಯುವ, ಜಾತಿ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಭಕ್ತರನ್ನು ಬೇರ್ಪಡಿಸುವ ಗುರುಗಳ ನಡವಳಿಕೆಯನ್ನು ಅವರು ಕಟುವಾಗಿ ವಿರೋಧಿಸಿದ್ದಾರೆ.
ಅವರ ವಚನ ಹೀಗಿದೆ:
ತನ್ನ ಮನೆಯ ಹೊಗದ ಗುರುವಿನ ಕೈಯಲ್ಲಿ ಕಾರುಣ್ಯವ ಪಡೆದ ಶಿಷ್ಯ, ತಾ ಹೋಗದ ಮನೆಯವರ ಉಪದೇಶವ ಮಾಡುವ ಗುರು ಅಂಧಕನ ಕೈ ಅಂಧಕ ಹಿಡಿದಂತೆ. ಇವರಿಬ್ಬರ ಭಕ್ತರೆಂದವರ ಕೂಡಲ ಚೆನ್ನಸಂಗಯ್ಯ ನರಕದಲ್ಲಿಕ್ಕುವ.
ಈ ವಚನದ ಆಶಯ ಬಹಳ ಸ್ಪಷ್ಟವಾಗಿದೆ. ದೀಕ್ಷೆ ನೀಡಿದ ಗುರು ತನ್ನ ಶಿಷ್ಯನನ್ನು ಸಮಾನವಾಗಿ ಕಾಣಬೇಕು. ಆತನ ಮನೆಗೆ ಹೋಗಿ ಪ್ರಸಾದ ಸ್ವೀಕರಿಸಲು ಹಿಂಜರಿಯಬಾರದು. ಜಾತಿ, ವರ್ಗ, ಆರ್ಥಿಕ ಸ್ಥಿತಿ ಅಥವಾ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ಭಕ್ತರಲ್ಲಿ ತಾರತಮ್ಯ ಮಾಡುವುದು ಧರ್ಮದ ಆಶಯಕ್ಕೆ ವಿರುದ್ಧವಾಗಿದೆ.


ದೀಕ್ಷೆಯ ಮೂಲಕ ವ್ಯಕ್ತಿಯ ಬದುಕಿನಲ್ಲಿ ಹೊಸ ಆಧ್ಯಾತ್ಮಿಕ

ಸಂಸ್ಕಾರ ಆರಂಭವಾಗುತ್ತದೆ. ಹೀಗಾಗಿ ದೀಕ್ಷೆ ಪಡೆದ ಭಕ್ತನನ್ನು ಪೂರ್ವದ ಸಾಮಾಜಿಕ ಗುರುತುಗಳ ಆಧಾರದ ಮೇಲೆ ಕೀಳಾಗಿ ಕಾಣುವುದು ಸಲ್ಲದು.
ಇಂದಿನ ಧಾರ್ಮಿಕ ಕ್ಷೇತ್ರದಲ್ಲಿಯೂ ಈ ವಚನದ ಪ್ರಸ್ತುತತೆ ಅತ್ಯಂತ ಮಹತ್ವದ್ದಾಗಿದೆ. ಗುರುಗಳು ಮೊದಲು ತಮ್ಮ ನಡೆ-ನುಡಿಗಳಲ್ಲಿ ಸಮಾನತೆಯನ್ನು ಅಳವಡಿಸಿಕೊಂಡು ನಂತರ ಭಕ್ತರಿಗೆ ಬೋಧಿಸಬೇಕು ಎಂಬ ಸಂದೇಶವನ್ನು ಚೆನ್ನಬಸವಣ್ಣನವರು ನೀಡಿದ್ದಾರೆ.

