

"Health is a greater wealth than a fortune of crores: Sharanabasappa Danakai"
“ಕೋಟಿ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ: ಶರಣಬಸಪ್ಪ ದಾನಕೈ”
ಬಲ್ದೋಟ ತೊಲಗಿಸಿ–ಕೊಪ್ಪಳ ಉಳಿಸಿ ಹೋರಾಟಕ್ಕೆ ಬೆಂಬಲ; ಅ.31ರಂದು ಬೃಹತ್ ಜನಾಂದೋಲನ

ಕೊಪ್ಪಳ: ಕೋಟಿ ಕೋಟಿ ರೂಪಾಯಿ ಸಂಪತ್ತಿಗಿಂತ ಜನರ ಆರೋಗ್ಯವೇ ಅತ್ಯಂತ ಮುಖ್ಯ. ಪರಿಶುದ್ಧ ಗಾಳಿ, ಶುದ್ಧ ನೀರು, ಬೆಳಕು ಹಾಗೂ ಆರೋಗ್ಯಕರ ಪರಿಸರ ಪ್ರತಿಯೊಬ್ಬರಿಗೂ ದೊರೆಯಬೇಕು. ಈ ನಿಟ್ಟಿನಲ್ಲಿ ಕೈಗಾರಿಕಾ ಮಾಲಿನ್ಯ ನಿಯಂತ್ರಣಕ್ಕೆ ಆಗ್ರಹಿಸಿ ಅ.31ರಂದು ನಡೆಯಲಿರುವ ಕೊಪ್ಪಳ ಬಂದ್ ಹಾಗೂ ಬೃಹತ್ ಜನಾಂದೋಲನದಲ್ಲಿ ರೈತರು, ಜನಪರ ಸಂಘಟನೆಗಳು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವಾಸುದೇವ ಮೇಟಿ ಬಣದ ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಮನವಿ ಮಾಡಿದ್ದಾರೆ.
“ಬಲ್ದೋಟ ತೊಲಗಿಸಿ–ಕೊಪ್ಪಳ ಉಳಿಸಿ, ಕೈಗಾರಿಕಾ ಮಾಲಿನ್ಯ ನಿಯಂತ್ರಿಸಿ–ಜನರ ಆರೋಗ್ಯ ರಕ್ಷಿಸಿ” ಎಂಬ ಸಂದೇಶದೊಂದಿಗೆ ಕಳೆದ ಒಂದು ವರ್ಷದಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಅ.31ರಂದು ಬೃಹತ್ ಜನಾಂದೋಲನ ಹಾಗೂ ಕೊಪ್ಪಳ ಬಂದ್ ಹಮ್ಮಿಕೊಳ್ಳಲಾಗಿದೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಹಾಗೂ ಮಲ್ಲಿಕಾರ್ಜುನ ಗೋನಾಳ ಸೇರಿದಂತೆ ವಿವಿಧ ರೈತಪರ, ಜನಪರ, ದಲಿತಪರ ಹಾಗೂ ಪರಿಸರ ಪರ ಸಂಘಟನೆಗಳ ಮುಖಂಡರು ಹೋರಾಟಕ್ಕೆ ನೇತೃತ್ವ ವಹಿಸಿದ್ದಾರೆ.
ಗವಿಮಠದಿಂದ ಮೆರವಣಿಗೆ
ಅ.31ರಂದು ಬೆಳಿಗ್ಗೆ 9.30ಕ್ಕೆ ಕೊಪ್ಪಳದ ಗವಿಮಠದಿಂದ ಬೃಹತ್ ಮೆರವಣಿಗೆ ಆರಂಭವಾಗಲಿದೆ. ಬೆಳಿಗ್ಗೆ 8 ಗಂಟೆಯಿಂದ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಠದಲ್ಲಿ ಹೋರಾಟಕ್ಕೆ ಆಗಮಿಸುವವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆಯು ನಗರದ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ನಗರಸಭೆ ಸಮೀಪ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು
ಬಲ್ದೋಟ ಕೈಗಾರಿಕಾ ವಿಸ್ತರಣೆಯನ್ನು ತಡೆಹಿಡಿಯಬೇಕು.
ಕೊಪ್ಪಳ ಜಿಲ್ಲೆಯ ಕೈಗಾರಿಕಾ ಮಾಲಿನ್ಯವನ್ನು ನಿಯಂತ್ರಿಸಬೇಕು.
ಹಿರೇಬಗನಾಳ, ಗಿಣಗೇರಿ, ಹಳೆ ಕನಕಪುರ, ಕಾಸನಕಿಂಡಿ ಸೇರಿದಂತೆ 22 ಬಾಧಿತ ಗ್ರಾಮಗಳ ಜನರ ಆರೋಗ್ಯದ ಕುರಿತು ಸ್ವತಂತ್ರ ಸಮೀಕ್ಷೆ ನಡೆಸಬೇಕು.
ಹೊಸ ಕೈಗಾರಿಕೆಗಳ ವಿಸ್ತರಣೆಗೆ ಮುನ್ನ ಸಮಗ್ರ ಪರಿಸರ ಹಾಗೂ ಆರೋಗ್ಯ ಅಧ್ಯಯನ ನಡೆಸಬೇಕು.
ಜನರು, ಜಾನುವಾರುಗಳು, ಪಶು–ಪಕ್ಷಿಗಳು ಹಾಗೂ ಮುಂದಿನ ಪೀಳಿಗೆಯ ಬದುಕನ್ನು ರಕ್ಷಿಸಬೇಕು.
“ಈ ಹೋರಾಟ ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ಜನ–ಜಾನುವಾರುಗಳ ಆರೋಗ್ಯಕ್ಕಾಗಿ, ಜೀವಸಂಕುಲದ ರಕ್ಷಣೆಗಾಗಿ, ಶುದ್ಧ ಗಾಳಿ ಮತ್ತು ನೀರಿಗಾಗಿ ಹಾಗೂ ಪರಿಸರ ಸಂರಕ್ಷಣೆಗಾಗಿ ನಡೆಯುತ್ತಿದೆ. ಒಂದು ದಿನದ ಈ ಜನಾಂದೋಲನ ಮುಂದಿನ ಪೀಳಿಗೆಯ ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಆದ್ದರಿಂದ ಎಲ್ಲರೂ ಒಂದಾಗಿ ಧ್ವನಿ ಎತ್ತಿ ಹೋರಾಟವನ್ನು ಯಶಸ್ವಿಗೊಳಿಸಬೇಕು” ಎಂದು ಶರಣಬಸಪ್ಪ ದಾನಕೈ ಮನವಿ ಮಾಡಿದ್ದಾರೆ.
ಬಲ್ದೋಟ ತೊಲಗಿಸಿ–ಕೊಪ್ಪಳ ಉಳಿಸಿ!
ಮಾಲಿನ್ಯ ಮುಕ್ತ ಕೊಪ್ಪಳ–ಆರೋಗ್ಯವಂತ ಕೊಪ್ಪಳ ನಮ್ಮದಾಗಲಿ ಎಂದು ಅವರು ಕರೆ ನೀಡಿದ್ದಾರೆ.
.



