ದೇವಾಲಯ ಜೀರ್ಣೋದ್ಧಾರ ಅನುದಾನ ದುರ್ಬಳಕೆ ಆರೋಪ: ತನಿಖೆ ವಿಳಂಬಕ್ಕೆ ಆಕ್ರೋಶ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Allegations of Misuse of Temple Renovation Funds: Outrage Over Delay in Investigation

ದೇವಾಲಯ ಜೀರ್ಣೋದ್ಧಾರ ಅನುದಾನ ದುರ್ಬಳಕೆ ಆರೋಪ: ತನಿಖೆ ವಿಳಂಬಕ್ಕೆ ಆಕ್ರೋಶ

ತಿಂಗಳು ಕಳೆದರೂ ತನಿಖೆ ಆರಂಭವಾಗದೆ ಸಾರ್ವಜನಿಕ ಆತಂಕ; ಪ್ರಕರಣ ದಾರಿ ತಪ್ಪಿಸುವ ಯತ್ನವೇ? ಎಂದು ಬಸವರಾಜ ಮ್ಯಾಗಳಮನಿ ಪ್ರಶ್ನೆ

ಜಾಹೀರಾತು

ಗಂಗಾವತಿ, ಅ.7: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಡಿ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಬಿಡುಗಡೆಯಾದ ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆಗೆ ಅಧಿಕಾರಿಗಳನ್ನು ನಿಯೋಜಿಸಿ ತಿಂಗಳು ಕಳೆದರೂ ತನಿಖೆ ಆರಂಭವಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆರೋಪಿಸಿದ್ದಾರೆ.

ಅನುದಾನ ದುರ್ಬಳಕೆಯ ಕುರಿತು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾದ ಕೂಡಲೇ ನಮ್ಮ ಸಂಘಟನೆಯ ವತಿಯಿಂದ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು. ಇದರ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದರೂ, ತಿಂಗಳು ಕಳೆದರೂ ತನಿಖೆ ಆರಂಭಿಸದಿರುವುದು ಆತಂಕ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಅನುದಾನವನ್ನು ಎತ್ತುವಳಿ ಮಾಡಿಕೊಂಡಿರುವವರು ದೇವಾಲಯಗಳ ದುರಸ್ತಿ ಕಾರ್ಯಗಳನ್ನು ಕೈಗೊಂಡು ಪ್ರಕರಣವನ್ನು ಮುಚ್ಚಿಹಾಕಲು ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಆದ್ದರಿಂದ ತನಿಖೆಗೆ ನಿಯೋಜಿಸಿರುವ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ, ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಮ್ಯಾಗಳಮನಿ ಒತ್ತಾಯಿಸಿದ್ದಾರೆ.

ಅನುದಾನ ದುರ್ಬಳಕೆಯ ಪ್ರಕರಣವನ್ನು ಮುಚ್ಚಿಹಾಕಲು ಯಾವುದೇ ಪ್ರಯತ್ನ ನಡೆದರೆ, ಅದರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

Total Views: 0
ಜಾಹೀರಾತು
Share This Article