ಎಲ್ಲಾ
ಇಷ್ಟಲಿಂಗ ಸದಾ ಅಂಗದ ಮೇಲಿರಬೇಕು


ಲಿಂಗಾಯತ ಧರ್ಮದ ಅತ್ಯಂತ ಪ್ರಮುಖ ತತ್ವವೆಂದರೆ

ಇಷ್ಟಲಿಂಗ ಧಾರಣೆ. ಇಷ್ಟಲಿಂಗವು ಕೇವಲ ಧಾರ್ಮಿಕ ಸಂಕೇತವಲ್ಲ; ಅದು ವ್ಯಕ್ತಿಯ ಅಂತರಂಗದ ಶುದ್ಧತೆ, ಆತ್ಮಜ್ಞಾನ ಮತ್ತು ಪರಮಾತ್ಮನೊಂದಿಗಿನ ನಿರಂತರ ಸಂಬಂಧದ ಪ್ರತೀಕವಾಗಿದೆ.
ಇಷ್ಟಲಿಂಗವನ್ನು ಪೂಜಿಸಿ ಒಂದು ಕಡೆ ಇಟ್ಟುಬಿಡುವುದು, ವಿಶೇಷ ದಿನಗಳಲ್ಲಿ ಮಾತ್ರ ಧರಿಸುವುದು ಅಥವಾ ಸಂದರ್ಭಾನುಸಾರ ಧರಿಸಿ ನಂತರ ತೆಗೆದುಹಾಕುವುದು ಧರ್ಮದ ನಿರಂತರ ಸಾಧನೆಯ ಆಶಯಕ್ಕೆ ವಿರುದ್ಧವಾಗಿದೆ ಎಂದು ಚೆನ್ನಬಸವಣ್ಣನವರು ತಮ್ಮ ವಚನಗಳಲ್ಲಿ ಎಚ್ಚರಿಸಿದ್ದಾರೆ.
ಅವರ ಮಹತ್ವದ ವಚನ:
ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ ಕಿತ್ತಿ ಕಿತ್ತಿ ಮತ್ತೆ ಬಿತ್ತುತ್ತಾ ಹೋದಡೆ, ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು ಬೆಳೆಸನ್ನೀವ ಪರಿಯಿನ್ನೆಂತೊ ಮರುಳು ಮಾನವ?
ಗುರುವಿತ್ತ ಲಿಂಗವ ತೊರೆ ತೊರೆದು ಮತ್ತೆ ಧರಿಸಿದರೆ ಆ ಇಷ್ಟಲಿಂಗವು ಅನಿಷ್ಟವ ಕಳೆದು ಇಷ್ಟಾರ್ಥವನೀವ ಪರಿಯಿನ್ನೆಂತೋ?
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಮುಕ್ತಿಯನರಸುವೊಡೆ ಅಂಗದಲ್ಲಿ ಹೆರೆ ಹಿಂಗದೆ ಲಿಂಗವ ಧರಿಸಬೇಕು.
ಬಿತ್ತಿದ ಬೀಜವನ್ನು ಮತ್ತೆ ಮತ್ತೆ ಕಿತ್ತು ಹಾಕಿ ಬಿತ್ತಿದರೆ ಅದು ಹೇಗೆ ಸಮೃದ್ಧವಾಗಿ ಬೆಳೆದು ಫಲ ನೀಡಲು ಸಾಧ್ಯವಿಲ್ಲವೋ, ಹಾಗೆಯೇ ಗುರು ನೀಡಿದ ಇಷ್ಟಲಿಂಗವನ್ನು ಪದೇಪದೇ ತೊರೆದು ಮತ್ತೆ ಧರಿಸುವುದರಿಂದ ನಿರಂತರ ಲಿಂಗಸಾಧನೆಯ ಫಲ ದೊರೆಯುವುದಿಲ್ಲ ಎಂಬುದು ಈ ವಚನದ ತಾತ್ಪರ್ಯ.
ಇಷ್ಟಲಿಂಗ ಧಾರಣೆ ಕೇವಲ ಬಾಹ್ಯ ಆಚರಣೆಯಾಗದೆ ಬದುಕಿನ ಪ್ರತಿಯೊಂದು ಕ್ಷಣದಲ್ಲಿಯೂ ಲಿಂಗತತ್ವವನ್ನು ಸ್ಮರಿಸುವ ಸಾಧನೆಯಾಗಬೇಕು ಎಂಬುದು ಅವರ ಆಶಯ.
ಅನ್ಯ ಧಾರ್ಮಿಕ ಸಂಕೇತಗಳಿಗಿಂತ ಇಷ್ಟಲಿಂಗ ತತ್ವಕ್ಕೆ ಆದ್ಯತೆ
ಗುರು ಚೆನ್ನಬಸವಣ್ಣನವರು ಲಿಂಗಾಯತ ಧರ್ಮದ ವಿಶಿಷ್ಟತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲವು ಆಚರಣೆಗಳ ಕುರಿತು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಅವರ ವಚನದಲ್ಲಿ ಹೀಗೆ ಹೇಳಲಾಗಿದೆ:
ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ ಭಕ್ತನಾಗಲೀ, ಜಂಗಮನಾಗಲೀ, ತನ್ನ ಅಂಗದ ಮೇಲೆ ಅನ್ಯ ಮಣಿಮಾಲೆ, ನಂದಿ ಉಂಗುರ, ನಾಗಕುಂಡಲ ಮೊದಲಾದ ಭವಿಶೈವದ ಮುದ್ರೆಗಳ ಧರಿಸಲಾಗದು…
ಈ ವಚನದ ಮೂಲಕ ಲಿಂಗಾಯತ ಧರ್ಮದ ಅನುಯಾಯಿಗಳು ತಮ್ಮ ಧರ್ಮದ ಮೂಲ ತತ್ವ ಮತ್ತು ಗುರುತನ್ನು ಅರಿತುಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.
ಧರ್ಮದ ಆಚರಣೆಗಳು ಅರ್ಥಪೂರ್ಣವಾಗಿರಬೇಕು. ಕೇವಲ ಸಂಪ್ರದಾಯದ ಅನುಕರಣೆಯಾಗಬಾರದು. ಇಷ್ಟಲಿಂಗದ ತಾತ್ವಿಕ ಮಹತ್ವವನ್ನು ಅರಿತುಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ಅವರ ಬೋಧನೆಯಾಗಿದೆ.
ಇಂದು ಧಾರ್ಮಿಕ ಆಚರಣೆಗಳನ್ನು ಪಾಲಿಸುವ ಅನೇಕರು ಅವುಗಳ ಹಿಂದಿರುವ ತಾತ್ವಿಕ ಅರ್ಥವನ್ನು ತಿಳಿದುಕೊಳ್ಳದೆ ನಡೆದುಕೊಳ್ಳುತ್ತಿರುವುದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ.


