

Youth Festival is a platform to encourage young talent: Manjunatha Gondabala

ಯುವಜನೋತ್ಸವ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ವೇದಿಕೆ: ಮಂಜುನಾಥ ಗೊಂಡಬಾಳ
ಕೊಪ್ಪಳ, ನವೆಂಬರ್ 04, (ಕರ್ನಾಟಕ ವಾರ್ತೆ): ಇಂದಿನ ಯುವಜನತೆ ತಮ್ಮಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಸಾಧನೆಯತ್ತ ಗಮನಹರಿಸಬೇಕು. ಯುವಜನೋತ್ಸವ ದಂತಹ ಕಾರ್ಯಕ್ರಮಗಳು ಪ್ರತಿಭೆಗಳಿಗೆ ಪ್ರಮುಖ ವೇದಿಕೆಯಾಗಿದ್ದು, ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ ಅವರು ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ (ನ.04) ಬುಧವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಮೈ ಭಾರತ್ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ (ರಿ), ಬೆಂಗಳೂರು, ಕೊಪ್ಪಳ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ಯುವಜನೋತ್ಸವ ಹಾಗೂ ವಿಕಸಿತ ಭಾರತ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ದಶಕಗಳ ಹಿಂದೆ ಯುವಜನೋತ್ಸವ ಕಾರ್ಯಕ್ರಮಗಳಿಗೆ ಯುವಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿತ್ತು. ಸಂಗೀತ, ಹಾರ್ಮೋನಿಯಂ ಸೇರಿದಂತೆ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಯುವಕರು ಆಸಕ್ತಿಯಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಇಂತಹ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅರಿತು ಇಂತಹ ಮಹತ್ವದ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಯುವಜನೋತ್ಸವಗಳು ಕೇವಲ ಸ್ಪರ್ಧೆಗಳಾಗಿ ಉಳಿಯದೆ, ಗ್ರಾಮೀಣ ಭಾಗದ ಪ್ರತಿಭಾವಂತ ಯುವಕ-ಯುವತಿಯರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತಮ್ಮಲ್ಲಿರುವ ಕಲೆ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಬೇಕು ಎಂದು ಕರೆ ನೀಡಿದರು.
ರಾಜ್ಯ ಸರ್ಕಾರವು ಯುವಜನರನ್ನು ಸಂಘಟಿಸಿ ಏಕತೆ, ಸಹೋದರತೆ ಹಾಗೂ ರಾಷ್ಟç ನಿರ್ಮಾಣದ ಆಶಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಯುವಕರು ಇಂತಹ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಯುವಶಕ್ತಿಯ ಸದ್ಬಳಕೆಯಿಂದ ಮಾತ್ರ ಸಮರ್ಥ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಬಾಲಾಜಿ ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಜಿಲ್ಲೆಯ ಹೆಮ್ಮೆಯ ಜಾನಪದ ಕಲಾವಿದರಾದ 2026-27ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಾವಲಸಾಬ ಅತ್ತಾರ ಹಾಗೂ ಶಿವಲಿಂಗಪ್ಪ ಎಂ. ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ ಬಿ. ಜಾಬಗೌಡರ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ನಶಾಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಹಾಗೂ ಇಲಾಖೆಯು ಕಲ್ಪಿಸುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು ಎಂದು ತಿಳಿಸಿದರು.
ಯುವಜನೋತ್ಸವ ಕಾರ್ಯಕ್ರಮದ ನಿಮಿತ್ತ ಯುವಕ ಯುವತಿಯರಿಗೆ ಜಾನಪದ ಗೀತೆ, ಜಾನಪದ ನೃತ್ಯ, ನಾಟಕ, ಚಿತ್ರಕಲೆ, ಕವಿತೆ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಶಿಕ್ಷಕರಾದ ಬಸವರಾಜ ಹನಮಸಾಗರ ರವರು ನಿರೂಪಿಸಿದರು.
ಈ ಸಂದರ್ಭದಲ್ಲಿ ಮೈ ಭಾರತ್ ಕೊಪ್ಪಳ ಜಿಲ್ಲಾ ಯುವ ಅಧಿಕಾರಿಗಳಾದ ಮೇಘ ಜಿ.ಕೆ., ರವಿಕಾಂತ ಅಂಗಡಿ ಶಿವಲಿಂಗಪ್ಪ ಕೊಟ್ನೇಕಲ್, ಪತ್ರಕರ್ತರಾದ ಜಿ.ಎಸ್.ಗೋನಾಳ, ಸಿರಾಜ್ ಬಿಸರಹಳ್ಳಿ, ಪ್ರಮೋದ್ ಕುಲಕರ್ಣಿ, ಶರಣಬಸವ ಬಂಡಿಹಾಳ, ಲಲಿತಮ್ಮ, ಶರಣಬಸಪ್ಪ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.