ಮಕ್ಕಳಿಗೆ ಲಿಂಗಾಯತ ಧರ್ಮದ ಸಂಸ್ಕಾರ ನೀಡುವುದು ಪೋಷಕರ ಕರ್ತವ್ಯ


ಗುರು ಚೆನ್ನಬಸವಣ್ಣನವರು ಕೇವಲ ವ್ಯಕ್ತಿಯ ಧಾರ್ಮಿಕ ಬದುಕಿನ ಬಗ್ಗೆ ಮಾತ್ರ ಮಾತನಾಡಿಲ್ಲ. ಮುಂದಿನ ಪೀಳಿಗೆಯ ನೈತಿಕ ಮತ್ತು ಧಾರ್ಮಿಕ ಸಂಸ್ಕಾರದ ಬಗ್ಗೆಯೂ ಮಹತ್ವದ ಸಂದೇಶ ನೀಡಿದ್ದಾರೆ.
ಅವರ ವಚನದ ಆಶಯ:
ಸದ್ಭಕ್ತರ ಬಸುರಲ್ಲಿ ಹುಟ್ಟಿದ ಮಕ್ಕಳು ಭವಿಯನಾಚರಿಸಿದಡೆ ಪಂಚ ಮಹಾಪಾತಕವೆಂದುದು ವಚನ.
ಈ ಸಂದೇಶದ ಮೂಲಕ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ಶರಣರ ವಿಚಾರಧಾರೆ ಮತ್ತು ಧರ್ಮದ ತತ್ವಗಳನ್ನು ಕಲಿಸುವ ಜವಾಬ್ದಾರಿ ತಂದೆ-ತಾಯಂದಿರ ಮೇಲಿದೆ ಎಂದು ಎಚ್ಚರಿಸಿದ್ದಾರೆ.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು, ಆರ್ಥಿಕ ಭದ್ರತೆ ಒದಗಿಸುವುದು, ಭವಿಷ್ಯಕ್ಕಾಗಿ ಹಣ ಕೂಡಿಡುವುದು ಪೋಷಕರ ಕರ್ತವ್ಯವೇ ಸರಿ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಲ್ಲಿ ಸತ್ಯ, ಪ್ರಾಮಾಣಿಕತೆ, ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಳೆಸಬೇಕು.
ಮಕ್ಕಳು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕಾದರೆ ಅವರಿಗೆ ಬಾಲ್ಯದಿಂದಲೇ ಉತ್ತಮ ನೈತಿಕ ಸಂಸ್ಕಾರ ನೀಡುವುದು ಅಗತ್ಯ.


ವಾರ, ತಿಥಿ, ದಿನಗಳಿಗಿಂತ ಲಿಂಗತತ್ವವೇ ಶ್ರೇಷ್ಠ


ಧರ್ಮದ ಹೆಸರಿನಲ್ಲಿ ಸೋಮವಾರ, ಮಂಗಳವಾರ ಅಥವಾ ಇತರ ದಿನಗಳಿಗೆ ವಿಶೇಷ ಮಹತ್ವ ನೀಡಿ ಆಚರಣೆಗಳನ್ನು ಮಾಡುವುದಕ್ಕಿಂತ ಲಿಂಗತತ್ವದ ನಿರಂತರ ಅನುಷ್ಠಾನವೇ ಶ್ರೇಷ್ಠ ಎಂಬುದನ್ನು ಚೆನ್ನಬಸವಣ್ಣನವರು ಸಾರಿದ್ದಾರೆ.
ಅವರ ವಚನ:
ಸೋಮವಾರ ಮಂಗಳವಾರವೆಂದು ಮಾಡುವ ಭಕ್ತರ, ಲಿಂಗಭಕ್ತಂಗೆ ನಾನೆಂತು ಸರಿಯೆಂಬೆನಯ್ಯಾ? ದಿನ ಶ್ರೇಷ್ಠವೋ ಲಿಂಗ ಶ್ರೇಷ್ಠವೋ? ದಿನ ಶ್ರೇಷ್ಠವೆಂದು ಮಾಡುವ ಪಂಚ ಮಹಾಪಾತಕರ ಮುಖವ ನೋಡಲಾಗದು ಕೂಡಲಚೆನ್ನಸಂಗಯ್ಯ.
ಈ ವಚನವು ಧಾರ್ಮಿಕ ಆಚರಣೆಗಳ ಕುರಿತು ಆಳವಾದ ಚಿಂತನೆಯನ್ನು ಹುಟ್ಟುಹಾಕುತ್ತದೆ.
ಒಂದು ನಿರ್ದಿಷ್ಟ ದಿನ ಮಾತ್ರ ದೇವರನ್ನು ನೆನೆಯುವುದಕ್ಕಿಂತ ಪ್ರತಿದಿನವೂ ಲಿಂಗತತ್ವವನ್ನು ಅನುಸರಿಸುವುದು ಮುಖ್ಯ. ದಿನಗಳಿಗಿಂತ ಧರ್ಮದ ಮೌಲ್ಯಗಳು ಶ್ರೇಷ್ಠ. ಆಚರಣೆಗಿಂತ ಆಚರಣೆಯ ಹಿಂದಿರುವ ನೈತಿಕತೆ ಮುಖ್ಯ ಎಂಬುದು ಈ ವಚನದ ಸಾರವಾಗಿದೆ.


ತತ್ವಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಶರಣ ಪರಂಪರೆ


ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರು ಅನುಭವಿಸಿದ ನೋವು, ಸಂಕಷ್ಟ ಮತ್ತು ತ್ಯಾಗಗಳು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿವೆ.
ಹರಳಯ್ಯ, ಮಧುವರಸ ಮೊದಲಾದ ಶರಣರು ಸಮಾನತೆಯ ತತ್ವಕ್ಕಾಗಿ ಎದುರಿಸಿದ ಸಂಕಷ್ಟಗಳು ಶರಣ ಚಳವಳಿಯ ತಾತ್ವಿಕ ಬದ್ಧತೆಯನ್ನು ತೋರಿಸುತ್ತವೆ.
ಗುರು ಚೆನ್ನಬಸವಣ್ಣನವರು ಈ ತತ್ವನಿಷ್ಠೆಯನ್ನು ತಮ್ಮ ವಚನಗಳ ಮೂಲಕ ಬಲವಾಗಿ ಪ್ರತಿಪಾದಿಸಿದ್ದಾರೆ.
ಅವರ ವಚನ:
ತನು ಮನ ಧನಕ್ಕೆ ಆಸೆ ಮಾಡುವಾತನ ಬಸವಣ್ಣನ ಸಂತತಿಯೆನಬಹುದೆ ಎನಲಾಗದು, ಎನಿಸಿಕೊಳ್ಳಲಾಗದು.
ಎಂದಾತಂಗೆಯೂ ಎನಿಸಿಕೊಂಡಾತಂಗೆಯೂ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯಾ.
ಬಸವಣ್ಣನವರ ಅನುಯಾಯಿಗಳೆಂದು ಕರೆದುಕೊಳ್ಳುವವರು ಸ್ವಾರ್ಥ, ಅಧಿಕಾರದ ಆಸೆ, ಸಂಪತ್ತಿನ ವ್ಯಾಮೋಹ ಮತ್ತು ವೈಯಕ್ತಿಕ ಲಾಭಕ್ಕಾಗಿ ಧರ್ಮದ ತತ್ವಗಳನ್ನು ಬಿಟ್ಟುಕೊಡಬಾರದು ಎಂಬುದು ಈ ವಚನದ ಆಶಯ.
ಶರಣ ಪರಂಪರೆಯಲ್ಲಿ ಸತ್ಯ ಮತ್ತು ಸಮಾನತೆಯ ತತ್ವಗಳಿಗೆ ಅತ್ಯುನ್ನತ ಸ್ಥಾನವಿದೆ. ಅಧಿಕಾರ, ಸಂಪತ್ತು, ಸ್ಥಾನಮಾನಗಳಿಗಿಂತ ಮಾನವೀಯ ಮೌಲ್ಯಗಳು ದೊಡ್ಡವು. ಧರ್ಮದ ಹೆಸರಿನಲ್ಲಿ ಸ್ವಾರ್ಥ ಸಾಧಿಸುವುದು ಶರಣ ಸಂಸ್ಕೃತಿಗೆ ವಿರುದ್ಧವಾದುದು.


ಐವತ್ತು ಆಚಾರಗಳು ಮತ್ತು ಅರವತ್ತನಾಲ್ಕು ಶೀಲಗಳ ಮಹತ್ವ


ಗುರು ಚೆನ್ನಬಸವಣ್ಣನವರು ಮನುಷ್ಯನ ವೈಯಕ್ತಿಕ ಹಾಗೂ ಸಾಮಾಜಿಕ ಬದುಕು ಶುದ್ಧವಾಗಿರಬೇಕೆಂಬ ಉದ್ದೇಶದಿಂದ ಐವತ್ತು ಆಚಾರಗಳು ಮತ್ತು ಅರವತ್ತನಾಲ್ಕು ಶೀಲಗಳ ಕುರಿತು ವಿವರಿಸಿದ್ದಾರೆ.
ಅವುಗಳಲ್ಲಿ ಕೆಲವು ಪ್ರಮುಖ ಆಚಾರಗಳು ಹೀಗಿವೆ:
ಪರರ ಹೆಣ್ಣಿಗೆ ಕಣ್ಣಿಡದಿರುವುದು.
ಪರರ ದ್ರವ್ಯವನ್ನು ಅಪಹರಿಸದಿರುವುದು.
ಯಾರ ವಿಶ್ವಾಸಕ್ಕೂ ದ್ರೋಹ ಬಗೆಯದಿರುವುದು.
ಕೆಟ್ಟವರ ಸಹವಾಸ ಮಾಡದಿರುವುದು.
ಸಜ್ಜನರ ಸಹವಾಸವನ್ನು ಬಿಡದಿರುವುದು.
ಸತ್ಯ, ಪ್ರಾಮಾಣಿಕತೆ ಮತ್ತು ನೈತಿಕತೆಯಿಂದ ಬದುಕುವುದು.
ಈ ಆಚಾರಗಳು ಕೇವಲ ಧಾರ್ಮಿಕ ನಿಯಮಗಳಲ್ಲ. ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಪರಸ್ಪರ ವಿಶ್ವಾಸವನ್ನು ಬೆಳೆಸುವ ಜೀವನ ಮೌಲ್ಯಗಳಾಗಿವೆ.
ಇಂದಿನ ಸಮಾಜದಲ್ಲಿ ಭ್ರಷ್ಟಾಚಾರ, ಮೋಸ, ದ್ರೋಹ, ದುರಾಸೆ ಮತ್ತು ಅನೈತಿಕತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಚೆನ್ನಬಸವಣ್ಣನವರ ಈ ಆಚಾರ ಸಂಹಿತೆ ಅತ್ಯಂತ ಪ್ರಸ್ತುತವಾಗಿದೆ.
ಅವರು ಹೇಳಿದ ಅರವತ್ತನಾಲ್ಕು ಶೀಲಗಳ ಮಹತ್ವವನ್ನು ಅವರ ವಚನದ ಮೂಲಕ ತಿಳಿಯಬಹುದು:
ಅರವತ್ತು ನಾಲ್ಕು ಶೀಲದಲ್ಲಿ ನಡೆದು ತೋರಿದನೆನಗೆ ಬಸವಣ್ಣ ನೋಡಯ್ಯಾ.
ಆ ನಡೆಯನ್ನು ಹಿಡಿದು ಬಿಡದೆ ನಡೆವೆನು, ಲಿಂಗ-ಜಂಗಮ ಸಾಕ್ಷಿಯಾಗಿ,
ಈ ನಡೆಯ ಹಿಡಿದು ನಡೆವೆನು ಪ್ರಸಾದ ಸಾಕ್ಷಿಯಾಗಿ, ದೃಢದಿಂದ ಹಿಡಿದು ಬಿಡದೆ ಕಡೆ ಮುಟ್ಟಿ ಸಲಿಸುವೆ ಕೂಡಲಚೆನ್ನಸಂಗಯ್ಯ.
ಗುರು ಬಸವಣ್ಣನವರು ತೋರಿದ ಸನ್ಮಾರ್ಗದಲ್ಲಿ ದೃಢವಾಗಿ ನಡೆಯುವುದು, ಲಿಂಗ-ಜಂಗಮ ಮತ್ತು ಪ್ರಸಾದದ ಸಾಕ್ಷಿಯಾಗಿ ಜೀವನವನ್ನು ಶುದ್ಧವಾಗಿಟ್ಟುಕೊಳ್ಳುವುದು ಶರಣರ ಆದರ್ಶವಾಗಿದೆ.


ಧರ್ಮಗುರುವಿಗೆ ಗೌರವ ನೀಡುವ ಮಹತ್ವದ ಸಂದೇಶ


ಗುರು ಚೆನ್ನಬಸವಣ್ಣನವರ ವ್ಯಕ್ತಿತ್ವದಲ್ಲಿ ವಿನಯ, ಗುರುಭಕ್ತಿ ಮತ್ತು ಧರ್ಮನಿಷ್ಠೆ ಎದ್ದು ಕಾಣುತ್ತವೆ.
ಒಮ್ಮೆ ಗುರು ಬಸವಣ್ಣನವರು, ಚೆನ್ನಬಸವಣ್ಣನವರು ಹಾಗೂ ಇತರ ಶರಣರು ಸೊನ್ನಲಾಪುರಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಿದ್ಧರಾಮೇಶ್ವರರು ಗುರು ಬಸವಣ್ಣನವರು ಮತ್ತು ಚೆನ್ನಬಸವಣ್ಣನವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಬೇಕೆಂದು ಬಯಸಿದರೆಂಬ ಪ್ರಸಂಗ ಶರಣ ಪರಂಪರೆಯಲ್ಲಿ ಉಲ್ಲೇಖಿತವಾಗಿದೆ.
ಆ ಸಂದರ್ಭದಲ್ಲಿ ಚೆನ್ನಬಸವಣ್ಣನವರು ನೀಡಿದ ಉತ್ತರ ಅವರ ಗುರುಭಕ್ತಿಗೆ ಸಾಕ್ಷಿಯಾಗಿದೆ.
ನಮ್ಮ ಗುರುಗಳ ಸನ್ನಿಧಿಯಲ್ಲಿ ನಿಮ್ಮ ಗುರುಗಳು ಪಲ್ಲಕ್ಕಿಯನ್ನೇರುವುದೆಂತು?
ನಮ್ಮ ಗುರುಗಳ ಸನ್ನಿಧಿಯಲ್ಲಿ ನಿಮ್ಮ ಗುರುಗಳು ಮೆರೆವರೆಂತು?
ಅವರ ಮೆರವಣಿಗೆಯೇ ಎನ್ನ ಮೆರವಣಿಗೆ, ಅವರಾನಂದವೇ ಎನ್ನಾನಂದ ಕಾಣಾ ಕೂಡಲಚೆನ್ನಸಂಗನ ಶರಣ ಸಿದ್ಧರಾಮಯ್ಯ.
ತಮ್ಮ ಗುರು ಬಸವಣ್ಣನವರಿಗೆ ನೀಡಬೇಕಾದ ಗೌರವವೇ ತಮಗೆ ನೀಡಿದ ಗೌರವ ಎಂದು ಭಾವಿಸಿದ ಚೆನ್ನಬಸವಣ್ಣನವರ ವಿನಯ ಅನುಕರಣೀಯವಾಗಿದೆ.
ಗುರು ಎಂದರೆ ಕೇವಲ ವ್ಯಕ್ತಿಯಲ್ಲ; ಧರ್ಮದ ತತ್ವ, ಜ್ಞಾನದ ಬೆಳಕು ಮತ್ತು ಬದುಕಿಗೆ ದಾರಿದೀಪ. ಧರ್ಮಗುರುವಿನ ತತ್ವಗಳನ್ನು ಗೌರವಿಸುವುದರ ಮೂಲಕವೇ ಧರ್ಮದ ನಿಜವಾದ ಆಶಯವನ್ನು ಉಳಿಸಬಹುದು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಈ ಪ್ರಸಂಗವು ಇಂದಿನ ಧಾರ್ಮಿಕ ಕ್ಷೇತ್ರಕ್ಕೂ ಒಂದು ದೊಡ್ಡ ಪಾಠವಾಗಿದೆ. ವ್ಯಕ್ತಿಪೂಜೆಗಿಂತ ತತ್ವಪೂಜೆ ಮುಖ್ಯ. ಗುರುಗಳ ವೈಯಕ್ತಿಕ ವೈಭವಕ್ಕಿಂತ ಅವರು ಬೋಧಿಸಿದ ಸತ್ಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸುವುದು ಮುಖ್ಯ.


ಬಸವಣ್ಣನವರ ತತ್ವಗಳನ್ನು ಜನಮಾನಸಕ್ಕೆ ತಲುಪಿಸುವ ಜವಾಬ್ದಾರಿ


ಬಸವಣ್ಣನವರು ಸ್ಥಾಪಿಸಿದ ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆಗಳು ಕೇವಲ ಒಂದು ಕಾಲಘಟ್ಟಕ್ಕೆ ಸೀಮಿತವಾಗಿಲ್ಲ. ಅವು ಮಾನವ ಸಮಾಜದ ಎಲ್ಲ ಕಾಲಕ್ಕೂ ಅನ್ವಯವಾಗುವ ಮೌಲ್ಯಗಳನ್ನು ಒಳಗೊಂಡಿವೆ.
ಆದರೆ ಕಾಲಕ್ರಮೇಣ ಧಾರ್ಮಿಕ ಆಚರಣೆಗಳಲ್ಲಿ ಮೂಲ ಆಶಯಗಳು ಮರೆಯಾಗುವ ಅಪಾಯವಿದೆ. ವ್ಯಕ್ತಿಕೇಂದ್ರಿತ ವ್ಯವಸ್ಥೆಗಳು ಬೆಳೆದು, ತತ್ವಗಳಿಗಿಂತ ವ್ಯಕ್ತಿಗಳ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ದೊರೆಯುವ ಸಂದರ್ಭಗಳೂ ಎದುರಾಗಿವೆ.
ಮಠಗಳು, ಪೀಠಗಳು ಮತ್ತು ಧಾರ್ಮಿಕ ಸಂಸ್ಥೆಗಳು ಬಸವಣ್ಣನವರ ವಚನಗಳ ನೈಜ ಆಶಯವನ್ನು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊಂದಿವೆ.
ಧರ್ಮದ ಹೆಸರಿನಲ್ಲಿ ವೈಯಕ್ತಿಕ ಸ್ವಾರ್ಥ ಸಾಧಿಸುವುದಕ್ಕಿಂತ ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ತತ್ವಗಳನ್ನು ಸಮಾಜದಲ್ಲಿ ಅನುಷ್ಠಾನಗೊಳಿಸಬೇಕು.
ಧರ್ಮದ ಬೆಳವಣಿಗೆ ಎಂದರೆ ಕಟ್ಟಡಗಳ ನಿರ್ಮಾಣ, ಮಠಗಳ ವಿಸ್ತರಣೆ ಅಥವಾ ವೈಭವದ ಕಾರ್ಯಕ್ರಮಗಳ ಆಯೋಜನೆ ಮಾತ್ರವಲ್ಲ. ಧರ್ಮದ ತತ್ವಗಳು ಜನರ ಬದುಕಿನಲ್ಲಿ ನೆಲೆಗೊಳ್ಳುವುದೇ ನಿಜವಾದ ಧರ್ಮದ ಬೆಳವಣಿಗೆ.


ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಕೊಡುಗೆ


ಶರಣರು ರಚಿಸಿದ ವಚನ ಸಾಹಿತ್ಯವು ಕನ್ನಡ ಭಾಷೆಯ ಅಮೂಲ್ಯ ಸಂಪತ್ತು ಮಾತ್ರವಲ್ಲ; ಅದು ಮಾನವೀಯ ಮೌಲ್ಯಗಳ ಮಹಾನ್ ಜ್ಞಾನಭಂಡಾರ.
ಈ ಸಾಹಿತ್ಯವನ್ನು ಸಂರಕ್ಷಿಸಿ, ಸಂಶೋಧಿಸಿ, ಪ್ರಕಟಿಸಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅನೇಕ ಮಹನೀಯರು ಅಪಾರ ಸೇವೆ ಸಲ್ಲಿಸಿದ್ದಾರೆ.
ವಚನ ಪಿತಾಮಹ ಫ. ಗು. ಹಳಕಟ್ಟಿಯವರು ವಚನ ಸಾಹಿತ್ಯದ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟರು.
ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮೀಜಿಯವರು ವಚನಗಳ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಪೂಜ್ಯ ಮಾತೆ ಮಹಾದೇವಿಯವರು ಬಸವತತ್ವದ ಪ್ರಚಾರ, ಪ್ರಸಾರ ಮತ್ತು ಲಿಂಗಾಯತ ಧರ್ಮದ ಚಿಂತನೆಗಳ ಪ್ರಸರಣಕ್ಕೆ ವಿಶೇಷ ಕೊಡುಗೆ ನೀಡಿದರು.
ಇವರೊಂದಿಗೆ ಅನೇಕ ಅನುಭಾವಿಗಳು, ವಿದ್ವಾಂಸರು, ಸಂಶೋಧಕರು ಮತ್ತು ಧಾರ್ಮಿಕ ಸಂಸ್ಥೆಗಳು ವಚನ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಿವೆ.
ಈ ಪರಂಪರೆಯನ್ನು ಮುಂದುವರಿಸುವುದು ಇಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ.


ಇಂದಿನ ಸಮಾಜಕ್ಕೆ ಚೆನ್ನಬಸವಣ್ಣನವರ ಸಂದೇಶವೇನು?


ಇಂದು ಸಮಾಜವು ವಿಜ್ಞಾನ, ತಂತ್ರಜ್ಞಾನ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಬಹಳ ದೂರ ಸಾಗಿದ್ದರೂ ಜಾತಿಭೇದ, ಅಸಮಾನತೆ, ಸ್ವಾರ್ಥ, ಭ್ರಷ್ಟಾಚಾರ, ಅಂಧಾಚರಣೆ ಮತ್ತು ಮಾನವೀಯ ಮೌಲ್ಯಗಳ ಕುಸಿತದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ.


ಇಂತಹ ಸಂದರ್ಭದಲ್ಲಿ ಗುರು ಚೆನ್ನಬಸವಣ್ಣನವರ ವಚನಗಳು ನಮಗೆ ದಾರಿದೀಪವಾಗಬಲ್ಲವು.


ಜಾತಿ-ಮತಗಳ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು.
ಇಷ್ಟಲಿಂಗ ತತ್ವದ ಮೂಲಕ ಆಧ್ಯಾತ್ಮಿಕ ಶುದ್ಧತೆಯನ್ನು ಬೆಳೆಸಿಕೊಳ್ಳಬೇಕು.
ಕಾಯಕ ಮತ್ತು ದಾಸೋಹವನ್ನು ಬದುಕಿನ ಭಾಗವಾಗಿಸಿಕೊಳ್ಳಬೇಕು.
ಮಕ್ಕಳಿಗೆ ಶರಣ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಕಲಿಸಬೇಕು.
ಗುರುಗಳ ಬೋಧನೆಗಳನ್ನು ಮೊದಲು ತಮ್ಮ ಬದುಕಿನಲ್ಲಿ ಅನುಷ್ಠಾನಗೊಳಿಸಬೇಕು.
ಸ್ವಾರ್ಥ, ದುರಾಸೆ ಮತ್ತು ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಲ್ಲಬೇಕು.
ವಚನ ಸಾಹಿತ್ಯವನ್ನು ಓದಿ, ಅರ್ಥೈಸಿ, ಮುಂದಿನ ಪೀಳಿಗೆಗೆ ತಲುಪಿಸಬೇಕು.
ಸಮಾರೋಪ: ಚೆನ್ನಬಸವಣ್ಣನವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ
ಗುರು ಬಸವಣ್ಣನವರು ಲಿಂಗಾಯತ ಧರ್ಮದ ಮೂಲ ತಾತ್ವಿಕ ನೆಲೆಯನ್ನು ರೂಪಿಸಿದ ಮಹಾನ್ ಕ್ರಾಂತಿಕಾರಿ. ಆ ತತ್ವಗಳನ್ನು ವ್ಯವಸ್ಥಿತವಾಗಿ ವಿವರಿಸಿ, ಧಾರ್ಮಿಕ ಆಚರಣೆಗಳು, ಆಚಾರ ಸಂಹಿತೆ ಮತ್ತು ಶೀಲಗಳ ಮೂಲಕ ಜನಜೀವನದಲ್ಲಿ ಅಳವಡಿಸುವಲ್ಲಿ ಗುರು ಚೆನ್ನಬಸವಣ್ಣನವರು ಮಹತ್ತರ ಪಾತ್ರ ವಹಿಸಿದ್ದಾರೆ.
ಅಕ್ಕನಾಗಮ್ಮನವರ ತಾಯ್ತನ, ಬಸವಣ್ಣನವರ ಮಾರ್ಗದರ್ಶನ, ಶರಣರ ಅನುಭಾವ ಮತ್ತು ತಮ್ಮ ಸ್ವಂತ ಜ್ಞಾನಾನುಭವಗಳ ಸಮನ್ವಯವೇ ಚೆನ್ನಬಸವಣ್ಣನವರ ವ್ಯಕ್ತಿತ್ವದ ವಿಶೇಷತೆ.
ಅವರು ಬದುಕಿದ್ದು ಅಲ್ಪಕಾಲವಾದರೂ ಅವರ ವಚನಗಳ ಸಂದೇಶ ಶಾಶ್ವತವಾಗಿದೆ. ವಚನ ಸಾಹಿತ್ಯದ ಸಂರಕ್ಷಣೆ, ಧರ್ಮದ ತಾತ್ವಿಕ ಬೆಳವಣಿಗೆ, ಗುರುಭಕ್ತಿ, ಇಷ್ಟಲಿಂಗ ನಿಷ್ಠೆ, ಸಾಮಾಜಿಕ ಸಮಾನತೆ ಮತ್ತು ನೈತಿಕ ಬದುಕಿನ ಕುರಿತು ಅವರು ನೀಡಿದ ಮಾರ್ಗದರ್ಶನ ಇಂದಿಗೂ ಪ್ರಸ್ತುತವಾಗಿದೆ.
ಅವರ ಜೀವನ ನಮಗೆ ಒಂದು ಮಹತ್ವದ ಪಾಠ ಕಲಿಸುತ್ತದೆ. ಧರ್ಮವನ್ನು ಕೇವಲ ಮಾತನಾಡುವುದರಿಂದ ಸಾಧ್ಯವಿಲ್ಲ; ಅದನ್ನು ಬದುಕಿನಲ್ಲಿ ಆಚರಿಸಬೇಕು. ವಚನಗಳನ್ನು ಓದುವುದಷ್ಟೇ ಸಾಲದು; ಅವುಗಳ ಆಶಯವನ್ನು ನಡೆ-ನುಡಿಗಳಲ್ಲಿ ತೋರಿಸಬೇಕು.
ಗುರು ಬಸವಣ್ಣನವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಗುರು ಚೆನ್ನಬಸವಣ್ಣನವರು ತೋರಿದ ದೃಢತೆ, ಧರ್ಮನಿಷ್ಠೆ ಮತ್ತು ತತ್ವಬದ್ಧತೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ.
ಗುರು ಚೆನ್ನಬಸವಣ್ಣನವರ ವಚನಗಳ ಬೆಳಕಿನಲ್ಲಿ ಲಿಂಗಾಯತ ಧರ್ಮದ ತತ್ವಗಳನ್ನು ಅರಿಯೋಣ, ಆಚರಿಸೋಣ, ಮುಂದಿನ ಪೀಳಿಗೆಗೆ ತಲುಪಿಸೋಣ. ಇದೇ ಆ ಮಹಾನ್ ಗುರುಗಳಿಗೆ ನಾವು ಸಲ್ಲಿಸುವ ನಿಜವಾದ ಗೌರವ.
ಕೂಡಲಚೆನ್ನಸಂಗಯ್ಯನ ಶರಣರ ತತ್ವಗಳು ಸರ್ವರ ಬದುಕಿಗೆ ಬೆಳಕಾಗಲಿ.

ಲೇಖನ: ಸಚ್ಚಿದಾನಂದ ಪ್ರಭು ಚಟ್ನಳ್ಳಿ

Total Views: 0
ಜಾಹೀರಾತು
Share This Article
Leave a Comment